ನಾಯಕತ್ವ ಬದಲಾವಣೆ ಕುರಿತು ಮುಂದುವರೆದ ನಿಗೂಢತೆ: ಜು.22 ಸಂಪುಟ ಸಭೆ, ಜು.26 ಶಾಸಕಾಂಗ ಸಭೆ ಕರೆದ ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ನಿಗೂಢತೆ ಮುಂದುವರೆದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜು.22ರಂದು ಸಂಪುಟ ಸಭೆ ಹಾಗೂ ಜು.26 ರಂದು ಶಾಸಕಾಂಗ ಸಭೆ ಕರೆದಿದ್ದು, ತೀವ್ರ ಕುತೂಹಲ ಕೆರಳಿಸಿದೆ. 
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ
Updated on

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ನಿಗೂಢತೆ ಮುಂದುವರೆದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜು.22ರಂದು ಸಂಪುಟ ಸಭೆ ಹಾಗೂ ಜು.26 ರಂದು ಶಾಸಕಾಂಗ ಸಭೆ ಕರೆದಿದ್ದು, ತೀವ್ರ ಕುತೂಹಲ ಕೆರಳಿಸಿದೆ. 

ಜುಲೈ 26 ರಂದು ರಾಜ್ಯ ಸರ್ಕಾರ 2 ವರ್ಷ ಪೂರ್ಣಗೊಳಿಸುತ್ತಿರುವುದರಿಂದ ಯಡಿಯೂರಪ್ಪ ಅವರು ಶಾಸಂಕ ಪಕ್ಷದ ಸಭೆ ಮತ್ತು ಭೋಜನಕೂಟ ಕರೆದಿದ್ದಾರೆಂದು ಹೇಳಲಾಗುತ್ತಿದೆ. 

ಆದರೆ, ವಿರೋಧಿ ಬಣಗಳು ಇದನ್ನು ಬೇರೆಯದ್ದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಿವೆ. ದೆಹಲಿಯಲ್ಲಿ ವರಿಷ್ಠರು ಬೇರೆಯವರಿಗೆ ಅವಕಾಶ ಮಾಡಿಕೊಡುವಂತೆ ಯಡಿಯೂರಪ್ಪ ಅವರಿಗೆ ಸೂಚನೆನೀಡಿದ್ದು, ಶಾಸಕಾಂಗ ಪಕ್ಷದ ಸಬೆ ನಡೆದ ಎರಡು ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆಂದು ಹೇಳುತ್ತಿದ್ದಾರೆ. ಆದರೆ, ಈ ವಾದವನ್ನು ಮುಖ್ಯಮಂತ್ರಿಗಳ ಆಪ್ತರು ನಿರಾಕರಿಸಿದ್ದಾರೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರ್.ಅಶೋಕ್ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಕೇಂದ್ರದಿಂದ ಯಾವ ಸಂದೇಶವೂ ಬಂದಿಲ್ಲ. ಈ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ನಮ್ಮ ನಡುವೆ ಅಂತಹ ಚರ್ಚೆಯೇ ಇಲ್ಲ ಎಂದು ಹೇಳಿದ್ದಾರೆ. 

ಶಾಸಕಾಂಗ ಪಕ್ಷದ ಸಭೆ ಕರೆದಿರುವ ಕುರಿತು ನನಗೆ ಮಾಹಿತಿ ಇಲ್ಲ. ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಔತಣಕೂಟ ಏರ್ಪಡಿಸಿದ್ದಾರೆಯೇ ಹೊರತು ಸಿಎಲ್'ಪಿ ನೋಟಿಸ್ ನಮಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. 

