ಯಡಿಯೂರಪ್ಪ ರಾಜ್ಯ ಪ್ರವಾಸವನ್ನು ಪಕ್ಷದ ರೋಡ್ ಶೋ ಆಗಿ ಪರಿವರ್ತಿಸಲು ಬಿಜೆಪಿ ಚಿಂತನೆ?

ಒಂದರ ಹಿಂದೆ ಒಂದರಂತೆ ಚುನಾವಣೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮುಂದುವರೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದೀಗ ಪಕ್ಷವು ಯಡಿಯೂರಪ್ಪ ಅವರ ರಾಜ್ಯ ಪ್ರವಾಸವನ್ನು ಪಕ್ಷದ ರೋಡ್ ಶೋ ಆಗಿ ಪರಿವರ್ತಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಒಂದರ ಹಿಂದೆ ಒಂದರಂತೆ ಚುನಾವಣೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮುಂದುವರೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದೀಗ ಪಕ್ಷವು ಯಡಿಯೂರಪ್ಪ ಅವರ ರಾಜ್ಯ ಪ್ರವಾಸವನ್ನು ಪಕ್ಷದ ರೋಡ್ ಶೋ ಆಗಿ ಪರಿವರ್ತಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

2023ರ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನೇತೃತ್ವ ವಹಿಸಲಿದ್ದಾರೆಂದು ಈಗಾಗಲೇ ಹೈಕಮಾಂಡ್ ಘೋಷಿಸಿದ್ದು, ಯಡಿಯೂರಪ್ಪ ಅವರನ್ನು ಭಾಗಿ ಮಾಡಲು ಇದೀಗ ಮುಂದಾಗಿದೆ ಎಂದು ತಿಳಿದುಬಂದಿದೆ. ಆದರೆ ಅಖಿಲ ಭಾರತೀಯ ವೀರಶೈವ ಮಹಾಸಭಾವು ಯಡಿಯೂರಪ್ಪ ಅವರ ಪುತ್ರ ಮತ್ತು ಬಿಜೆಪಿ ಕರ್ನಾಟಕ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಉತ್ತರಾಧಿಕಾರಿಯಾಗಿ ನೋಡಲು ಬಯಸಿದೆ ಎಂದು ಮೂಲಗಳು ತಿಳಿಸಿವೆ.

ವಿಜಯೇಂದ್ರ ಅವರು ಉನ್ನತ ಹುದ್ದೆಯನ್ನು ಅಲಂಕರಿಸಲು ಅರ್ಹರಾಗಿರುವುದರಿಂದ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಶಿಫಾರಸು ಮಾಡಲು ನಾವೆಲ್ಲರೂ ಸಿದ್ಧತೆ ನಡೆಸಬೇಕಿದೆ ಎಂದು ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಲಿಮಿಟೆಡ್ ಅಧ್ಯಕ್ಷ ಬಿ ಎಸ್ ಪರಮಶಿವಯ್ಯ ಅವರು ಹೇಳಿದ್ದಾರೆ.

ಶನಿವಾರ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತೀಯ ವೀರಶೈವ ಮಹಾಸಭಾದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿದ್ದು, ಸಭೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ಯಡಿಯೂರಪ್ಪ ಅವರು ನವೆಂಬರ್ 2020 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸಮಿತಿಯನ್ನು ಸ್ಥಾಪಿಸಿದ್ದರು. ಪರಮಶಿವಯ್ಯ ಅವರನ್ನು ಮೊದಲ ಅಧ್ಯಕ್ಷರಾಗಿ ನೇಮಿಸಿದ್ದರು.

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯವ ವಿಚಾರ ತಿಳಿದಿದ್ದ ಯಡಿಯೂರಪ್ಪ ಅವರು, ಭವಿಷ್ಯದಲ್ಲಿ ಸಮುದಾಯದ ಬೆಂಬಲ ಪಡೆಯುವ ಸಲುವಾಗಿ ಇಂತಹ ನಿರ್ಧಾರಗಳನ್ನು ತೆಗೆದುಕೊಂಡಿದ್ದರು ಎಂಬ ಮಾತುಗಳೂ ಕೂಡ ಕೇಳಿಬರುತ್ತಿವೆ.

ಯಡಿಯೂರಪ್ಪ ಅವರ ನಿರೀಕ್ಷೆಗಳಂತೆಯೇ ಇದೀಗ ಸಮುದಾಯ ವಿಜಯೇಂದ್ರ ಪರವಾಗಿ ಆಗ್ರಹಗಳನ್ನು ವ್ಯಕ್ತಪಡಿಸುತ್ತಿದ್ದು, ಬಿಜೆಪಿ ನಾಯಕತ್ವಕ್ಕೆ ಇದು ತಲೆನೋವಾಗಿ ಪರಿಣಮಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಹಿಂದುಳಿದ ವರ್ಗಗಳ ನಾಯಕರಿಗಾಗಿ ನವೆಂಬರ್ 21 ರಂದು ಸಚಿವ ಕೆ ಎಸ್ ಈಶ್ವರಪ್ಪ ಅವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ಆಯೋಜಿಸಲು ಪಕ್ಷವು ಮುಂದಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com