ಅನುದಾನ ಸಿಗಲಿಲ್ಲವಾದರೆ ಬೇರೆ ಯೋಚನೆ ಮಾಡಬೇಕಾಗುತ್ತದೆ: ತಮ್ಮದೇ ಸರ್ಕಾರಕ್ಕೆ ಎಂಪಿ ಕುಮಾರಸ್ವಾಮಿ ಎಚ್ಚರಿಕೆ

ಸಮಸ್ಯೆಗಳನ್ನು ಪರಿಹರಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದು, ಈ ಬಾರಿಯೂ ಸರ್ಕಾರದಿಂದ ಎನ್ ಡಿಆರ್ ಎಫ್ ಅನುದಾನ ಸಿಗಲಿಲ್ಲವಾದರೆ ಬೇರೆ ತರಹ ಯೋಚನೆ ಮಾಡಬೇಕಾಗುತ್ತದೆ...
ಎಂಪಿ ಕುಮಾರಸ್ವಾಮಿ
ಎಂಪಿ ಕುಮಾರಸ್ವಾಮಿ

ಬೆಂಗಳೂರು: ಸಮಸ್ಯೆಗಳನ್ನು ಪರಿಹರಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದು, ಈ ಬಾರಿಯೂ ಸರ್ಕಾರದಿಂದ ಎನ್ ಡಿಆರ್ ಎಫ್ ಅನುದಾನ ಸಿಗಲಿಲ್ಲವಾದರೆ ಬೇರೆ ತರಹ ಯೋಚನೆ ಮಾಡಬೇಕಾಗುತ್ತದೆ ಎಂದು ತಮ್ಮದೇ ಸರ್ಕಾರಕ್ಕೆ ಮೂಡಿಗೇರಿ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮತ್ತೊಮ್ಮೆ ಎಚ್ಚರಿಕೆ ರವಾನಿಸಿದ್ದಾರೆ.

ಗುರುವಾರ ಅನುದಾನ ತಾರತಮ್ಯ ಖಂಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಏಕಾಂಗಿ ಧರಣಿ ನಡೆಸಿದ್ದಲ್ಲದೇ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾಗುವ ಮೂಲಕ ಸರ್ಕಾರಕ್ಕೆ ಮಾರ್ಮಿಕ ಸಂದೇಶವೊಂದನ್ನು ರವಾನಿಸಿದ್ದ ಎಂ.ಪಿ.ಕುಮಾರಸ್ವಾಮಿ, ಈಗ ಮತ್ತೊಮ್ಮೆ ಸರ್ಕಾರವನ್ನು ಎಚ್ಚರಿಸಿ ತಾವು ಪ್ರತಿನಿಧಿಸುತ್ತಿರುವ ಮೀಸಲು ಕ್ಷೇತ್ರಕ್ಕೆ ಸಮರ್ಪಕ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡದೇ ಹೋದಲ್ಲಿ ಬೇರೆ ತರಹದ್ದೇ ಯೋಚನೆ ಮಾಡೇ ಮಾಡ್ತೇನೆ ಎಂದಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ನನಗೆ ಭರವಸೆ ನೀಡಿದ್ದಾರೆ. ಅವರು ಅಧಿಕಾರಕ್ಕೆ ಬಂದು ಸ್ವಲ್ಪ ದಿನವಾದ್ದರಿಂದ ಇನ್ನೂ ಕೆಲವು ದಿನಗಳಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದ್ದಾರೆ. ಇಂದು ಮಧ್ಯಾಹ್ನ ಮೂರು ಗಂಟೆಗೆ ಸಿಎಂ ಭೇಟಿಗೆ ಸಮಯ ನಿಗದಿಯಾಗಿದೆ. ನನ್ನ ಕ್ಷೇತ್ರದಲ್ಲಿ ಕಳೆದ ಬಾರಿ ಪ್ರವಾಹವಾದ್ದರಿಂದ ಆರು ಜನ ಕೊಚ್ಚಿಹೋಗಿದ್ದು, ಸಾಕಷ್ಟು ಮನೆಗಳು ಹಾನಿ ಆಗಿದ್ದವು. ಕ್ಷೇತ್ರದ ಜನ ನನ್ನ ಮೇಲೆ ದಂಗೆ ಎದ್ದೇಳುತ್ತಾರೆ. ಕ್ಷೇತ್ರಕ್ಕೆ ಸಿಎಂ ಬಂದಿದ್ದರು. ಸಚಿವ ಆರ್. ಅಶೋಕ್ ಬಂದಿದ್ದರೂ ಸಹ ಸಮಸ್ಯೆ ಬಗೆಹರಿದಿಲ್ಲ ಎಂದಾದರೇ ಜನ ಪ್ರಶ್ನೆ ಮಾಡುತ್ತಾರೆ ಎಂದು ಸೂಚ್ಯವಾಗಿ ಹೇಳಿದರು.

