'ರಾಜೀನಾಮೆ ನೀಡುವಂತೆ ಯಾರೂ ನನ್ನ ಮೇಲೆ ಒತ್ತಡ ಹೇರಿಲ್ಲ, ನನ್ನ ಇಷ್ಟದಿಂದಲೇ ನಿರ್ಗಮಿಸಿದ್ದೇನೆ': ಬಿ ಎಸ್ ಯಡಿಯೂರಪ್ಪ

ಎರಡು ತಿಂಗಳ ಹಿಂದೆಯೇ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ನನ್ನ ರಾಜೀನಾಮೆಗೆ ಹೈಕಮಾಂಡ್ ಒತ್ತಡ ಹೇರಿಲ್ಲ ಎಂದು ನಿರ್ಗಮಿತ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ರಾಜೀನಾಮೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ಬಿ ಎಸ್ ಯಡಿಯೂರಪ್ಪ
ರಾಜೀನಾಮೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ಎರಡು ತಿಂಗಳ ಹಿಂದೆಯೇ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ನನ್ನ ರಾಜೀನಾಮೆಗೆ ಹೈಕಮಾಂಡ್ ಒತ್ತಡ ಹೇರಿಲ್ಲ ಎಂದು ನಿರ್ಗಮಿತ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ಸಲ್ಲಿಸಿ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿಯವರಾಗಲಿ, ಅಮಿತ್ ಶಾ ಅವರಾಗಲಿ, ಅಧ್ಯಕ್ಷ ಜೆ ಪಿ ನಡ್ಡ ಅವರಾಗಲಿ ನನ್ನ ಮೇಲೆ ಮುಖ್ಯಮಂತ್ರಿ ಸ್ಥಾನಕ್ಕೆ ಒತ್ತಡ ಹೇರಲಿಲ್ಲ, ನಾನೇ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದೇನೆ, ಈ ಬಗ್ಗೆ ಯಾರಿಗೂ ಅಸಮಾಧಾನ, ಗೊಂದಲ ಬೇಡ ಎಂದಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿದ್ದು ಈ ಸಂದರ್ಭದಲ್ಲಿ ಬೇರೆಯವರಿಗೆ ಸಿಎಂ ಹುದ್ದೆ ಬಿಟ್ಟುಕೊಡಲು ನಾನೇ ನಿರ್ಧಾರ ಮಾಡಿ ಇವತ್ತು ರಾಜೀನಾಮೆ ನೀಡಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದರು.

ಮುಂದಿನ ಮುಖ್ಯಮಂತ್ರಿ ಯಾರಾಗಬೇಕು, ನಿಮ್ಮ ಒಲವು ಯಾರ ಕಡೆಗಿದೆ ಎಂದು ಕೇಳಿದ್ದಕ್ಕೆ ಮುಂದಿನ ಸಿಎಂ ನೇಮಕ ಮಾಡುವುದು ಹೈಕಮಾಂಡ್ ಗೆ ಬಿಟ್ಟ ನಿರ್ಧಾರ. ನಾನು ಯಾರ ಹೆಸರನ್ನು ನನ್ನ ಉತ್ತರಾಧಿಕಾರಿಯಾಗಬೇಕೆಂದು ಹೆಸರು ಸೂಚಿಸುವುದಿಲ್ಲ. ಯಾರು ಸಿಎಂ ಆದರೂ ಅವರಿಗೆ ನನ್ನ ಬೆಂಬಲವಿದೆ ಎಂದು ಹೇಳಿದ್ದಾರೆ.

ನನಗೆ ವಿಶೇಷ ಸ್ಥಾನಮಾನ ಸಿಕ್ಕಿದೆ: 75 ವರ್ಷವಾದವರಿಗೆ ಬಿಜೆಪಿಯಲ್ಲಿ ದೇಶದ ಯಾವ ರಾಜಕಾರಣಿಗಳಿಗೂ ಸ್ಥಾನಮಾನ ಕೊಟ್ಟಿಲ್ಲ, ಅದು ನನಗೆ ಸಿಕ್ಕಿದೆ. ನಾಲ್ಕು ದಶಕಗಳಲ್ಲಿ ವಿಧಾನ ಪರಿಷತ್ ಸದಸ್ಯನ ಸ್ಥಾನದಿಂದ ಹಿಡಿದು ಮುಖ್ಯಮಂತ್ರಿಯವರೆಗೆ ಪಕ್ಷ, ವರಿಷ್ಠರು ನನ್ನನ್ನು ಗೌರವಯುತವಾಗಿ ನಡೆಸಿಕೊಂಡಿದ್ದಾರೆ, ಆ ಬಗ್ಗೆ ನನಗೆ ತೃಪ್ತಿಯಿದೆ. ಇಂದು ಸಂತೋಷದಿಂದ ಸಿಎಂ ಸ್ಥಾನದಿಂದ ನಿರ್ಗಮಿಸುತ್ತಿದ್ದೇನೆ, ಪಕ್ಷದ ಸಂಘಟನೆಗೆ ಇನ್ನು ಮುಂದೆಯೂ ಕೆಲಸ ಮಾಡುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com