ಝಣ ಝಣ ಕ್ರಿಪ್ಟೋ ಕಾಂಚನದಲ್ಲಿ... ಖುರ್ಚಿ ಹೈ ಕಮಾಂಡ್ ಲಾಂಛನದಲ್ಲಿ... (ಅಂತಃಪುರದ ಸುದ್ದಿಗಳು)

-ಸ್ವಾತಿ ಚಂದ್ರಶೇಖರ್ಅಂತೂ ಇಂತೂ ಕಾಂಗ್ರೆಸ್ಸ್ ಗೆ ಬಿಜೆಪಿ ಮೇಲೆ ಹರಿಹಾಯಲು ಒಂದು ಸಮರ್ಥ ವಿಷಯ ಸಿಕ್ಕಂತಾಗಿದೆ. ಅಷ್ಟೇ ಅಲ್ಲ ಕಾಂಗ್ರೆಸ್ ಮನಸ್ಸು ಮಾಡಿದರೆ ದೇಶದಲ್ಲೇ ಇದನ್ನ ದೊಡ್ಡ ಸುದ್ದಿ ಮಾಡಬಹುದು. 
ಸಿಎಂ ಬೊಮ್ಮಾಯಿ, ಬಿಟ್ ಕಾಯಿನ್
ಸಿಎಂ ಬೊಮ್ಮಾಯಿ, ಬಿಟ್ ಕಾಯಿನ್

ಅಂತೂ ಇಂತೂ ಕಾಂಗ್ರೆಸ್ಸ್ ಗೆ ಬಿಜೆಪಿ ಮೇಲೆ ಹರಿಹಾಯಲು ಒಂದು ಸಮರ್ಥ ವಿಷಯ ಸಿಕ್ಕಂತಾಗಿದೆ. ಅಷ್ಟೇ ಅಲ್ಲ ಕಾಂಗ್ರೆಸ್ ಮನಸ್ಸು ಮಾಡಿದರೆ ದೇಶದಲ್ಲೇ ಇದನ್ನ ದೊಡ್ಡ ಸುದ್ದಿ ಮಾಡಬಹುದು. 

ಕಾಂಗ್ರೆಸ್ ಗೆ ವಿಷಯವೇನೊ ಸಿಗುತ್ತಲೇ ಇದೆ. ಆದರೆ ರಾಷ್ಟ್ರಮಟ್ಟದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಬಗ್ಗೆ ಮಾತಾಡದ ಕಾಂಗ್ರೆಸ್, ಇನ್ನೂ ಬಹುತೇಕ ಜನಕ್ಕೆ ಅರ್ಥವಾಗದ ಬಿಟ್ ಕಾಯಿನ್ ಹಗರಣದ ಬಗ್ಗೆ ಏನು ಮಾತಡ್ಯಾರು? ಎಂಬುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ! 

ಯಾರು ಏನು ಮಾತಾಡಬೇಕು ಅದಕ್ಕೆ ಮತ್ತೆ ಬರೋಣ ಮೊದಲು ಆಗಿರುವುದು ಏನು ಎಂದು ತಿಳಿಯೋಣ. 2020 ರಲ್ಲಿ ಡ್ರಗ್ಸ್ ಕೊಳ್ಳುವಿಕೆ ಮತ್ತು ಮಾರಾಟದ ಕೇಸ್ ನಲ್ಲಿ ಸಿಕ್ಕಿಹಾಕೊಂಡಿರುವ ಶ್ರೀಕೃಷ್ಣ ಉರ್ಫ್ ಶ್ರೀಕಿ ಲೀಲೆಗಳು ಒಂದಾ ಎರಡಾ...  ಬಹುಶಃ ಈ ಹಿಂದೆ ಯಾವ ಸ್ಕ್ಯಾಮ್ ಕೂಡ ಇಂತಹ ದೊಡ್ಡ ಪ್ರಮಾಣದಲ್ಲಿ ನಡೆದಿದ್ದು ಮತ್ತು ಯಾವ ಸ್ಕ್ಯಾಂಸ್ಟರ್ ಈ ರೀತಿ ಯೋಚಿಸಿದ್ದು ಇತಿಹಾಸದಲ್ಲಿ ಇಲ್ಲ. 

