ಅಂಬಿ ಸ್ಮಾರಕ ವಿಷಯ ಮಾತಾಡಲು ಹೋಗಿದ್ದ ಹಿರಿಯ ಕಲಾವಿದರನ್ನು ಅವಮಾನಿಸಿ ಕಳಿಸಿದ್ದರು: ಹೆಚ್ ಡಿಕೆ ವಿರುದ್ಧ ಸುಮಲತಾ ಆರೋಪ

ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮತ್ತು ಜೆಡಿಎಸ್ ದಳಪತಿಗಳ ನಡುವಿನ ಮಾತಿನ ಸಮರ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ, ತೀರಾ ವೈಯಕ್ತಿಕ ಮಟ್ಟಕ್ಕೆ ಹೋಗುತ್ತಿದೆ, 2018ರಲ್ಲಿ ಅಂಬರೀಷ್ ನಿಧನವಾದಾಗಿನಿಂದ ಹಿಡಿದು 2019ರ ಲೋಕಸಭೆ ಚುನಾವಣೆಯಲ್ಲಿನ ಸಮರದಿಂದ ಇಂದು ಕೂಡ ಮುಂದುವರಿದಿದೆ. 
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್
Updated on

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮತ್ತು ಜೆಡಿಎಸ್ ದಳಪತಿಗಳ ನಡುವಿನ ಮಾತಿನ ಸಮರ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ, ತೀರಾ ವೈಯಕ್ತಿಕ ಮಟ್ಟಕ್ಕೆ ಹೋಗುತ್ತಿದೆ, 2018ರಲ್ಲಿ ಅಂಬರೀಷ್ ನಿಧನವಾದಾಗಿನಿಂದ ಹಿಡಿದು 2019ರ ಲೋಕಸಭೆ ಚುನಾವಣೆಯಲ್ಲಿನ ಸಮರದಿಂದ ಇಂದು ಕೂಡ ಮುಂದುವರಿದಿದೆ. 

ಜೆಡಿಎಸ್ ನಾಯಕರು ತಮ್ಮ ನಡವಳಿಕೆ, ಸಂಸ್ಕಾರರಹಿತ ಮಾತುಗಳಿಂದ ಜನರ ಮುಂದೆ ಸಣ್ಣವರಾಗುತ್ತಿದ್ದಾರೆ. ಅವರ ನಿಜಸ್ವರೂಪ, ವ್ಯಕ್ತಿತ್ವ ಮಂಡ್ಯ ಜನತೆಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಅದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಎದುರಿಸಬೇಕಾಗುತ್ತದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ತಮ್ಮ ನಿವಾಸದ ಮುಂದೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಂಬರೀಷ್ ಅವರ ಹೆಸರು ಹೇಳಲೂ ಇವರಿಗೆ ಯೋಗ್ಯತೆಯಿಲ್ಲ. ಅವರ ಹೆಸರನ್ನು ಪದೇ ಪದೇ ಪ್ರಸ್ತಾಪ ಮಾಡಿ ರಾಜಕಾರಣ ಮಾಡುತ್ತಿರುವವರು ಯಾರು, ನಾನು ಅಂಬರೀಷ್ ಅವರ ಹೆಸರಿನ ಮೇಲೆ, ಅನುಕಂಪದ ಆಧಾರದ ಮೇಲೆ ಮಂಡ್ಯದಲ್ಲಿ ಗೆದ್ದೆ ಅನ್ನುತ್ತಿದ್ದಾರೆ, ಜೆಡಿಎಸ್ ನಾಯಕರೇಕೆ ಅಂಬರೀಷ್ ಅವರ ಹೆಸರನ್ನು ಪ್ರಸ್ತಾಪಿಸಬೇಕು ಎಂದು ಪ್ರಶ್ನಿಸಿದರು.

