ಸಂಪುಟ ರಚನೆ ವೇಳೆ ಒತ್ತಡಗಳು ಬರುವುದು ಸಹಜ, ದೆಹಲಿ ವರಿಷ್ಠರ ಭೇಟಿಗೆ ಸಮಯ ಕೇಳಿದ್ದೇನೆ: ಸಿಎಂ ಬಸವರಾಜ ಬೊಮ್ಮಾಯಿ 

ಸಂಪುಟ ರಚನೆ ವೇಳೆ ಎಲ್ಲಾ ಸಮುದಾಯದ ಶಾಸಕರಿಂದ ಒತ್ತಡ ಬರುವುದು ಸಹಜ, ಎಲ್ಲರಿಗೂ ಪ್ರಾತಿನಿಧ್ಯ ನೀಡುವುದು ಎಲ್ಲರನ್ನೂ ಸಮಾಧಾನಗೊಳಿಸಿ, ಪ್ರಾದೇಶಿಕ ಸಮತೋಲನ ಕಾಪಾಡಿಕೊಂಡು ಸಚಿವ ಸಂಪುಟ ರಚನೆ ಮಾಡುವುದು ಸವಾಲಿನ ಕೆಲಸ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಉತ್ತರ ಕನ್ನಡ ಪ್ರವಾಸಕ್ಕೆ ತೆರಳುವ ಮುನ್ನ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ
ಉತ್ತರ ಕನ್ನಡ ಪ್ರವಾಸಕ್ಕೆ ತೆರಳುವ ಮುನ್ನ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

ಬೆಂಗಳೂರು: ಸಂಪುಟ ರಚನೆ ವೇಳೆ ಎಲ್ಲಾ ಸಮುದಾಯದ ಶಾಸಕರಿಂದ ಒತ್ತಡ ಬರುವುದು ಸಹಜ, ಎಲ್ಲರಿಗೂ ಪ್ರಾತಿನಿಧ್ಯ ನೀಡುವುದು ಎಲ್ಲರನ್ನೂ ಸಮಾಧಾನಗೊಳಿಸಿ, ಪ್ರಾದೇಶಿಕ ಸಮತೋಲನ ಕಾಪಾಡಿಕೊಂಡು ಸಚಿವ ಸಂಪುಟ ರಚನೆ ಮಾಡುವುದು ಸವಾಲಿನ ಕೆಲಸ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ನನಗೆ ಈಗ ತಕ್ಷಣಕ್ಕೆ ಮಳೆ ಪ್ರವಾಹ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡು ಮುಂದಿನ ಕೆಲಸ ಮಾಡುವುದು, ಮಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಇದಕ್ಕಾಗಿ ಇಂದು ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆ ಪ್ರವಾಸ ಕೈಗೊಳ್ಳುತ್ತಿದ್ದೇನೆ, ಪ್ರವಾಹ ಪೀಡಿತ ಸ್ಥಳಗಳಿಗೆ ಕೂಡ ಭೇಟಿ ನೀಡುತ್ತೇನೆ ಎಂದರು.

ಉತ್ತರ ಕನ್ನಡದಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಮಳೆ ಹಾನಿ ಸಮೀಕ್ಷೆ ಮಾಡಿ ಅಧಿಕಾರಿಗಳ ಜತೆ ಚರ್ಚಿಸುವೆ. ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಿ ಕ್ರಮಕ್ಕೆ ಸೂಚಿಸುತ್ತೇನೆ ಎಂದು ಹೇಳಿದ್ದಾರೆ. 

ದೆಹಲಿ ಭೇಟಿಗೆ ಸಮಯ ಕೇಳಿದ ಸಿಎಂ: ಬಿಜೆಪಿ ವರಿಷ್ಠರು ಸಮಯ ನೀಡಿದರೆ ದೆಹಲಿಗೆ ಭೇಟಿ ನೀಡಿ ರಾಜ್ಯದ ಬಗ್ಗೆ ಚರ್ಚಿಸುವೆ. ಬೆಳಗ್ಗೆ ದೆಹಲಿಗೆ ಹೋಗುವ ಯೋಜನೆಯಿದ್ದು ವರಿಷ್ಠರ ಬಳಿ ಭೇಟಿಗೆ ಸಮಯಾವಕಾಶ ಕೇಳಿದ್ದೇನೆ, ಆದರೆ ಈ ಭೇಟಿ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವುದಿಲ್ಲ. ಮುಂದಿನ ಭೇಟಿ ವೇಳೆ ಚರ್ಚಿಸುವೆ. ನಿನ್ನೆ ಪ್ರಧಾನ ಮಂತ್ರಿಯವರು ಕರೆ ಮಾಡಿ ನನಗೆ ಶುಭಾಶಯ ತಿಳಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಮ್ಮ ಆರ್ ಟಿ ನಗರ ನಿವಾಸದಿಂದ ಹೊರಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂತರ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಅವರ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದರು. ಕಳೆದ ವಾರ ಉತ್ತರ ಕನ್ನಡದಲ್ಲಿ ಸುರಿದ ಭಾರೀ ಮಳೆಗೆ ತೀವ್ರ ಹಾನಿಗೀಡಾಗಿರುವ ಪ್ರದೇಶಗಳಿಗೆ ಭೇಟಿ ನೀಡಲಿರುವ ಬಸವರಾಜ ಬೊಮ್ಮಾಯಿಯವರು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ದುರಸ್ತಿ ಮತ್ತು ಪರಿಹಾರ ಕಾರ್ಯ ಕ್ಷಿಪ್ರ ಗತಿಯಲ್ಲಿ ಸಾಗಲಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com