25 ವರ್ಷದ ಈ ಯುವಕ ಬಿಟ್ ಕಾಯಿನ್, ಸರ್ಕಾರಿ ಈ ಕಾಮರ್ಸ್ ಜಾಲತಾಣ ಹೀಗೆ ಹಲವು ಜಾಲತಾಣಗಳಲ್ಲಿ ಹೊಕ್ಕಿ ಅಲ್ಲಿನ ಮಾಹಿತಿ, ಅಲ್ಲಿನ ಹಣ ಅಲ್ಲಿನ ಡಿಜಿಟಲ್ ಕರೆನ್ಸಿ ಯನ್ನು ಕದಿಯುವ ನಿಪುಣ. ಕರ್ನಾಟಕದಲ್ಲಿ ಈತ ಕೇವಲ ಸರ್ಕಾರಿ ಈ ಕಾಮರ್ಸ್ ಜಾಲತಾಣದಲ್ಲಿ ಕದ್ದಿರುವ ಹಣ ಸುಮಾರು 15 ಕೋಟಿ.

ಇನ್ನು ಈ ಜಾಲತಾಣ ಬಳಸಿಕೊಂಡು ಸಾವಿರಾರು ಕೋಟಿ ರೂಪಾಯಿ ಟೆಂಡರ್ ಗಳನ್ನ ಗೆಲ್ಲಿಸಿ ಕೊಡುತ್ತೇನೆ ಎಂದು ನೀರಾವರಿ ಇಲಾಖೆಯಲ್ಲಿ ದೊಡ್ಡ ದೊಡ್ಡ ಟೆಂಡರ್ ಗಳನ್ನ ಮಾಡಿಸಿಕೊಟ್ಟಿರುವುದರಿಂದ ಬಂದ ಹಣ ಲೆಕ್ಕಕ್ಕೆ ಇಲ್ಲ. ಕೃಷ್ಣ ಮೇಲೆದಂಡೆ  ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಈತನ ಕೈಚಳಕ ಇದೆ ಎನ್ನಲಾಗುತ್ತಿದೆ. 

ಇನ್ನು ಬಿಟ್ ಕಾಯಿನ್ ಹ್ಯಾಕ್ ಮಾಡಿರುವುದನ್ನು ಕೂಡಿಸಿದರೆ ಒಟ್ಟು 10 ಸಾವಿರ ಕೋಟಿ ಹಗರಣ ಎಂಬುದು ಸದ್ಯದ ಚರ್ಚೆ. ಆದರೆ ಇದೆಲ್ಲವೂ ನಡೆದಿರುವುದು ಈಗ ಸಿಎಂ, ಆಗ ಹೋಮ್ ಮಿನಿಸ್ಟರ್ ಆಗಿದ್ದ ಬೊಮ್ಮಾಯಿ ಕಾಲದಲ್ಲಿ ಎಂಬುದು ಇದರಲ್ಲಿರುವ ಪ್ರಮುಖ ಆರೋಪ.  ಸಿಎಂ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರು ಆದ ನಳಿನ್ ಕುಮಾರ್ ಕಟೀಲು ಅವರ ಕೈವಾಡವಿದೆ ಎನ್ನುವ ಶಂಕೆ ಮತ್ತು ಆರೋಪ ಕಾಂಗ್ರೆಸ್ಸ್ ನದ್ದು.

ಇದೇ ಸಮಯಕ್ಕೆ ಪಿಎಂ ಕಛೇರಿಗೆ ಇದರ ಬೆಗ್ಗೆ ಪತ್ರ ರವಾನೆ ಆಗಿದ್ದು, ಹೆಚ್ಚಿನ ತನಿಖೆ ನಡೆಯಬೇಕು ಎಂಬ ಒತ್ತಡವಿದೆ. ಪ್ರಧಾನಿ ಇದರ ಬಗ್ಗೆ ಉತ್ತರ ಕೊಡುವಂತೆ ಸಿಎಂ ಗೆ ಸೂಚನೆ ನೀಡಿದ್ದಾರೆ ಎಂಬ ಗುಲ್ಲು ಹರಡಿದೆ.

