ಬಿವೈ ವಿಜಯೇಂದ್ರಗೆ ಹಾನಗಲ್ ಚುನಾವಣೆ ಉಸ್ತುವಾರಿ

ಹಾನಗಲ್ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಪಕ್ಷದ ಉಸ್ತುವಾರಿಗಳ ನೇಮಕದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಕೈ ಬಿಟ್ಟಿದ್ದಕ್ಕೆ ಬಿ.ವೈ. ವಿಜಯೇಂದ್ರ ಅವರ ಅಭಿಮಾನಿಗಳು ಸಾಮಾಜಿಕ ಜಾಲ...
ವಿಜಯೇಂದ್ರ
ವಿಜಯೇಂದ್ರ
Updated on

ಬೆಂಗಳೂರು: ಹಾನಗಲ್ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಪಕ್ಷದ ಉಸ್ತುವಾರಿಗಳ ನೇಮಕದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಕೈ ಬಿಟ್ಟಿದ್ದಕ್ಕೆ ಬಿ.ವೈ. ವಿಜಯೇಂದ್ರ ಅವರ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳ ಮೂಲಕ ಆಕ್ರೋಶ ಹೊರ ಹಾಕಿದ್ದರು. ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ವಿಜಯೇಂದ್ರ ಅವರನ್ನು ಹಾನಗಲ್ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ.

ಹಾನಗಲ್ ಕ್ಷೇತ್ರಕ್ಕೆ ಸಚಿವರಾದ ಮುರುಗೇಶ ನಿರಾಣಿ, ಜೆ.ಸಿ. ಮಾಧುಸ್ವಾಮಿ, ಬಿ.ಸಿ. ಪಾಟೀಲ್, ಶಿವರಾಮ್ ಹೆಬ್ಬಾರ್, ಶಿವಕುಮಾರ್ ಉದಾಸಿ, ಎನ್.ರವಿಕುಮಾರ್, ಮಹೇಶ್ ಟೆಂಗಿನಕಾಯಿ, ರಾಜುಗೌಡ, ನೆಹರೂ ಓಲೇಕಾರ, ಎಂ. ಚಂದ್ರಪ್ಪ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣ್ ಕುಮಾರ್ ಗುತ್ತೂರು ಅವರನ್ನು ಚುನಾವಣಾ ಉಸ್ತುವಾರಿಗಳಾಗಿ ಭಾನುವಾರ ನೇಮಕ ಮಾಡಲಾಗಿತ್ತು.

ಬಿ.ವೈ ವಿಜಯೇಂದ್ರ ಅವರ ಹೆಸರನ್ನು ಉದ್ದೇಶ ಪೂರ್ವಕವಾಗಿ ಕೈ ಬಿಡಲಾಗಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಸೂಚನೆಯ ಮೇರೆಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಬಿ.ವೈ. ವಿಜಯೇಂದ್ರ ಅಭಿಮಾನಿಗಳು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದರು.

ತಮ್ಮ ಅಭಿಮಾನಿಗಳ ಅಸಮಾಧಾನದ ಬಗ್ಗೆ ಟ್ವೀಟ್ ಮಾಡಿದ್ದ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ, ಉಪಚುನಾವಣೆ ಘೋಷಣೆಯಾಗಿರುವ ಎರಡು ಕ್ಷೇತ್ರಗಳ ಉಸ್ತುವಾರಿಗಳ ಪಟ್ಟಿಯಲ್ಲಿ ನನ್ನ ಹೆಸರಿಲ್ಲ ಎನ್ನುವ ಕಾರಣಕ್ಕೆ ಕೆಲವು ಅಭಿಮಾನಿಗಳು, ಕಾರ್ಯಕರ್ತರು ಪಕ್ಷದ ಹಿರಿಯ ನಾಯಕರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದು ಖಂಡಿತಾ ಸರಿಯಲ್ಲ, ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವುದೂ ಸೇರಿದಂತೆ ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸಲು ನಾನು ಕಟಿಬದ್ಧನಾಗಿದ್ದೇನೆ. ಪಕ್ಷದ ಗೆಲುವೇ ನಮಗೆ ಮುಖ್ಯ, ಇನ್ನ್ಯಾವುದೂ ಅಲ್ಲ. ಭಿನ್ನಾಭಿಪ್ರಾಯದ ಧ್ವನಿಗಳಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡುತ್ತದೆ, ವಿಪಕ್ಷಗಳಿಗೆ ಪರೋಕ್ಷ ನೆರವು ನೀಡಿದಂತಾಗುತ್ತದೆ. ಪಕ್ಷದ ತೀರ್ಮಾನದಂತೆ, ನಮ್ಮ ಎಲ್ಲ ನಾಯಕರ ಮಾರ್ಗದರ್ಶನದಲ್ಲಿ, ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ನಾವು ಕಾರ್ಯನಿರ್ವಹಿಸೋಣ. ಪಕ್ಷಕ್ಕೆ ಮುಜುಗರ ತರುವ ಯಾವುದೇ ವಿಷಯಕ್ಕೂ ನನ್ನ ಸಮ್ಮತಿಯಿಲ್ಲ. ನಮ್ಮ ಎಲ್ಲಾ ಪ್ರಯತ್ನಗಳನ್ನೂ ಪಕ್ಷದ ಹಿತ ಮತ್ತು ಗೆಲುವಿಗಾಗಿಯೇ ವಿನಿಯೋಗಿಸೋಣ ಎಂದು ಹೇಳಿದ್ದರು.

ಅವರ ಟ್ವೀಟ್ ಬೆನ್ನಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ಅವರು, ಹಾನಗಲ್ ಚುನಾವಣಾ ಉಸ್ತುವಾರಿಗಳ ಜೊತೆ ವಿಜಯೇಂದ್ರ ಅವರಿಗೂ ಉಸ್ತುವಾರಿಯ ಜವಾಬ್ದಾರಿ ವಹಿಸಿ ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com