ರಾಜೀನಾಮೆ ಹೊಸ್ತಿಲಲ್ಲಿ ಸಿಎಂ ಯಡಿಯೂರಪ್ಪ: ನಿಷ್ಟಾವಂತರ ಕೈಬಿಡದೆ ಪ್ರಮುಖ ಸ್ಥಾನಗಳನ್ನು ನೀಡಿದ ಬಿಎಸ್'ವೈ!

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಕ್ಷಣಗಣನೆ ಎಣಿಸುತ್ತಿರುವ ಮಧ್ಯೆಯೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುರುಕಿನಿಂದ ಕೆಲಸ ಮಾಡುತ್ತಿದ್ದು, ತಮ್ಮ ಆಪ್ತರು, ಪ್ರಾಮಾಣಿಕ ನಾಯಕರಿಗೆ ಪ್ರಮುಖ ಸ್ಥಾನಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಈ ಮೂಲಕ ಪ್ರಾಮಾಣಿಕರ ಕೈಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. 
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ
Updated on

ಮೈಸೂರು: ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಕ್ಷಣಗಣನೆ ಎಣಿಸುತ್ತಿರುವ ಮಧ್ಯೆಯೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುರುಕಿನಿಂದ ಕೆಲಸ ಮಾಡುತ್ತಿದ್ದು, ತಮ್ಮ ಆಪ್ತರು, ಪ್ರಾಮಾಣಿಕ ನಾಯಕರಿಗೆ ಪ್ರಮುಖ ಸ್ಥಾನಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಈ ಮೂಲಕ ಪ್ರಾಮಾಣಿಕರ ಕೈಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. 

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಭಾರೀ ಸಂಚಲನ ಮೂಡಿಸುತ್ತಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬಾರದೆಂಬ ಆಗ್ರಹಗಳು ಹೆಚ್ಚಾಗಿವೆ. ಈಗಾಗಲೇ ಯಡಿಯೂರಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸುವ ಹಲವಾರು ಮಠಗಳ ಸ್ವಾಮೀಜಿಗಳು ಬೀದಿಗಳಿದು ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ. 

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜೀನಾಮೆ ಕೊಡುವಂತೆ ಹೈಕಮಾಂಡ್ ಸೂಚಿಸಿದ್ದು, ಆ ಹಿನ್ನೆಲೆಯಲ್ಲಿ ತಮ್ಮ ಆಪ್ತರಿಗೆ ಅವರು ಅಧಿಕಾರದ ಸ್ಥಾನಗಳನ್ನು ಒದಗಿಸುತ್ತಿದ್ದಾರೆ. 

ಒಂದೊಮ್ಮೆ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾದ ಸಂದರ್ಭ ಬಂದಲ್ಲಿ ತಮ್ಮ ಆಪ್ತರಿಗೆ ಸ್ಥಾನಮಾನ ಕೊಡಿಸಿಯೇ ಹೋಗುತ್ತಾರೆ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿತ್ತು.

ಇದರ ಬೆನ್ನಲ್ಲೇ ತಮ್ಮ ಆಪ್ತರಿಗೆ ಪ್ರಮುಖ ಸ್ಥಾನಗಳನ್ನು ನೀಡುವ ಮೂಲಕ ಆಪ್ತರ ಕೈ ಬಿಡುವುದಿಲ್ಲ ಎಂಬ ಸಂದೇಶವನ್ನು ಯಡಿಯೂರಪ್ಪ ರವಾನಿಸಿದ್ದಾರೆ. 

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಹಿರಿಯ ನಟಿ ಶ್ರುತಿ ಅವರನ್ನು ಬದಲಾಯಿಸಲಾಗಿದ್ದು, ಅವರ ಜಾಗಕ್ಕೆ ಯಡಿಯೂರಪ್ಪ ಅವರ ಆಪ್ತ ಕಾಪು ಸಿದ್ದಲಿಂಗಸ್ವಾಮಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. 

ಕಾಪು ಸಿದ್ದಲಿಂಗಸ್ವಾಮಿ ಅವರು ಸಿಎಂ ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿದ್ದರು. ಅವರು ಮುಖ್ಯಮಂತ್ರಿ ಆಗುವುದಕ್ಕಿಂತಲೂ ಮೊದಲಿನಿಂದಲೂ ಯಡಿಯೂರಪ್ಪ ಅವರೊಂದಿಗೆ ಇದ್ದರು. ಆದರೆ ಬದಲಾದ ಸ್ಥಿತಿಯಲ್ಲಿ ಕಳೆದ 2012ರಿಂದ ಸಿದ್ದಲಿಂಗಸ್ವಾಮಿ ಅವರನ್ನು ಯಡಿಯೂರಪ್ಪ ದೂರ ಇಟ್ಟಿದ್ದರು ಎನ್ನಲಾಗಿದೆ.

ನಂತರ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿಯಿಂದ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಎದುರು ಸ್ಪರ್ಧಿಸಿ ಸೋತಿದ್ದರು. ನಂತರ 2018ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಸಿದ್ದಲಿಂಗಸ್ವಾಮಿ ಅವರು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ. 

ಸಿದ್ದಲಿಂಗಸ್ವಾಮಿಯವರಿಗೆ ಯಡಿಯೂರಪ್ಪ ಅವರು ನೀಡಿದ್ದ ಸ್ಥಾನ ಎಲ್ಲರಿಗೂ ಶಾಕ್ ನೀಡಿದೆ. ಇದರಂತೆ ಈ ನಡುವೆ ನೂತನವಾಗಿ ರಚನೆ ಮಾಡಲಾದ ಒಕ್ಕಲಿಗ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಶಾಸಕ. ಎಂ.ಕೃಷ್ಣಪ್ಪ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ನಟಿ ಶ್ರುತಿ ಅವರನ್ನು ನೇಮಕ ಮಾಡಿದ್ದಾರೆ. 

ಇದಲ್ಲದೆ, ರಾಜ್ಯದ ಸರ್ಕಾರಿ ನೌಕರರಿಗೂ ಯಡಿಯೂರಪ್ಪ ಅವರು ಉಡುಗೊರೆ ನೀಡಿದ್ದಾರೆ. ಜುಲೈ 1, 2021 ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರಿ ನೌಕರರಿಗೆ ಶೇ 11ರಷ್ಟು ತುಟ್ಟಿಭತ್ಯೆ ನೀಡುವಂತೆ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದಾರೆ. 

ಇದರಷ್ಟೇ ಅಲ್ಲದೆ, ಕಳೆದ ಎರಡು ವರ್ಷಗಳಿಂದ ಖಾಲಿಯಾಗಿಯೇ ಇದ್ದ ಕರ್ನಾಟಕ ಮೀಡಿಯಾ ಅಕಾಡೆಮಿಯ ಅಧ್ಯಕ್ಷ ಹುದ್ದೆಯನ್ನೂ ಯಡಿಯೂರಪ್ಪ ಅವರು ಭರ್ತಿ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಯಡಿಯೂರಪ್ಪ ಅವರು ಪತ್ರಕರ್ತರೊಬ್ಬರನ್ನು ಕರ್ನಾಟಕ ಮೀಡಿಯಾ ಅಕಾಡೆಮಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆಂಬ ಹೇಳಲಾಗುತ್ತಿದೆ. 

ಇದರ ಜೊತೆಗೆ ಯಡಿಯೂರಪ್ಪ ಅವರು ರಾಜೀನಾಮೆಗೂ ಮುನ್ನ ಮತ್ತಷ್ಟು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಎಂದೂ ಮೂಲಗಳು ತಿಳಿಸಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com