ನಾನು ಯಾವುದೇ ಸಂಘ, ಸಂಸ್ಥೆ ಅಥವಾ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿಲ್ಲ: ಆರ್'ಎಸ್ಎಸ್ ಕುರಿತ ಹೇಳಿಕೆ ಬಗ್ಗೆ ಎಚ್​ಡಿಕೆ ಸ್ಪಷ್ಟನೆ

ತನ್ನ ತಂತ್ರಗಳ ಪೂರ್ಣಗೊಳಿಸಿಕೊಳ್ಳಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್) ಅಧಿಕಾರಿಗಳಿಗೆ ತರಬೇತಿ ನೀಡುತ್ತದೆ ಎಂದು ಆರೋಪಿಸಿದ್ದ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು, ಹೇಳಿಕೆ ಸಂಬಂಧ ಬುಧವಾರ ಸ್ಪಷ್ಟನೆ ನೀಡಿದ್ದಾರೆ. 
ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ
ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ತನ್ನ ತಂತ್ರಗಳ ಪೂರ್ಣಗೊಳಿಸಿಕೊಳ್ಳಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್'ಎಸ್ಎಸ್) ಅಧಿಕಾರಿಗಳಿಗೆ ತರಬೇತಿ ನೀಡುತ್ತದೆ ಎಂದು ಆರೋಪಿಸಿದ್ದ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು, ಹೇಳಿಕೆ ಸಂಬಂಧ ಬುಧವಾರ ಸ್ಪಷ್ಟನೆ ನೀಡಿದ್ದಾರೆ. 

ನಾನು ಯಾವುದೇ ಸಂಘ, ಸಂಸ್ಥೆ ಅಥವಾ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿಲ್ಲ. ಕೊರೋನಾ ಲಾಕ್ ಡೌನ್ ವೇಳೆಯಲ್ಲಿ ಪುಸ್ತಕ‌ ಓದಿದ್ದೆ. ಹಲವಾರು ಲೇಖಕರು ಬರೆದ ಮಹತ್ವದ ಪುಸ್ತಕಗಳನ್ನು ಓದಿದೆ. ಇತಿಹಾಸದ ಕೆಲ ಅಂಶಗಳ ಬಗ್ಗೆಯೂ ಅಧ್ಯಯನ ಮಾಡಿದೆ. ಆ ಪುಸ್ತಕಗಳಲ್ಲಿರುವ ಕೆಲ ಅಂಶಗಳನ್ನಷ್ಟೆ ನಾನು ಹೇಳಿದ್ದೇನೆಂದು ಹೇಳಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು, ವಾಸ್ತವವಾಗಿ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ಈ ಬಗ್ಗೆ ಜನರಿಗೆ ಅರ್ಥವಾಗುತ್ತಿಲ್ಲ. ಸತ್ಯ ಮುಚ್ಚಿಟ್ಟರೆ ತಮ್ಮ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ತಂದುಕೊಟ್ಟ ಮಹಾಪುರುಷರಿಗೆ ಅಪಚಾರ ಮಾಡಿದಂತೆ ಆಗುತ್ತದೆ. ಯಾವತ್ತಿದ್ದರೂ ಜನರಿಗೆ ಸತ್ಯ ಗೊತ್ತಾಗಲೇಬೇಕು. ಸತ್ಯ ಹೇಳಲು ನನಗೆ ಯಾವ ಹಿಂಜರಿಕೆ, ಭಯ ಇಲ್ಲ. ನನ್ನ ಹೇಳಿಕೆ ಯಾರ ಪರವೂ ಇಲ್ಲ ಅಥವಾ ವಿರೋಧವೂ ಇಲ್ಲ. ಸತ್ಯ ಚರ್ಚೆ ಆಗಬೇಕು ಎಂಬುದು ನನ್ನ ಅಭಿಲಾಷೆ. ನಾನು ಸತ್ಯದ ಪರ ಎಂದು ಬರೆದುಕೊಂಡಿದ್ದಾರೆ.