ಇನ್ನು ಹೆಚ್ಚು ತಕರಾರು ಬೇಡ ಎಂದು ಇಡಿ ಮತ್ತು ಸಿಬಿಐ ಗೆ ಈ ಕೇಸ್ ಅನ್ನು ಒಪ್ಪಿಸಿ ಸದ್ಯಕ್ಕೆ ಸುಮ್ಮನಾಗಿದ್ದಾರೆ. ಇನ್ನು ಸಿಎಂ ಪುತ್ರನ ಕೈವಾಡ ಇದರಲ್ಲಿದೆ ಎಂದು ಬಿಜೆಪಿಯ ಕೆಲವು ಮಂತ್ರಿ ಪುತ್ರರು ಮಾಡುತ್ತಿರುವ ಆರೋಪ. 

ಒಂದು ಕಡೆ ಉಪಚುನಾವಣೆಯ ಸೋಲು ಮತ್ತೊಂದು ಕಡೆ ಈ ಆರೋಪ. ಎರಡೂ, ಸಿಎಂ ನ ಕೊಂಚ ತಣ್ಣಗಾಗಿಸಿದೆ. ಇದರ ಜೊತೆಗೆ ನವೆಂಬರ್ ಹತ್ತರ ದೆಹಲಿ ಪ್ರವಾಸ ಇನ್ನಷ್ಟು ಕುತೂಹಲವನ್ನ ಗರಿಗೆದರಿಸಿದೆ. 

ಹೈ ಕಮಾಂಡ್ ಯೋಚನೆ ಆದರೂ ಏನು...? ಬಿಟ್ ಹಿಡಿತಾರ ಮೋದಿ?

ಕರ್ನಾಟಕದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಸಿಎಂ ಬದಲಾಗಿದ್ದಾರೆ. ಅದು ಒಂದಲ್ಲ ಎರಡು ಮೂರು ಬಾರಿ ಇನ್ನು ಕಳೆದ ಬಾರಿ ಹಾಟ್ರಿಕ್ ಗೆ ನಿಂತಿತಲ್ಲ ಕನ್ನಡಿಗರ ಅದೃಷ್ಟ ಎಂದು ಸ್ವಯಂ ಬಿಜೆಪಿ ನಾಯಕರೇ ಸಮಾಧಾನ ಪಟ್ಟರು. 

ಆದರೆ ಈ ಬಾರಿ ಅಂತಹ ಯಾವ ಅನಾಹುತಕ್ಕೂ ಬಿಜೆಪಿ ದಾರಿ ಮಾಡಿ ಕೊಡುವುದಿಲ್ಲ ಎಂಬುದು ವರಿಷ್ಠರ ಅಭಿಪ್ರಾಯ. ಇನ್ನು ಒಂದು ವೇಳೆ ಈ ಆರೋಪಗಳು ಸತ್ಯ ಎಂದು ಮೇಲ್ನೋಟಕ್ಕೆ ಕಂಡರೂ ತಪ್ಪು ಮಾಡಿದ್ದಾರೆ ಎಂದು ಬೊಮ್ಮಾಯಿ ಅವರನ್ನು ಸಿಎಂ ಖುರ್ಚಿಯಿಂದ ಪಕ್ಷದ ನಾಯಕರೇ ಕೆಳಗಿಳಿಸಿ, ಕಾಂಗ್ರೆಸ್ ಗೆ 2023 ರ ಚುನಾವಣೆಯನ್ನು ಹೂವಿನ ಪಲ್ಲಿಕ್ಕಿಯಲ್ಲಿಟ್ಟುಕೊಡಲು ಇದು ಹಳೆಯ ಬಿಜೆಪಿ ಅಲ್ಲ. ಇನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಚಾರಕ್ಕೆ ಬಂದರೆ 15 ತಿಂಗಳ ಅವಧಿ ಬಾಕಿ ಇರುವ ಕಟೀಲ್ ರನ್ನು ಬದಲಿಸಬಹುದೇನೋ ಆದರೆ ಅದು ಚುನಾವಣೆಗೆ ಯಾವ ದುಷ್ಪರಿಣಾಮ ಆಗದೆ ಇದ್ದರೆ ಮಾತ್ರ. 

