ಶಿರಾ ಉಪ ಚುನಾವಣೆಗೆ ಕಾಂಗ್ರೆಸ್ ನಿಂದ ಟಿ.ಬಿ.ಜಯಚಂದ್ರ ಹೆಸರು ಫೈನಲ್

ಶಿರಾ ಉಪಚುನಾವಣೆಗೆ ಕೊನೆಗೂ ಕಾಂಗ್ರೆಸ್ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಅಖೈರುಗೊಳಿಸಿ ಆಯ್ಕೆ ಪ್ರಕ್ರಿಯೆ ಅಂತಿಮಗೊಳಿಸಿದೆ. 
ಟಿ ಬಿ ಜಯಚಂದ್ರ
ಟಿ ಬಿ ಜಯಚಂದ್ರ

ಶಿರಾ: ಶಿರಾ ಉಪಚುನಾವಣೆಗೆ ಕೊನೆಗೂ ಕಾಂಗ್ರೆಸ್ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಅಖೈರುಗೊಳಿಸಿ ಆಯ್ಕೆ ಪ್ರಕ್ರಿಯೆ ಅಂತಿಮಗೊಳಿಸಿದೆ. ಆ ಮೂಲಕ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಮಾಧಾನಗೊಳಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ಬುಧವಾರದಿಂದಲೇ ಕಾಂಗ್ರೆಸ್ ಕ್ಷೇತ್ರದಲ್ಲಿ ಪ್ರಚಾರಕ್ಕೆ ಧುಮುಕಲಿದ್ದು, ಚುನಾವಣೆಯ ಜವಾಬ್ದಾರಿಯನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ ತುಮಕೂರು ಕಾಂಗ್ರೆಸ್ ಮುಖಂಡ ಡಾ.ಜಿ.ಪರಮೇಶ್ವರ್ ಗೆ ವಹಿಸಲಾಗಿದೆ. ಟಿ.ಬಿ.ಜಯಚಂದ್ರ ಪರ ರಾಜಣ್ಣ ಪ್ರಚಾರಕ್ಕೆ ಇಳಿಯುವಂತೆ ಕೆಪಿಸಿಸಿ ಸೂಚಿಸಿದೆ.

ಶಿರಾ ಉಪಚುನಾವಣೆಗೆ ಟಿಕೆಟ್ ಗಾಗಿ ಟಿ.ಬಿ.ಜಯಚಂದ್ರ ಮತ್ತು ಕೆ.ಎನ್.ರಾಜಣ್ಣ ನಡುವೆ ಪೈಪೋಟಿ ಏರ್ಪಟ್ಟಿತ್ತು. ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಟಿಬಿಜೆ ಪರ ವಕಾಲತ್ತು ವಹಿಸಿದ್ದು, ಕೆ.ಎನ್.ರಾಜಣ್ಣ ಬೇಸರಕ್ಕೆ ಕಾರಣವಾಗಿತ್ತು. ಹೀಗಾಗಿ ಜೆಡಿಯು ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಬಂಡಾಯದ ಸೂಚನೆಯನ್ನು ರಾಜಣ್ಣ ರವಾನಿಸಿದ್ದರು. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜಣ್ಣ ಅವರನ್ನು ಮನವೊಲಿಸಲೆತ್ನಿಸಿದ್ದರಾದರೂ ಸರಿಬಂದಿರಲಿಲ್ಲ. ಆದ್ದರಿಂದ ಟಿಕೆಟ್ ಜವಾಬ್ದಾರಿ ಹಾಗೂ ರಾಜಣ್ಣ ಮನವೊಲಿಸುವ ಜವಾಬ್ದಾರಿಯನ್ನು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೆಗಲಿಗೇರಿಸಿ ಅವರ ಸಮ್ಮುಖದಲ್ಲಿ ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಶಿರಾ ಮುಖಂಡರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆ ನಡೆಸಿದರು.

ಸಭೆ ಬಳಿಕ ಡಿ.ಕೆ.ಶಿವಕುಮಾರ್ ಮಾತನಾಡಿ, ಶಿರಾ ಚುನಾವಣೆ ಸಂಬಂಧ ತುಮಕೂರು ಜಿಲ್ಲೆಯ ನಾಯಕರ ಜೊತೆ ಸಭೆ ನಡೆಸಿದ್ದು, ಪಕ್ಷದ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ ಅವರನ್ನು ಕಣಕ್ಕಿಳಿಸಲಿದ್ದು, ಉಪಚುನಾವಣೆಯನ್ನು ಪರಮೇಶ್ವರ್ ನೇತೃತ್ವತ್ವದಲ್ಲಿ ನಡೆಸಲಾಗುವುದು. ರಾಜಣ್ಣ ಕೋಚೇರ್ಮನ್ ಆಗಿ ಸಾಥ್ ನೀಡಲಿದ್ದಾರೆ. ಎಲ್ಲರೂಒಟ್ಟಿಗೆ ಎಲ್ಲರೂ ಸೇರಿಯೇ ಚುನಾವಣೆ ಎದುರಿಸುತ್ತೇವೆ ಎಂದರು.

ಸಭೆಯಲ್ಲಿ ರಾಜಣ್ಣ ಸಹ ಟಿ.ಬಿ.ಜಯಚಂದ್ರ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದು, ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಭೆಯ ನಿರ್ಧಾರವನ್ನು ಎಐಸಿಸಿ ವರಿಷ್ಠರಿಗೆ ಕಳುಹಿಸಿಕೊಡಲಾಗುವುದು. ಇಂದಿನಿಂದಲೇ ಚುನಾವಣೆ ಕಾರ್ಯ ಪ್ರಾರಂಭ ಮಾಡಲಾಗುವುದು. ಕ್ಷೇತ್ರದ ಹಿತದೃಷ್ಟಿಯಿಂದ ಎಲ್ಲರೂ ಉಪಚುನಾವಣೆಯಲ್ಲಿ ದುಡಿಯುವುದಾಗಿ ಹೇಳಿದರು. ಕೆ.ಎನ್.ರಾಜಣ್ಣ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರು ಟಿ.ಬಿ.ಜಯಚಂದ್ರ ಅವರ ಹೆಸರನ್ನು ಸೂಚಿಸಿದ್ದಾರೆ. ಅಧ್ಯಕ್ಷರ ಅಭಿಪ್ರಾಯಕ್ಕೆ ಎಲ್ಲರೂ ಒಪ್ಪಿಗೆ ನೀಡುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com