ನಾನ್ಯಾಕೆ ಮುಖ್ಯಮಂತ್ರಿ ಆಕಾಂಕ್ಷಿಯಾಗಬಾರದು?: ಶಾಸಕ ಬಸನಗೌಡ ಪಾಟೀಲ ಯತ್ನಾಳ್
ವಿಜಯಪುರ: ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆಗಳು ನನ್ನಲ್ಲಿವೆ. ನಾನ್ಯಾಕೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಬಾಹದು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿರುವ ಅವರು, ಸಿಎಂ ಆಕಾಂಕ್ಷಿಗಳ ಪಟ್ಟಿಯಲ್ಲಿ ನನ್ನ ಹೆಸರು ಏಕೆ ಇರಬಾರದು? ನಾನು ಸಮರ್ಥ ಹಾಗೂ ಎಲ್ಲಾ ರೀತಿಯಿಂದಲೂ ಅರ್ಹನಾಗಿದ್ದೇನೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಹೈಕಮಾಂಡ್ ಅವಕಾಶ ನೀಡಿದ್ದೇ ಆದರೆ, ಕರ್ನಾಟಕದಲ್ಲಿ 150 ಸ್ಥಾನಗಳನ್ನು ಗೆಲ್ಲಿಸುತ್ತೇನೆಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಗೌರವ ತರುವ ಕೆಲಸ ಮಾಡುತ್ತೇನೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ರೀತಿಯಲ್ಲಿ ಉತ್ತಮ ಆಡಳಿತವನ್ನು ಕರ್ನಾಟಕದಲ್ಲಿ ನೀಡುವೆ. ವಿಜಯಪುರ ಜಿಲ್ಲೆಯವನಾದ ನಾನು ಮುಖ್ಯಮಂತ್ರಿಯಾಗಲು ಸಮರ್ಥನಾಗಿದ್ದೇನೆಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಯಾಗಲು ಉತ್ತರ ಕರ್ನಾಟಕದವರೂ ಸಮರ್ಥರಿದ್ದಾರೆ. ಹಾಗಾಗಿ ನಾನು ಸಿಎಂ ಹುದ್ದೆ ಆಕಾಂಕ್ಷಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಪುನರುಚ್ಚರಿಸಿದರು. ನಾನೇನು ಭೂ ಹಗರಣ ಮಾಡಿಲ್ಲ. ಭ್ರಷ್ಟಾಚಾರ ಕೂಡ ಮಾಡಿಲ್ಲ. ಹಾಗಾಗಿ ನಾನು ಸಿಎಂ ಆಗುವ ಎಲ್ಲಾ ಅರ್ಹತೆ ಪಡೆದಿದ್ದೇನೆಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