ಬಿಜೆಪಿಯವರಿಂದಲೇ ಬಿಟ್ ಕಾಯಿನ್ ದಂಧೆ ಬಗ್ಗೆ ನಮಗೆ ಮಾಹಿತಿ, ಇದನ್ನು ನಾವು ಸುಮ್ಮನೆ ಬಿಡುವುದಿಲ್ಲ: ಡಿ ಕೆ ಶಿವಕುಮಾರ್
ಬಿಟ್ ಕಾಯಿನ್ ವಿಚಾರವನ್ನು ನಾವು ಸುಮ್ಮನೆ ಬಿಟ್ಟುಬಿಡಲ್ಲ, ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಪ್ರಧಾನಿಯವರು ಬಿಟ್ಬಿಡಿ ಎಂದರೆ ಬಿಟ್ಬಿಡೋದಕ್ಕೆ ಆಗತ್ತ, ವಿ ವಿಲ್ ಕಂ ಬ್ಯಾಕ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗುಡುಗಿದ್ದಾರೆ.
Published: 12th November 2021 01:25 PM | Last Updated: 12th November 2021 02:32 PM | A+A A-

ಡಿ ಕೆ ಶಿವಕುಮಾರ್(ಸಂಗ್ರಹ ಚಿತ್ರ)
ಬೆಂಗಳೂರು: ಬಿಟ್ ಕಾಯಿನ್ ವಿಚಾರವನ್ನು ನಾವು ಸುಮ್ಮನೆ ಬಿಟ್ಟುಬಿಡಲ್ಲ, ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಪ್ರಧಾನಿಯವರು ಬಿಟ್ಬಿಡಿ ಎಂದರೆ ಬಿಟ್ಬಿಡೋದಕ್ಕೆ ಆಗತ್ತ, ವಿ ವಿಲ್ ಕಂ ಬ್ಯಾಕ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಇಂದು ಮಧ್ಯಾಹ್ನ 2 ಗಂಟೆಗೆ ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಲಿದ್ದು, ಅದರಲ್ಲಿ ಖ್ಯಾತ ನ್ಯಾಯವಾದಿ ಪೊನ್ನಂ ಕೂಡ ಭಾಗವಹಿಸುತ್ತಾರೆ. ಇಂದಿನ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಯಾವ್ಯಾವ ವಿಷಯಗಳನ್ನು ಪ್ರಸ್ತಾಪ ಮಾಡುತ್ತಾರೆ ಎಂದು ಕುತೂಹಲ ಕೆರಳಿದೆ.
ಬಿಜೆಪಿ ನಾಯಕರಿಂದಲೇ ನಮಗೆ ಬಿಟ್ ಕಾಯಿನ್ ದಂಧೆ ಬಗ್ಗೆ ಮಾಹಿತಿ ಬಂದಿದೆ ಎಂದು ಡಿ ಕೆ ಶಿವಕುಮಾರ್ ಪುನರುಚ್ಛರಿಸಿದ್ದಾರೆ. ಬಿಟ್ ಕಾಯಿನ್ ದಂಧೆ ಪ್ರಕರಣವನ್ನು ಮೊದಲಿನಂದಲೂ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಸರ್ಕಾರದಿಂದ ಬಿಜೆಪಿಯವರಿಗೆ ಎಷ್ಟು ಬೇಕೋ, ಹೇಗೆ ಬೇಕೊ ಅಷ್ಟನ್ನು ಮಾತ್ರ ಬಹಿರಂಗಪಡಿಸಿದ್ದಾರೆ.ರಾಜ್ಯದ ಜನತೆಗೆ ಸಂಬಂಧಪಟ್ಟ ಈ ಪ್ರಕರಣವನ್ನು ಪ್ರಧಾನಿ ಬಿಟ್ ಬಿಡಿ ಎಂದರೆ ಬಿಡಲಾಗುತ್ತದೆಯೇ, ಇದು ಜನರ ವಿಚಾರ, ಈ ದೇಶದಲ್ಲಿ ಯಾರೇ ಅವ್ಯವಹಾರ ಮಾಡಿದರೂ ತಪ್ಪೇ, ಅದು ಕಾಂಗ್ರೆಸ್ ನವರಾಗಲಿ, ಬಿಜೆಪಿಯವರಾಗಲಿ, ಜನಸಾಮಾನ್ಯರಾಗಲಿ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಬಿಟ್ ಕಾಯಿನ್ ಆರೋಪಿಗೆ ನಲಪಾಡ್, ದರ್ಶನ್ ಲಮಾಣಿ ಸಂಪರ್ಕ: ತಮ್ಮ ತಪ್ಪನ್ನು ಬಿಜೆಪಿ ತಲೆಗೆ ಕಟ್ಟುವ ಚಾಳಿ ಕಾಂಗ್ರೆಸ್ ಗೆ!