ಔತಣ ಕೂಟ ಇದೆ. ನಮ್ಮ ಶಾಸಕರ ಜೊತೆ ಕುಳಿತು ಮಾತನಾಡುವುದು ಇದ್ದೇ ಇರುತ್ತದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ನಾವೆಲ್ಲಾ ಒಟ್ಟಾಗಿದ್ದೇವೆ. ಕೇಂದ್ರದ ನಾಯಕತ್ವ ಬಲಿಷ್ಟವಾಗಿದೆ. ಕೇಂದ್ರದ ನಾಯಕರ ಮಾರ್ಗದರ್ಶನದಂತೆ ನಾವು ಹೋಗುತ್ತೇವೆ. ಪ್ರಸ್ತುತ ಮುಂದಿನ ಚುನಾವಣೆ ಗೆಲುವು ಮಾತ್ರವೇ ನಮ್ಮ ಆದ್ಯತೆ. ನಾಯಕತ್ವದ ಬದಲಾವಣೆ ವಿಚಾರ ನಮ್ಮ ಮುಂದಿಲ್ಲ. ಯಡಿಯೂರಪ್ಪ ಅವರು ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ಹೀಗಾಗಿ ಗೊಂದಲಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಡಪಡಿಸಿದ್ದಾರೆ. 

ಈ ನಡುವೆ ಯಡಿಯೂರಪ್ಪ ಅವರು ಶಾಸಕಾಂಗ ಪಕ್ಷದ ಸಭೆ ಕರೆದಿರುವುದಕ್ಕೆ ಬಂಡಾಯ ಶಾಸಕರು ಸಂತಸ ವ್ಯಕ್ತಪಡಿಸಿದ್ದಾರೆ. 

ಪಕ್ಷದಲ್ಲಿನ ಸಮಸ್ಯೆಗಳ ಕುರಿತು ಮಾತನಾಡಲು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಬಂಡಾಯ ಶಾಸಕರು ಹಲವು ದಿನಗಳಿಂದಲೂ ಪಟ್ಟುಹಿಡಿದು ಕುಳಿತಿದ್ದರು. ಆದರೆ. ಯಡಿಯೂರಪ್ಪ ಅವರು ಈ ಬಗ್ಗೆ ಯಾವುದೇ ರೀತಿಯ ಮಾತುಗಳನ್ನೂ ಆಡಿರಲಿಲ್ಲ. 

ಬಂಡಾಯ ಶಾಸಕರ ತಂಡದ ಸದಸ್ಯರೊಬ್ಬರು ಮಾತನಾಡಿ, ಶಾಸಕಾಂಗ ಪಕ್ಷ ಎತ್ತುವ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಉತ್ತರ ನೀಡಬೇಕು. ನಾಯಕತ್ವ ಮುಂದುವರಿಕೆ ವಿಚಾರದಲ್ಲಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಬೇಕೆಂದು ಬಯಸಿದ್ದ ಯಡಿಯೂರಪ್ಪ ಅವರು, ಇದಕ್ಕೂ ಮುನ್ನ ಸಭೆ ಕರೆಯಲು ಮನಸ್ಸು ಮಾಡಿರಲಿಲ್ಲ ಎಂದು ಹೇಳಿದ್ದಾರೆ. 

ಕಳವಳ ಪಡುವ ಯಾವದೇ ಅಗತ್ಯವೂ ಇಲ್ಲ. ಉಳಿದ ಎರಡು ವರ್ಷಗಳ ಅಧಿಕಾರಾವಧಿಯನ್ನೂ ಯಡಿಯೂರಪ್ಪ ಅವರು ಪೂರ್ಣಗೊಳಿಸಲಿದ್ದಾರೆ. ಇದು ಔಪಚಾರಿಕ ಸಭೆ, ಯಾವುದೇ ರೀತಿಯ ಪ್ರಮುಖ ನಿರ್ಣಯಗಳನ್ನೂ ಸಭೆಯಲ್ಲಿ ತೆಗೆದುಕೊಳ್ಳಲಾಗುವುದಿಲ್ಲ. ಮಂಗಳವಾರ ಸಂಜೆ ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡುತ್ತೇನೆಂದು ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಹೇಳಿದ್ದಾರೆ. ಈ ನಡುವೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಕೂಡ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. 

ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಜು.26ರಂದು ಶಾಸಕಾಂಗ ಸಭೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸ್ಪಷ್ಟಪಡಿಸಿದ್ದಾರೆ. 

ಈ ನಡುವೆ ತಜ್ಞರೊಬ್ಬರು ಮಾತನಾಡಿ, ಅಧಿವೇಶನಕ್ಕೂ ಮುನ್ನ ಎಲ್ಲಾ ಪಕ್ಷಗಳೂ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸುತ್ತವೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com