ಪೆಗಾಸಸ್ ವಿವಾದ: ಮೋದಿ ಸರ್ಕಾರದ ವಿರುದ್ಧ ಮುಗಿಬಿದ್ದ ಕರ್ನಾಟಕ ಕಾಂಗ್ರೆಸ್; ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ತನಿಖೆಗೆ ಆಗ್ರಹ
ಬೆಂಗಳೂರು: ಪೆಗಾಸಸ್ ಗೂಡಚಾರಿಕೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲೂ ಈ ಸಾಫ್ಟ್ ವೇರ್ ಬಳಸಿ ಪ್ರತಿಪಕ್ಷಗಳ ನಾಯಕರ ಆಪ್ತರ ಫೋನ್ ಕದ್ದಾಲಿಕೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿಯವರ ಆಪ್ತರು ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಬೇಹುಗಾರಿಕೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ರಾಜ್ಯ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ಅಲ್ಲದೆ, ಈ ಸಂಬಂಧ ಸುಪ್ರೀಂಕೋರ್ಟ್ ನೇತೃತ್ವದಲ್ಲಿ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಗುರುವಾರ ದೇಶದಾದ್ಯಂತ ರಾಜಭವನಗಳಿಗೆ ಮುತ್ತಿಗೆ ಹಾಕುವುದಾಗಿ ಪ್ರಕಟಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಪ್ರಕರಣ ಸಂಬಂಧ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಬೇಹುಗಾರಿಕೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಕುರಿತು ಭಾರತ ಸರ್ಕಾರ ಸ್ಪಷ್ಟನೆ ನೀಡುವಂತೆ ಆಗ್ರಹಿಸುತ್ತಿದ್ದೇನೆಂದು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರತೀ ಬಾರಿ ಕೆಳಮಟ್ಟಕ್ಕೆ ಹೋಗುವುದಿಲ್ಲ ಎಂದು ನಂಬಿದ್ದೆವು. ಆದರೆ, ಪ್ರಸ್ತುತದ ಬೆಳವಣಿಗೆಯು ಎಂತಹ ಕೆಳಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ ಎಂಬುದಕ್ಕೆ ಸಾಕ್ಷಿ ದೊರೆತಿದೆ. ಅಧಿಕಾರ ಗಳಿಸಲು ಮತ್ತು ಜಾತ್ಯತೀತ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ವಿದೇಶಿ ಶಕ್ತಿಗಳೊಂದಿಗೆ ಸಹಭಾಗಿತ್ವ ಸೇರಿದಂತೆ ಯಾವುದೇ ಕೆಲಸವನ್ನಾದರೂ ಮಾಡಬಲ್ಲದು ಎಂಬುದನ್ನು ಪೆಗಾಸಸ್ ಮೂಲಕ ತೋರಿಸಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದೆ. ಆಪರೇಷನ್ ಕಮಲ ನಡೆಸಿ ಸರ್ಕಾರ ಕೆಳಗಿಳಿಸಲು ಫೋನ್ ಕದ್ದಾಲಿಕೆ ಮಾಡಿರುತ್ತಾರೆಂಬುದನ್ನು ನಾನು ಶಂಕಿಸಿದ್ದೆ. ಜನರು ಬಿಜೆಪಿ ತಿರಸ್ಕರಿಸಿದರೂ ಗೋವಾ, ಪಾಂಡಿಚೆರಿ, ಮಣಿಪುರ ಹಾಗೂ ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬರಲು ಇದೇ ಮಾದರಿ ಬಳಸಿದ್ದಾರೆಂಬುದು ಇದರಿಂದ ಸಾಬೀತಾಗುತ್ತಿದೆ. ಕುದುರೆ ವ್ಯಾಪಾರ ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಬಿಜೆಪಿ ದೇಶದ ಪ್ರಜಾಪ್ರಭುತ್ವವನ್ನು ಸಾಯಿಸಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಈ ನಡುವೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯ ಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ತೀವ್ರವಾಗಿ ಕಿಡಿಕಾರಿದರು.