ನಿನ್ನೆಯಷ್ಟೇ ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿಯವರು ಆರ್'ಎಸ್ಎಸ್ ವಿರುದ್ದ ಕಿಡಿಕಾರಿದ್ದರು. 

ಬಿಜೆಪಿಯವರು ಆರ್'ಎಸ್ಎಸ್'ನ್ನು ಕೇಂದ್ರ ಬಿಂದುವಾಗಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಮೋದಿಯವರು ಕೂಡ ಆರ್'ಎಸ್ಎಸ್'ನ ಕೀಲುಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಆಡಳಿತವನ್ನು ಆರ್'ಎಸ್ಎಸ್ ಮಾಡುತ್ತಿದೆ. ಬಿಪಿಯಲ್ಲ ಎಂದು ಗಂಭೀರ ಆರೋಪ ಮಾಡಿದ್ದರು. 

ಈ ದೇಶದಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆರ್'ಎಸ್ಎಸ್'ಗೆ ಸಂಬಂಧ ಪಟ್ಟ ಪುಸ್ತಕ ಓದುತ್ತಿದ್ದೇನೆ. 1990ರಲ್ಲಿ ಬೆಳವಣಿಗೆ ಪ್ರಾರಂಭವಾಯಿತು, ಅಡ್ವಾಣಿ ಬಿಜೆಪಿ ಪಕ್ಷ ಕಟ್ಟುವ ಸಮಯ ಅದು. ಜಿನ್ನಾ ಅವರ ಬಗ್ಗೆ ಮಾತನಾಡಿದ್ದರಂತೆ, ಆಗ ಅಡ್ವಾಣಿ ಅವರಿಗೆ ಒಂದು ಮೆಸೇಜ್ ಹೋಗುತ್ತೆ. ಅಲ್ಲಿಂದ ಬಂದ ನಂತರ ನೀವು ಆರ್'ಎಸ್ಎಸ್ ಕಚೇರಿಗೆ ಬನ್ನಿ ಅಂತ. ಹೀಗೆ ಆ ಬಗ್ಗೆ ಓದುತ್ತಾ ಇದ್ದರೆ ಅವರ ಹಿಡನ್ ಅಜೆಂಡಾ ಗೊತ್ತಾಗುತ್ತಿದೆ ಎಂದು ಹೇಳಿದ್ದರು.

6-7 ತಿಂಗಳಿಂದ ಪುಸ್ತಕವನ್ನು ಓದುತ್ತಿದ್ದೇನೆ. ಇವತ್ತು ಈ ನಾಡಿನಲ್ಲಿ ಯುವಕರು ಬುದ್ದಿವಂತರಾಗದೇ ಇದ್ದರೆ ಕಷ್ಟವಾಗಲಿದೆ. ವಾಸ್ತವಾಂಶದ ಅರಿವು ಬಂದ ಮೇಲೂ ಅದರ ಬಗ್ಗೆ ಜನತೆಯ ಮುಂದೆ ಇಡದೇ ಇದ್ದರೆ ಜನರಿಗೆ ಮಾಡುವ ದ್ರೋಹ ಅದು. ಕರ್ನಾಟಕದಲ್ಲಿ ಸರ್ವ ಧರ್ಮ ರಕ್ಷಣೆ ಮಾಡುವ ಸರ್ಕಾರ ತರಬೇಕು. ಮೂಲಭೂತ ಹಕ್ಕುಗಳು ಪ್ರತಿ ಕುಟುಂಬಕ್ಕೆ ಕೊಡಬೇಕಾಗಿದೆ. ದೇಶದ ಬಡತನದ ಬಗ್ಗೆ, ಸಮಸ್ಯೆಗಳ ಬಗ್ಗೆ ಆರ್'ಎಸ್ಎಸ್ ಅವರ ಸಂಘದಲ್ಲಿ ಚರ್ಚೆ ಆಗಿಲ್ಲ. ದೇಶವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವುದು ಒಂದೇ ಅವರ ಅಜೆಂಡಾ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com