ಪ್ರಧಾನಿ ತೀರ್ಮಾನವೇ ಅಖಂಡ ಸತ್ಯವೇ; ದೇಶದಲ್ಲಿ ವಿಚಾರಣೆ, ಪೊಲೀಸ್, ಕೋರ್ಟ್ ಅಗತ್ಯವಿಲ್ಲವೇ: ಸಿದ್ದರಾಮಯ್ಯ ಲೇವಡಿ

ಬಿಟ್ ಕಾಯಿನ್ ಪ್ರಕರಣದಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗಿತೋಪದೇಶ ಮಾಡಿರುವುದು ಪರಮಾಶ್ಚರ್ಯವಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ...
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗಿತೋಪದೇಶ ಮಾಡಿರುವುದು ಪರಮಾಶ್ಚರ್ಯವಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಲೇವಡಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಆರೋಪಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳುವ ಮೂಲಕ ದೇಶದಲ್ಲಿ ವಿಚಾರಣೆ, ಪೊಲೀಸ್, ಕೋರ್ಟ್ ಅಗತ್ಯವಿಲ್ಲ ಎಂಬುದನ್ನು ಸಾಬೀತುಪಡಿಸಲು ಹೊರಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಆರೋಪದ ಬಗ್ಗೆ ತನಿಖೆ ನಡೆಸಿ ನಿಮ್ಮ ಮೇಲಿನ ಆರೋಪವನ್ನು ಸುಳ್ಳೆಂದು ಸಾಬೀತುಪಡಿಸಿ ಎಂದು ಹೇಳಬೇಕಾಗಿದ್ದ ಪ್ರಧಾನಿ ಮೋದಿ, ಆರೋಪವನ್ನೇ ನಿರ್ಲಕ್ಷಿಸಿ ಎಂದು ಹೇಳಿದರೆ ಹೇಗೆ? ಅಪರಾಧ ಪ್ರಕರಣಗಳ ತನಿಖೆಗೆ ಪೊಲೀಸ್ ಇಲಾಖೆ, ನ್ಯಾಯಾಲಯಗಳ ಅಗತ್ಯ ಇಲ್ಲವೇ? ಪ್ರಧಾನಿಯವರ ಏಕಪಕ್ಷೀಯ ತೀರ್ಮಾನವೇ ಅಂತಿಮವೇ ಎಂದು ಲೇವಡಿ ಮಾಡಿದ್ದಾರೆ.

ಬಿಟ್ ಕಾಯಿನ್ ಹಗರಣದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತನಿಖಾ ಸಂಸ್ಥೆಗಳಿಂದಲೇ ತನಿಖೆ ನಡೆಯುತ್ತಿದೆ. ಬಸವರಾಜ ಬೊಮ್ಮಾಯಿಯವರು ಈಗಿನ ಮುಖ್ಯಮಂತ್ರಿಗಳು ಮಾತ್ರ ಅಲ್ಲ ಹಿಂದಿನ ಗೃಹಮಂತ್ರಿಯೂ ಹೌದು. ಪ್ರಧಾನ ಮಂತ್ರಿಗಳು ಆರೋಪವನ್ನು ನಿರ್ಲಕ್ಷಿಸಿ ಎಂದರೆ ತನಿಖೆ ಕೈಬಿಡಿ ಎಂದಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಬಿಟ್ ಕಾಯಿನ್ ಹಗರಣದಲ್ಲಿ ಬಸವರಾಜ ಬೊಮ್ಮಾಯಿ ಭಾಗಿಯೋ ಇಲ್ಲವೋ ನಮಗೆ ಗೊತ್ತಿಲ್ಲ, ಅವರು ಅಪರಾಧಿಗಳೆಂದು ಯಾರೂ ಹೇಳಿಲ್ಲ. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷಿಸಿ ಎಂಬುದಷ್ಟೆ ನಮ್ಮ ಆಗ್ರಹ. ತನಿಖೆ ನಡೆಸಲು ಹಿಂಜರಿಕೆ ಯಾಕೆ? ಕಾಂಗ್ರೆಸ್ ನಾಯಕರ ಹೆಸರು ಇದೆ ಎಂದು ಹೇಳಿ ನಮ್ಮ ಬಾಯಿ ಮುಚ್ಚಿಸಲು ಪ್ರಯತ್ನ ಮಾಡಬೇಡಿ. ಕೇಂದ್ರ ಮತ್ತು ರಾಜ್ಯಗಳಲ್ಲಿ ನಿಮ್ಮದೇ ಸರ್ಕಾರ ಇದೆ. ತನಿಖೆ ನಡೆಸಿ ಅಪರಾಧಿಗಳನ್ನು ಬಯಲಿಗೆಳೆಯಿರಿ, ಅವರೆಲ್ಲ ಯಾವ ಪಕ್ಷದವರು ಎನ್ನುವುದನ್ನು ಆ ಮೇಲೆ ನೋಡಿಕೊಳ್ಳೋಣ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com