ಬಾದಾಮಿ ಕ್ಷೇತ್ರದ ಜನರಿಂದ ಮಾಜಿ ಸಿಎಂ ಸಿದ್ದರಾಮಯ್ಯಗೆ ಘೇರಾವ್, ಬಚಾವ್ ಮಾಡಿದ ಪೊಲೀಸರು

ಸ್ವಕ್ಷೇತ್ರ ಬಾದಾಮಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಕ್ರೋಶಭರಿತ ಜನರ ಗುಂಪೊಂದು ಬಹಿರಂಗವಾಗಿ ಟೀಕೆ ಮಾಡಿ ಘೋಷಣೆ ಕೂಗಿ ಘೇರಾವ್ ಹಾಕಿರುವ ಘಟನೆ ನಡೆದಿದೆ.
ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸ್ವಕ್ಷೇತ್ರ ಬಾದಾಮಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಕ್ರೋಶಭರಿತ ಜನರ ಗುಂಪೊಂದು ಬಹಿರಂಗವಾಗಿ ಟೀಕೆ ಮಾಡಿ ಘೋಷಣೆ ಕೂಗಿ ಘೇರಾವ್ ಹಾಕಿರುವ ಘಟನೆ ನಡೆದಿದೆ.

ಆಗ ಪೊಲೀಸರ ಗುಂಪೊಂದು ಬಂದು ಮಾನವ ಸರಪಳಿ ರಚಿಸಿ ಅವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ಕರೆದುಕೊಂಡು ಹೋದರು. ಮೊನ್ನೆ ಸೋಮವಾರ ಮಧ್ಯಾಹ್ನ ಬಾದಾಮಿಗೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಕ್ಷೇತ್ರದ ಜನರು ಅದ್ದೂರಿಯಾಗಿಯೇ ಸ್ವಾಗತಿಸಿದ್ದರು. ಸೋಮವಾರ ರಾತ್ರಿ ಅಲ್ಲಿಯೇ ಉಳಿದುಕೊಂಡು ಸಭೆಗಳನ್ನು ನಡೆಸಿದ್ದರು, ಜನರ ಹಲವು ಅಹವಾಲುಗಳನ್ನು ಆಲಿಸಿದರು.

ನಿನ್ನೆ ಸಿದ್ದರಾಮಯ್ಯನವರು ಮಿನಿ ವಿಧಾನ ಸೌಧದ ಕೆಲಸಗಳನ್ನು ಪರಿಶೀಲಿಸಿದರು, ನಂತರ ರೇಶನ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕೆಲಸಗಾರರಿಗೆ ಕಿಟ್ ಗಳನ್ನು ವಿತರಿಸಿದರು. ಮೊನ್ನೆ ಕಾಲೇಜು ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಿಸುವ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಿದ್ದರು.

ನಿನ್ನೆ ಪಾರ್ವತಿ ಗಂಜಿಕೆರೆ ಪ್ರದೇಶದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ವೇಳೆ ಘೇರಾವ್ ಹಾಕಿದ ಘಟನೆ ನಡೆಯಿತು. ಆ ಪ್ರದೇಶದ ಟ್ಯಾಂಕ್ ಗಳ ಪುನರುಜ್ಜೀವನಗೊಳಿಸುವ ಯೋಜನೆಯದು. ಹಿಂದಿನ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎಂದು ಅಲ್ಲಿನ ಕೆಲವು ನಿವಾಸಿಗಳು ಸಿದ್ದರಾಮಯ್ಯನವರ ಮೇಲೆ ಆರೋಪ ಮಾಡಿ ಘೋಷಣೆಗಳನ್ನು ಕೂಗಿ ಬೆದರಿಕೆ, ಘೇರಾವ್ ಹಾಕಿದರು. ಕೆಲವರು ಸ್ಥಳ ಬಿಟ್ಟು ಕದಲಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಪೊಲೀಸರು ಸಿದ್ದರಾಮಯ್ಯನವರಿಗೆ ಭದ್ರತೆ ಒದಗಿಸಿದರು. ಅವರ ಸುತ್ತಲೂ ಮಾನವ ಸರಪಳಿ ರಚಿಸಿ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡು ಅವರ ವಾಹನದವರೆಗೆ ಕರೆದುಕೊಂಡು ಹೋಗಿ ಬಿಟ್ಟ ಪ್ರಸಂಗ ನಡೆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com