ಜನತಾ ಪರಿವಾರದಿಂದ ಹೋದ ಬೊಮ್ಮಾಯಿ ಮಾತು ಬಿಜೆಪಿ ವರಿಷ್ಠರು ಕೇಳ್ತಾರಾ, ಕೂಡಲೇ ಸಚಿವ ಸಂಪುಟ ರಚಿಸಿ: ಸಿದ್ದರಾಮಯ್ಯ ಆಗ್ರಹ

ರಾಜ್ಯದಲ್ಲಿನ ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜನರು ಎದುರಿಸಿರುವ ಪ್ರವಾಹ ಪರಿಸ್ಥಿತಿ ಸಮಸ್ಯೆ ಮತ್ತು ಕೋವಿಡ್ ನಿಯಂತ್ರಣಕ್ಕೆ ಅಧಿಕಾರಿಗಳ ಮೂಲಕ ಸರ್ಕಾರ ಕೆಲಸ ಮಾಡಿಸಬೇಕು, ಅದರೊಟ್ಟಿಗೆ ಶೀಘ್ರವೇ ಸಚಿವ ಸಂಪುಟ ರಚನೆಯಾಗಬೇಕೆಂದು ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಮೈಸೂರು: ರಾಜ್ಯದಲ್ಲಿನ ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜನರು ಎದುರಿಸಿರುವ ಪ್ರವಾಹ ಪರಿಸ್ಥಿತಿ ಸಮಸ್ಯೆ ಮತ್ತು ಕೋವಿಡ್ ನಿಯಂತ್ರಣಕ್ಕೆ ಅಧಿಕಾರಿಗಳ ಮೂಲಕ ಸರ್ಕಾರ ಕೆಲಸ ಮಾಡಿಸಬೇಕು, ಸಚಿವ ಸಂಪುಟ ಇಲ್ಲದಿದ್ದರೇನು, ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಬೇಕು, ಅದರೊಟ್ಟಿಗೆ ಶೀಘ್ರವೇ ಸಚಿವ ಸಂಪುಟ ರಚನೆಯಾಗಬೇಕೆಂದು ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಕಾಂಗ್ರೆಸ್ ವಿಭಾಗೀಯ ಮಟ್ಟದ ಸಭೆಯಲ್ಲಿ ಭಾಗವಹಿಸಲು  ಆಗಮಿಸಿದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಏಕ ವ್ಯಕ್ತಿಯಿಂದ ರಾಜ್ಯಕ್ಕೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಕೂಡಲೇ ಅಧಿಕಾರಿಗಳಿಗೆ ತಕ್ಕ ಸೂಚನೆ ನೀಡಿ ಕ್ರಮ ಕೈಗೊಳ್ಳಬೇಕು, ಅದರ ಜೊತೆಗೆ ಸಚಿವ ಸಂಪುಟ ರಚನೆಯಾಗಬೇಕೆಂದು ಆಗ್ರಹಿಸಿದ್ದಾರೆ.

ನಿನ್ನೆ ಬಸವರಾಜ ಬೊಮ್ಮಾಯಿಯವರು ಪ್ರಧಾನಿ, ಗೃಹ ಸಚಿವರನ್ನು ಭೇಟಿ ಮಾಡಿ ಸಚಿವ ಸಂಪುಟ ರಚನೆ ಬಗ್ಗೆ ಮಾತನಾಡಿರುವಂತೆ ಕಾಣುತ್ತಿಲ್ಲ, ನಿನ್ನೆಯೇ ಮಾತನಾಡಿ ಅಂತಿಮಗೊಳಿಸಬೇಕಾಗಿತ್ತು. ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಾದ ಪರಿಹಾರ ಹಣವನ್ನು, 11 ಸಾವಿರ ಕೋಟಿ ರೂಪಾಯಿ ಜಿಎಸ್ ಟಿ ಪರಿಹಾರ ಮೊತ್ತವನ್ನೇ ಕೊಟ್ಟಿಲ್ಲ, 2019ರಲ್ಲಿ ರಾಜ್ಯದಲ್ಲಿ ಬಂದ ಪ್ರವಾಹಕ್ಕೆ ಪೂರ್ಣವಾಗಿ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಿಲ್ಲ. ಬಹಳ ಮಂದಿಗೆ 10 ಸಾವಿರ ರೂಪಾಯಿ, ಮನೆಗಳನ್ನು ಕಟ್ಟಿಕೊಟ್ಟಿಲ್ಲ ಎಂದು ಆರೋಪಿಸಿದರು.

ಜನತಾ ಪರಿವಾರದಿಂದ ಹೋದ ಬೊಮ್ಮಾಯಿ ಮಾತು ಬಿಜೆಪಿ ವರಿಷ್ಠರು ಕೇಳ್ತಾರಾ?: ಯಡಿಯೂರಪ್ಪನವರಿಂದಲೇ ಸರಿಯಾದ ಆಡಳಿತ ನೀಡಲು ಸಾಧ್ಯವಾಗಿಲ್ಲ, ಕೇಂದ್ರದಿಂದ ಸರಿಯಾಗಿ ಅನುದಾನ, ಪರಿಹಾರ ತರಲು ಆಗಿಲ್ಲ. ಇನ್ನು ಬಸವರಾಜ ಬೊಮ್ಮಾಯಿ ಅವರಿಂದ ಆಗುತ್ತಾ? ಬಿ.ಎಸ್.ಯಡಿಯೂರಪ್ಪ ಬಿಜೆಪಿಯಲ್ಲೇ ಇದ್ದವರು. ಅವರ ಮಾತನ್ನೇ ಕೇಳಲಿಲ್ಲ, ಇನ್ನು ಜನತಾದಳದಿಂದ ಬಿಜೆಪಿಗೆ ಹೋದ ಬೊಮ್ಮಾಯಿಯವರ ಮಾತು ಕೇಳುತ್ತಾರೆಯೇ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಟೀಕಿಸಿದ್ದಾರೆ.

ಕೇರಳ, ಮಹಾರಾಷ್ಟ್ರ ರಾಜ್ಯಗಳಿಂದ ಬರುವವರನ್ನು ಗಡಿಭಾಗಗಳಲ್ಲಿ ಸರಿಯಾಗಿ ತಪಾಸಣೆ ಮಾಡಿ ಕೊರೋನಾ ನಮ್ಮ ರಾಜ್ಯದಲ್ಲಿ ವ್ಯಾಪಕವಾಗಿ ಹರಡದ ರೀತಿಯಲ್ಲಿ ತಡೆಯುವುದು ಸರ್ಕಾರದ ಜವಾಬ್ದಾರಿ. ಸರ್ಕಾರ ವಿಫಲವಾದರೆ ಕೊರೋನಾ ಮೂರನೇ ಅಲೆ ಪ್ರಾರಂಭವಾಗುತ್ತದೆ. ನಿನ್ನೆಯಿಂದಲೇ ಸೋಂಕು ಹೆಚ್ಚುತ್ತಿದೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಗಡಿಭಾಗದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯನವರನ್ನು ಸಹ ಅವರ ಅಭಿಮಾನಿಗಳು ಮೈಸೂರಿನ ಹುಲಿ, ಮುಂದಿನ ಸಿಎಂ ಎಂದು ಘೋಷಣೆಗಳನ್ನು ಕೂಗಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com