ಹಾಗಾಗಿ ಸದ್ಯಕ್ಕೆ ಸಿಎಂ ಬದಲಾಗುವರು ಎಂದು ಪತ್ರಕರ್ತರ ಮೂಲಕ ಪ್ರತಿಯೊಬ್ಬ ಪೈಪೋಟಿದಾರರು ಒಂದಿಷ್ಟು  ಸುದ್ದಿ ಬಿತ್ತುವುದನ್ನು ಸದ್ಯಕ್ಕೆ ಬಿಡಲೇ ಬೇಕಾದ ಅನಿವಾರ್ಯ ಇದೆ.

ಪಕ್ಷ ಉಚ್ಚಾಟನೆ ಮಾಡಿದರೇನು, ಜನ ಕೈ ಹಿಡಿದರಲ್ಲ,  ಕೆಸಿಆರ್ ಲೆಕ್ಕಾಚಾರ ಪಾತಾಳ ಇಳಿಸಿದ ಈತಳ!

ಇದು ತೆಲಂಗಾಣದಲ್ಲಿ ನಡೆದ ಸದ್ಯದ ಬೈ ಎಲೆಕ್ಷನ್ ಯಶೋಗಾಥೆ. 24,500 ಇದು ಒಂದು ಸರ್ಕಾರದ ವಿರುದ್ಧ, ವ್ಯವಸ್ಥೆ ವಿರುದ್ಧ, ಮಂತ್ರಿವರ್ಗದ ವಿರುದ್ಧ, ಆಡಳಿತದ ವಿರುದ್ಧ, ಸಿಎಂ ವಿರುದ್ಧ ಪಡೆದ ಜನಮತ. 

ಒಂದು ಜಿಲ್ಲಾ ಪಂಚಾಯ್ತಿಗೆ ಓರ್ವ ಮಂತ್ರಿಯನ್ನು, ಓರ್ವ ತಾಲೂಕು ಪಂಚಾಯ್ತಿಗೆ ಓರ್ವ ಶಾಸಕನನ್ನು, ಒಂದು ಜಿಲ್ಲಾ ಪಂಚಾಯತಿ ಅಧ್ಯಕ್ಷನಿಗೆ ತಲಾ 50 ಲಕ್ಷ, ತಾಲೂಕು ಪಂಚಾಯ್ತಿ ಅಧ್ಯಕ್ಷನಿಗೆ ತಲಾ 10 ಲಕ್ಷ, ಗ್ರಾಮ ಪಂಚಾಯ್ತಿ ಅಧ್ಯಕ್ಷನಿಗೆ ತಲಾ 5 ಲಕ್ಷ ನೀಡಿ ಒಟ್ಟು ಹೀಗೆ ಕೇವಲ ಒಂದು ಉಪಚುನಾವಣೆಗೆ 150 ಕೋಟಿ ಖರ್ಚು ಮಾಡಿ ಸೋತ ವಿಧಗ್ಧ ಪರಿಸ್ಥಿತಿ ಕೆಸಿಆರ್ ದ್ದು ಆದರೆ, ಇನ್ನು ಚುನಾವಣೆಯಲ್ಲಿ ತನ್ನ ಸಕಲ ಬಲವನ್ನು ಪ್ರದರ್ಶಿಸಿ ಸುಮಾರು 80 ಕೋಟಿ ಖರ್ಚು ಮಾಡಿ ಗೆದ್ದು ಬೀಗುತ್ತಿರುವ ಕೀರ್ತಿ ಹುಝುರಬಾದ್ ಶಾಸಕ ಈತಳ ರಾಜೇಂದ್ರರದ್ದು.