ತಮ್ಮ ಕ್ಷೇತ್ರದಲ್ಲಿ ಮಳೆ ನಷ್ಟ ಸಂಬಂಧ ಪರಿವೀಕ್ಷಣೆ ಮಾಹಿತಿ ಸಂಗ್ರಹಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ,ಹಾಗೂ ಮಾಜಿ ಸಿಎಂ ಹೆಚ್ ಡಿ ಕೆ ಕ್ಷೇತ್ರದ ಪ್ರವಾಸ ಮಾಡುವುದಾಗಿ ಹೇಳಿದ್ದಾರೆ. ಅವರೆಲ್ಲ ಬಂದು ಹೋದರೆ, ಶಾಸಕ ಎಂ.ಪಿ ಕುಮಾರಸ್ವಾಮಿ ಕೆಲಸ ಮಾಡಿಲ್ಲ ಎಂದು ಆರೋಪ ಮಾಡುತ್ತಾರೆ ಎಂದರು.

ಸಿದ್ದರಾಮಯ್ಯ ಭೇಟಿಯಾಗಿದ್ದು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಎಂಬ ಮಾತಿಗೆ ಸ್ಪಷ್ಟನೆ ನೀಡಿದ ಎಂ.ಪಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಹುಟ್ಟು ಹಬ್ಬವಿದ್ದರಿಂದ ಪ್ರತಿವರ್ಷದಂತೆ ಅವರಿಗೆ ಶುಭಕೋರಲು ಹೋಗಿದ್ದೆ. ಸಿದ್ದರಾಮಯ್ಯ ಎಂದರೆ ನನಗೆ ತುಂಬ ಇಷ್ಟ. ಅಹಿಂದ ನಾಯಕ ಎಂದರೆ ಅದು ಸಿದ್ದರಾಮಯ್ಯ ಒಬ್ಬರೇ ಮಾತ್ರ. ಹೀಗಾಗಿ ಅವರನ್ನು ಗೌರವಿಸಬೇಕು ಅದಕ್ಕಾಗಿ ಹೋಗಿದ್ದೆ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹಾಗೂ ಎಂಪಿಕೆ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಸಿ.ಟಿ ರವಿ ಅವರಿಗೂ ನನಗೂ ಎಂದಿಗೂ ಸಂಬಂಧ ಚೆನ್ನಾಗಿಲ್ಲ. ರಾಜಕೀಯಕ್ಕೆ ಬಂದಾಗಿಂದಲೂ ಚೆನ್ನಾಗಿಲ್ಲ. ಮತದಾರರ ಜೊತೆ ನಾನು ಚೆನ್ನಾಗಿದ್ದೇನೆ. ಬೇರೆಯವರ ಜೊತೆಗೂ ಭಿನ್ನಾಭಿಪ್ರಾಯ ಇರಬಹುದು. ನಾನೇನು ದೇವರಲ್ಲ.. ಆದರೆ ನನ್ನ ನಾಯಕತ್ವ ಸಾಬೀತಾಗಿದೆ. ನಾನು ನಾಯಕತ್ವ ವಹಿಸಿದ ಯಾವುದೇ ಚುನಾವಣೆಗಳು ಸೋತಿಲ್ಲ. ಕೆಪಿಸಿಸಿ ಅಧ್ಯಕ್ಷರನ್ನು ನಾನು ಸಂಪರ್ಕ ಮಾಡಿಲ್ಲ. ನಾನು ಕ್ಷೇತ್ರದ ಅನುದಾನಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಸಿಎಂ ಅನುದಾನ ಕೊಡುವುದಾಗಿ ಭರವಸೆ ನೀಡಿದ್ದಾರೆ. ಅನುದಾನ ಕೊಡಲಿಲ್ಲ ಎಂದರೆ, ನನಗೆ ಸರಿಯಾಗಿ ಸ್ಪಂದನೆ ಸಿಗದಿದ್ದರೆ ಮುಂದೆ ನನ್ನ ತೀರ್ಮಾನ ನಾನು ಮಾಡುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com