ಅಂಬರೀಷ್ ಅವರು ಇದ್ದಾಗಲೇ ಕೆಆರ್ ಎಸ್ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು ಎನ್ನುತ್ತಾರೆ, ಅದಕ್ಕೆ ಅವರ ಬಳಿ ಸಾಕ್ಷಿಗಳೇನಿದೆ, ಇದ್ದರೆ ತೋರಿಸಲಿ, ಅದಲ್ಲದೆ ಅವತ್ತು ಅಕ್ರಮ ಗಣಿಗಾರಿಕೆ ನಡೆದಿದ್ದರೆ ಅಂದು ಚಕಾರವೆತ್ತದವರು ಇಂದೇಕೆ ಅಂಬರೀಷ್ ಅವರು ಇಲ್ಲದಿರುವಾಗ ಹೇಳುತ್ತಿದ್ದಾರೆ ಎಂದು ಸುಮಲತಾ ಅಂಬರೀಷ್ ಕೇಳಿದರು.

ಅಂಬರೀಷ್ ಮೃತದೇಹ ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ಒತ್ತಾಯಿಸಿದ್ದೇ ನಾವು: ಮಂಡ್ಯಕ್ಕೆ ಅಂಬರೀಷ್ ಅವರು ಪ್ರಾಣಬಿಟ್ಟಿದ್ದರು, ಅಪಾರ ಅಭಿಮಾನಿಗಳಿದ್ದರು, ಮಂಡ್ಯದ ಜನ ಕೂಡ ಅವರಿಗೆ ಅಷ್ಟೇ ಪ್ರೀತಿ, ಗೌರವ ತೋರಿಸಿದ್ದಾರೆ, ಅವರು ಮೃತಪಟ್ಟಾಗ ಮೃತದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ನನ್ನ ಮಗ ಅಭಿಷೇಕ್ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಕೇಳಿಕೊಂಡನು, ಆಗ ಅವರು ಬಸ್ ವ್ಯವಸ್ಥೆ ಮಾಡುತ್ತೇನೆ, ಮಂಡ್ಯದಿಂದ ಜನರನ್ನು ಇಲ್ಲಿಗೆ ಕರೆಸಿ ಅಂದರು, ಅದಕ್ಕೆ ನಮ್ಮ ಕುಟುಂಬದವರು ಒಪ್ಪದ ಕಾರಣ ಕೊನೆಗೆ ಮಂಡ್ಯಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಲು ಒಪ್ಪಿಗೆ ನೀಡಿದರು, ಇದಕ್ಕೆ ಮಾಧ್ಯಮಗಳ ವಿಡಿಯೊ-ಆಡಿಯೊ ಕ್ಲಿಪ್ಪಿಂಗ್ ಸಾಕ್ಷಿಯೇ ಇದೆ ಎಂದರು.

ಅಂಬಿ ಸ್ಮಾರಕ ನಿರ್ಮಾಣಕ್ಕೆ ಸಹಿ ಹಾಕಿದ್ದು ಹಾಲಿ ಮುಖ್ಯಮಂತ್ರಿ: ಅಂಬರೀಷ್ ಅವರ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿ ಸಹಿ ಹಾಕಿಸಿದ್ದು ಕುಮಾರಸ್ವಾಮಿಯವರು ಅಲ್ಲ, ಸ್ಮಾರಕ ನಿರ್ಮಾಣಕ್ಕೆ ಅವರು ಏನೂ ಅನುಕೂಲ ಮಾಡಿಕೊಟ್ಟಿರಲಿಲ್ಲ, ಸ್ಮಾರಕ ನಿರ್ಮಾಣ ಕುರಿತು ಹಿರಿಯ ನಟರಾದ ದೊಡ್ಡಣ್ಣ ಮಾತನಾಡಲು ವಿಧಾನಸೌಧಕ್ಕೆ ಹೋಗಿದ್ದಾಗ ಅವರನ್ನು ಕಾಯಿಸಿ ಏಕವಚನದಲ್ಲಿ ಬೈದು ಮುಖಕ್ಕೆ ಪೇಪರ್ ಎಸೆದು ಇದೇ ಕುಮಾರಸ್ವಾಮಿಯವರು ಕಳುಹಿಸಿದ್ದರು ಎಂದು ಆರೋಪ ಮಾಡಿದ್ದಾರೆ.