2014 ತೆಲಂಗಾಣ ಮತ್ತು ಆಂಧ್ರಕ್ಕೆ ಅತ್ಯಂತ ಮಹತ್ವದ ಸಂದರ್ಭ ಅಖಂಡ ಆಂಧ್ರ ಇಬ್ಭಾಗವಾಗಿ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ತೆಲಂಗಾಣ ರಾಜ್ಯದಲ್ಲಿ ಸರ್ಕಾರ ಸ್ಥಾಪಿಸಿದ ವರ್ಷ. ತೆಲಂಗಾಣ ಎಂದರೆ ಕೆಸಿಆರ್ ಮಾತ್ರ ಕಾಣುವರು
 
ಅದರೆ ಕೆಸಿಆರ್ ಹಿಂದೆ ದೈತ್ಯ ಶಕ್ತಿ ಆಗಿ ನಿಂತ ಈತಳ ರಾಜೇಂದ್ರರನ್ನು ಜನ ಮರೆತಿಲ್ಲ ಎಂಬುದು ಈ ಚುನಾವಣೆ ನಿರೂಪಿಸಿತು. ಅಧಿಕಾರಕ್ಕೆ ಬಂದ ನಂತರ ವಿತ್ತ ಮಂತ್ರಿ ಆಗಿ ನೇಮಕಗೊಂಡ ಈತಳ ರಾಜೇಂದ್ರ ಕೆಸಿಆರ್ ಸಂಬಂಧ ವೃದ್ಧಿ ಆಗುತ್ತಲೇ ಇತ್ತು. ಆದರೆ 2018 ರಲ್ಲಿ ನಡೆದ ಚುನಾವಣೆ ಮತ್ತೊಮ್ಮೆ ಸಂದ ಗೆಲುವು ಇವರ ಸಂಬಂಧವನ್ನ  ಹದಗೆಡಿಸಿತು, ಇನ್ನು ಎರಡನೇ ಬಾರಿ ಆರೋಗ್ಯ ಖಾತೆ ನೀಡಿರುವುದಕ್ಕೆ ಈತಳ ರಾಜೇಂದ್ರ ಬಹಿರಂಗವಾಗಿ ಸರ್ಕಾರ ಕೆಸಿಆರ್ ವಿರುದ್ಧ ಮಾತಾಡಲು ಆರಂಭಿಸಿದರು. ಇನ್ನು ಸ್ವಂತ ಪಕ್ಷಕ್ಕೆ ಮುಜುಗರ ತರುವ ಕೆಲಸಗಳನ್ನು ಪತ್ರಿಕಾ ಹೇಳಿಕೆ ನೀಡಲು ಆರಂಭಿಸಿದರು ಇದು ಯಾವುದೇ ಸ್ವಾಭಿಮಾನಿ ನಾಯಕನಿಗೆ ಸಹಿಸಲು ಸಾಧ್ಯವಿಲ್ಲ, ಕೆಸಿಆರ್ ಕೂಡ ಸಹಿಸಲಿಲ್ಲ. ಹೀಗೆ ಪಕ್ಷದಿಂದ ಉಚ್ಛಾಟನೆಗೊಂಡ ಈತಳ ರಾಜೇಂದ್ರ ಬಿಜೆಪಿ ಪಕ್ಷ ಸೇರಿದರು.

ಇತಿಹಾಸ ಮರು ಸೃಷ್ಟಿ ಆಗುವುದೇ?

ಈ ಹಿಂದೆ ಟಿಡಿಪಿ ಪಕ್ಷದಿಂದ ಮುನಿಸಿಕೊಂಡು ಬಂದ ಕೆಸಿಆರ್ ಇಂದು ತೆಲಂಗಾಣ ರಾಜ್ಯದ ಮುಖ್ಯಮಂತ್ರಿ, ಅಂದು ಚಂದ್ರ ಬಾಬು ನಾಯ್ಡು ವಿರುದ್ಧ ಮಾಡಿದ ಹೋರಾಟ 2003 ರಲ್ಲಿ ಗೆದ್ದ ಉಪ ಚುನಾವಣೆ ಇಂದು ಕೆಸಿಆರ್, ಟಿ ಆರ್ ಎಸ್  ಅಷ್ಟೇ ಅಲ್ಲ ಸ್ವಯಂ ತೆಲಂಗಾಣ ರಾಜ್ಯವನ್ನ ಸೃಷ್ಟಿಸಿತು.