ಈಗಾಗಲೇ ಪೊಲೀಸ್ ನವರು ಸಿಸಿಬಿಯಿಂದ ಇಡಿಗೆ ಪ್ರಕರಣವನ್ನು ಬರೆದಿದ್ದೇವೆ ಎನ್ನುತ್ತಾರೆ. ಅವರೇ ಚಾರ್ಚ್ ಶೀಟ್ ಸಲ್ಲಿಸಿದ್ದಾರೆ. ಇಲ್ಲಿ ಒಂದು ಕಾಯಿನ್ ಆಗಿರಲಿ, ಹತ್ತು ಕಾಯಿನ್, ನೂರು, ಸಾವಿರ, ಲಕ್ಷಾಂತರ ಕಾಯಿನ್ ಆಗಿರಲಿ, ಸತ್ಯಾಂಶ ಹೊರಗೆ ಬರಲಿ ಎಂದರು.
ದಂಧೆಯ ಬಗ್ಗೆ ಸಾಕ್ಷಿ ಬಹಿರಂಗಪಡಿಸುವುದು ಖಂಡಿತ: ಬಿಟ್ ಕಾಯಿನ್ ದಂಧೆಯ ಬಗ್ಗೆ ಕಾಂಗ್ರೆಸ್ ಸತ್ಯಾಂಶವನ್ನು ಖಂಡಿತಾ ಹೊರತರಲಿದೆ. ಈ ಬಗ್ಗೆ ಬಿಜೆಪಿ ಸಚಿವರೇ, ಅಧಿಕಾರಿಗಳೇ ನಮಗೆ ಮಾಹಿತಿಯನ್ನು ನೀಡುತ್ತಿದ್ದಾರೆ. ಇವತ್ತು ಸಂಜೆ ನಮ್ಮ ಆದ್ಯತೆ ಬದಲಾಗಬಹುದು ಎಂದು ಕೂಡ ಡಿ ಕೆ ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.
ಇದನ್ನೂ ಓದಿ: ಝಣ ಝಣ ಕ್ರಿಪ್ಟೋ ಕಾಂಚನದಲ್ಲಿ... ಖುರ್ಚಿ ಹೈ ಕಮಾಂಡ್ ಲಾಂಛನದಲ್ಲಿ... (ಅಂತಃಪುರದ ಸುದ್ದಿಗಳು)
ಬಿಟ್ ಕಾಯಿನ್ ಪ್ರಕರಣ ಮುಚ್ಚಿ ಹಾಕೋ ಪ್ರಯತ್ನ ಮಾಡ್ತಾ ಇದಾರೆ. ನಿನ್ನೆ ಕುಮಾರಸ್ವಾಮಿ ಕೂಡ ಮಾತನಾಡಿದ್ದಾರೆ. ಗೃಹ ಸಚಿವ ಅರಗ ಜ್ಞಾನೇಂದ್ರ ತಮಗೆ ಅನುಕೂವಾಗುವಂತಹ ಮಾಹಿತಿ, ದಾಖಲೆ ಹೊರಹಾಕಿ ಬೇರೆಯವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ.ಈ ಪ್ರಕರಣದಲ್ಲಿ ಹಲವು ರಾಜಕಾರಣಿಗಳ ಮತ್ತವರ ಮಕ್ಕಳು ಯಾಗಿದ್ದಾರೆ ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯ ಹೊರಗೆ ಹಾಕಬೇಕೆಂದು ಸಾರ್ವಜನಿಕರು ಪ್ರಧಾನ ಮಂತ್ರಿ ಅವರಿಗೆ ಬರೆದಿರುವ ದಾಖಲೆಗಳನ್ನು ಬಿಜೆಪಿ ನಾಯಕರು ಏಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಸವಾಲು ಹಾಕಿದರು.