ಸ್ಮಾರಕ ನಿರ್ಮಾಣ ವಿಚಾರದಲ್ಲಿ ಹಿರಿಯ ನಟನಿಗೆ ಮಾಡಿದ್ದ ಅವಮಾನ ಕುರಿತು ನಾನು ಆದಿಚುಂಚನಗಿರಿ ಶ್ರೀಗಳ ಬಳಿ ನೋವು ತೋಡಿಕೊಂಡಿದ್ದೆ, ಅದಕ್ಕೆ ಅವರು ಕೂಡ ಕುಮಾರಸ್ವಾಮಿಯವರು ಈ ರೀತಿ ಮಾಡಬಾರದಿತ್ತು ಎಂದರು ಎಂದು ಸುಮಲತಾ ನೆನಪಿಸಿಕೊಂಡಿದ್ದಾರೆ.

ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಮೊದಲೇ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಸರ್ಕಾರದ ಮಟ್ಟದಲ್ಲಿ ಕೆಲಸ ಆರಂಭವಾಗಿತ್ತು. ಆ ವಿಷಯದಲ್ಲೇಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ, ವಿಷ್ಣು ಅವರ ಸ್ಮಾರಕ ಮೈಸೂರಿನಲ್ಲಿ ಬೃಹತ್ ಸುಂದರ ಜಾಗದಲ್ಲಿ ನಡೆಯುತ್ತಿದೆ ಎಂದರು.

ಹಿರಿಯ ಕಲಾವಿದರೊಬ್ಬರ ಅಂತ್ಯಸಂಸ್ಕಾರ ಮತ್ತು ಸ್ಮಾರಕ ನಿರ್ಮಾಣ ವಿಚಾರದಲ್ಲಿ ಕುಮಾರಸ್ವಾಮಿಯವರ ಜಾಗದಲ್ಲಿ ಬೇರೆ ಮುಖ್ಯಮಂತ್ರಿಗಳು ಇದ್ದರೂ ಕೆಲಸ ಮಾಡುತ್ತಿದ್ದರು, ಅದು ಮುಖ್ಯಮಂತ್ರಿಗಳ ಕರ್ತವ್ಯವಾಗಿರುತ್ತದೆ, ಈ ವಿಷಯ ಪ್ರಸ್ತಾಪಿಸಿಕೊಂಡು ರಾಜಕೀಯ ಮಾಡುವ ಅಗತ್ಯವಿಲ್ಲ ಎಂದರು.

ಕಳೆದ ಲೋಕಸಭೆ ಚುನಾವಣೆ ವೇಳೆ ನನ್ನ ಫೋನ್ ಮತ್ತು ಆದಿಚುಂಚನಗಿರಿ ಶ್ರೀಗಳ ಫೋನ್ ಕೂಡ ಟ್ಯಾಪ್ ಆಗಿತ್ತು, ಆ ಮಹಾನುಭಾವರ ಹೆಸರನ್ನು ನಾನು ಇಲ್ಲಿ ಪ್ರಸ್ತಾಪಿಸಬಾರದು, ಆದರೂ ಕೂಡ ಇವರು ಮಾಡುತ್ತಿರುವ ಅಕ್ರಮಗಳು ಮತ್ತು ಹೇಳುತ್ತಿರುವ ಸುಳ್ಳುಗಳ ಬಗ್ಗೆ ಮಾತನಾಡುವಾಗ ಫೋನ್ ಟ್ಯಾಪಿಂಗ್ ವಿಷಯ ಪ್ರಸ್ತಾಪಿಸಬೇಕಾಯಿತು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com