ಈತಳ ರಾಜೇಂದ್ರ ಮತ್ತೆ ಗೆದ್ದರೆ ತೆಲಂಗಣಕ್ಕೆ ಓರ್ವ ದೊಡ್ಡ ದಲಿತ ನಾಯಕನ ಉಗಾಮವಾಗುವುದು ಎಂದು ಅರಿತ ಕೆಸಿಆರ್ ತಮ್ಮ ಸಕಲ ಶಕ್ತಿ ಪ್ರಯೋಗಿಸಿದರು. ಆದರೆ ಪ್ರಯೋಜನ ಆಗಲಿಲ್ಲ.

ಒಟ್ಟು 60 ಸಾವಿರ ದಲಿತ ಮತಗಳನ್ನು ಹೊಂದಿರುವ ಹುಝುರಾಬಾದ್ ಕ್ಷೇತ್ರ ಮುಂದಿನ ಚುನಾವಣೆಯಲ್ಲಿ ದಲಿತ ನಾಯಕನ ಮೂಲಕ ಇತಿಹಾಸ ಸೃಷ್ಟಿಸಬಹುದು ಎಂಬುದು ಕೆಸಿಆರ್ ಶಂಕೆ. ಅದು ನಿಜವಾಗಬಹುದೇನೋ.

ಬಿಜೆಪಿಗೆ ಸಂತಸ, ಬಂಡಿ ಸಂಜಯ್ ಗೆ ವಿರಸ. 

ಸಂಜಯ ಉವಾಚ: ಇನ್ನೇನು ಆರು ತಿಂಗಳಿದೆ ರಾಜ್ಯ ಚುನಾವಣೆಗೆ ಅನ್ನುವಾಗ "ಬಿಜೆಪಿಗೆ ಬನ್ನಿ" 

ರಾಜೇಂದ್ರ ಉವಾಚ: "ಈಗ ಬಾರದಿದ್ದರೆ ಕೆಸಿಆರ್ ಗೆ ನನ್ನ ಬಲ ತೋರಿಸುವುದು ಆದರೂ ಹೇಗೆ"? 

ಹೀಗೆ ಬಂಡಿ ಸಂಜಯ್ ನ ಸಂಕಟವನ್ನ ಅರಗಿಸಿಕೊಂಡು ಬಿಜೆಪಿ ಗೆ ಬಂದ ಗೆದ್ದಿದ್ದು ಒಂದು ಕಡೆ ಆದರೆ ಇನ್ನು ಬಂಡಿ ಸಂಜಯ್ ಗೆ ಉರುಳಾಗುವುದು ಮತ್ತೊಂದು ಕಡೆ ಎಂಬುದು ಸದ್ಯದ ಬಿಜೆಪಿ ತೆಲಂಗಾಣದ ಗುಸುಗುಸು. 

ತೆಲಂಗಾಣ ಚುನಾವಣೆಗೆ ಕರ್ನಾಟಕದ ಸಾಥ್

ಮುಂದಿನ ತಮ್ಮ ಭವಿಷ್ಯವನ್ನ ಯೋಚಿಸುತ್ತ ಚುನಾವಣೆಯಲ್ಲಿ ನೀರಸ ವ್ಯಕ್ತಿತ್ವ ಪ್ರದರ್ಶಿಸಿದ ಕೆಲವು ನಾಯಕರ ಮಧ್ಯೆ, ತೆಲಂಗಾಣ ಎಸ್ ಸಿ ಉಸ್ತುವಾರಿ ಆದ ಕೋಲಾರ ಸಂಸದರು ಪ್ರಚಾರದಲ್ಲಿ ಸಾತ್ ನೀಡಿದರೆ ಇನ್ನು ಇತ್ತ ಸಿಟಿ ರವಿ ಸಂಘಟನಾತ್ಮಕವಾಗಿ ರಾಜೇಂದ್ರರ ಜೊತೆ ನಿಂತರು. ಹೀಗೆ ಸದ್ಯದ ಚುನಾವಣೆ ಗೆದ್ದಾಯಿತು. ಈ ಗೆಲುವು ಮುಂದೆ ಗದ್ದುಗೆ ತರುವುದು ಎಂಬುದು ಸದ್ಯಕ್ಕೆ ದೂರದ ಮಾತು.

ಸ್ವಾತಿ ಚಂದ್ರಶೇಖರ್

swathichandrashekar92@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com