ಈ ವೇಳೆ 2019ರಲ್ಲಿ ಆಪರೇಷನ್ ಕಮಲ ನಡೆಸಲು ಫೋನ್ ಕದ್ದಾಲಿಕೆ ನಡೆದಿದೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದರು.ಜೊತೆಗೆ ತಮ್ಮ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಆಪ್ತರ ಫೋನ್ ಕೂಡ ಕದ್ದಾಲಿಕೆ ಮಾಡಲಾಗಿದೆ ಎಂದು ಕಿಡಿಕಾರಿದರು. ಪೆಗಾಸಿಸ್ ಹಗರಣ ಕುರಿತು ಉನ್ನತಮಟ್ಟದ ತನಿಖೆ ಆಗಬೇಕೆಂದು ಒತ್ತಾಯಿಸಿದರು.
ಮೈತ್ರಿ ಸರ್ಕಾರದ ಅವಧಿಯಲ್ಲಿ ನಾನು ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ. ಆಗ ಪೆಗಾಸಿಸ್ ಗೂಢಚಾರಿಕೆ ಸಾಫ್ಟ್ ವೇರ್ ಬಳಸಿ ನನ್ನ ಆಪ್ತ ಕಾರ್ಯದರ್ಶಿ ವೆಂಕಟೇಶ್, ಕುಮಾರಸ್ವಾಮಿ ಆಪ್ತ ಕಾರ್ಯದರ್ಶಿ ಸತೀಶ್, ಮಾಜಿ ಪ್ರಧಾನಿ ದೇವೇಗೌಡರ ಭದ್ರತಾ ಸಿಬ್ಬಂದಿ ಮಂಜುನಾಥ ಅವರ ಫೋನ್ ಕದ್ದಾಲಿಕೆ ಮಾಡಲಾಗಿದೆ. ಫೋನ್ ಕದ್ದಾಲಿಸಿರುವುದು ಅಪರಾಧ, ಕೇಂದ್ರ ಈ ಅಪರಾಧ ಮಾಡಿದೆ ಎಂದು ಆರೋಪಿಸಿದರು.
ಫೋನ್ ಕದ್ದಾಲಿಕೆ ಸಂಬಂಧ ಕರ್ನಾಟಕದಲ್ಲಿ ಸಿಬಿಐ ತನಿಖೆ ನಡೆಯುತ್ತಿದೆ. ಆದರೆ, ಈ ಕಳ್ಳಗಿವಿ ವಿಚಾರವಾಗಿ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಡಿಕೆ.ಶಿವಕುಮಾರ್ ಅವರು ಒತ್ತಾಯಿಸಿದರು.
ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್ ಕದ್ದಾಲಿಕೆ ಬಗ್ಗೆ ಯಡಿಯೂರಪ್ಪ ಸಿಬಿಐ ತನಿಖೆಗೆ ಸೂಚಿಸಿದ್ದಾರೆ. ಆದರೆ, ಅದೇನಾಗಿದೆ ಅಂತ ಗೊತ್ತಿಲ್ಲ ಎಂದರು.
ದೇಶದಲ್ಲಿ ಖಾಸಗಿತನವೇ ಇಲ್ಲದಂತಾಗಿದೆ. ಕೇಂದ್ರ ಸರ್ಕಾರ ಬೆಡ್ ರೂಮ್, ಬಾತ್ ರೂಂ, ಅಡುಗೆ ಮನೆಗೂ ಬಂದಿದೆ. ಫೋನ್ ಕದ್ದಾಲಿಕೆ ಸಂಬಂಧ ಸುಪ್ರೀಂಕೋರ್ಟ್ ನೇತೃತ್ವದಲ್ಲಿ ತನಿಖೆ ಆಗಬೇಕೆಂದು ಆಗ್ರಹಿಸಿ ಎಲ್ಲಾ ರಾಜ್ಯಗಳಲ್ಲಿ ಗುರುವಾರ ರಾಜಭವನ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇಣುಗೋಪಾಲ ಅವರು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