ಡಿಕೆ ಶಿವಕುಮಾರ್ ನನಗೆ ಗಾಡ್ ಫಾದರ್, ಅವರಿಗೆ ಕೈ ಮುಗಿದು ಕ್ಷಮೆ ಕೋರುತ್ತೇನೆ: ಸಲೀಂ
ಬೆಂಗಳೂರು: ಕೆಪಿಸಿಸಿಯಿಂದ ಆರು ವರ್ಷಗಳ ಕಾಲ ಉಚ್ಛಾಟನೆಗೊಂಡಿರುವ ಎಂ.ಎ. ಸಲೀಂ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಗುರುವಾರ ಕೈಮುಗಿದು ಕ್ಷಮೆ ಕೋರಿದ್ದಾರೆ.
ಎಂ.ಎ. ಸಲೀಂ ಕೆಪಿಸಿಸಿ ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಕುರಿತು ಲಘುವಾಗಿ ಮತ್ತು ಬೇಜವಾಬ್ದಾರಿಯಿಂದ ಮಾತನಾಡಿದ ಕಾರಣ ಸಲೀಂ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿ ಪಕ್ಷದ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಡಾ.ಕೆ. ರೆಹಮಾನ್ ಖಾನ್ ಬುಧವಾರ ಆದೇಶ ಹೊರಡಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ಕುರಿತು ಖಾಸಗಿ ಸುದ್ದಿವಾಹಿನಿಯೊಂದರ ಜೊತೆಗೆ ಮಾತನಾಡಿರುವ ಸಲೀಂ ಅವರು, "ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡಬಾರದಿತ್ತು. ಅಚಾತುರ್ಯದಿಂದ ಇಂತಹ ಘಟನೆ ನಡೆದಿದೆ. ನನ್ನಿಂದಲೇ ದೊಡ್ಡ ತಪ್ಪಾಗಿದೆ. ಅವರು ಯಾವುದೇ ಶಿಕ್ಷೆ ನೀಡಿದರೂ ಅನುಭವಿಸಲು ಸಿದ್ಧ ಇದ್ದೇನೆ. ಶಿವಕುಮಾರ್ ಅವರು ನನಗೆ ರಾಜಕೀಯವಾಗಿ ಗಾಡ್‌ಫಾದರ್. ಅವರೇ ನನಗೆ ಅವಕಾಶಗಳನ್ನು ನೀಡಿದ್ದರು. ಈ ರೀತಿ ಆಗಿರುವುದಕ್ಕೆ ಬಹಳ ನೊಂದಿದ್ದೇನೆ" ಎಂದು ಕ್ಷಮೆ ಕೋರಿದ್ದಾರೆ.
ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ ನಿಜ. ಆದರೆ, ನನ್ನ ರಕ್ತ, ಕೊನೆಯ ಉಸಿರು ಇರುವವರೆಗೂ ಕಾಂಗ್ರೆಸ್ ಪಕ್ಷಕ್ಕಾಗಿಯೇ ಕೆಲಸ ಮಾಡುತ್ತೇನೆ. ಪಕ್ಷದ ಸದಸ್ಯತ್ವ ಇಲ್ಲದಿದ್ದರೂ ಸಹ ನನ್ನ ಬದ್ಧತೆಯನ್ನು ಪಕ್ಷಕ್ಕಾಗಿ ಉಳಿಸಿಕೊಂಡು ಕೆಲಸ ಮುಂದುವರಿಸುತ್ತೇನೆ,
'ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಯಾವುದೇ ಕೆಟ್ಟ ದೃಷ್ಟಿಯಿಂದ ಹೇಳಿಕೆ ನೀಡಿಲ್ಲ. ಕೆಲ ದಿನಗಳ ಹಿಂದೆ ಅವರು ರಾಜಭವನದ ಮುಂದೆ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಶಿವಕುಮಾರ್ ಅವರು ಕುಡಿದಿದ್ದಾರೆ, ಲೋ ಬಿಪಿ ಆಗಿದೆಯಾ ಎಂಬ ಕುರಿತು ಚರ್ಚೆಗಳು ನಡೆದಿದ್ದವು. ಆ ಬಗ್ಗೆ ಉಗ್ರಪ್ಪನವರಿಗೆ ಹೇಳುತ್ತಿದ್ದೆ. ಸಿದ್ದರಾಮಯ್ಯ ಅವರ ತರ ಖಡಕ್ ಆಗಿ ಇರಬೇಕು. ಆ ರೀತಿಯ ಬಾಡಿ ಲಾಂಗ್ವೇಜ್ ಇದ್ದರೆ ಮುಂದೆ ಪಕ್ಷ ಅಧಿಕಾರಕ್ಕೆ ಬರಲು ಸುಲಭವಾಗುತ್ತದೆ ಎಂಬ ಕುರಿತು ಮಾತನಾಡಿದ್ದೆ ಅಷ್ಟೇ'.
"ಜಲಸಂಪನ್ಮೂಲ ಇಲಾಖೆಯಲ್ಲಿ ಹಿಂದೆ ಶೇ.6 ಕಮಿಷನ್ ಇತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿ.ವೈ. ವಿಜಯೇಂದ್ರ ಅವರು ಶೇ.12ಕ್ಕೆ ಹೆಚ್ಚಿಸಿದ್ದಾರೆ ಎಂದು ಹೇಳಿದ್ದೇನೆ. ಡಿ.ಕೆ. ಶಿವಕುಮಾರ್ ಅವರು ಕಮಿಷನ್ ಹೆಚ್ಚಿಸಿದ್ದಾರೆ, ಕಮಿಷನ್ ಪಡೆಯುತ್ತಿದ್ದಾರೆ ಎಂದು ನಾನು ಹೇಳಿಲ್ಲ. ಆದರೆ, ವಿಡಿಯೋದಲ್ಲಿ ನನ್ನ ಪೂರ್ಣ ಮಾತುಗಳು ಬಾರದೆ ಮಧ್ಯದಿಂದ ಮಾತನಾಡಿರುವುದನ್ನೇ ತೆಗೆದುಕೊಂಡು ಪ್ರಸಾರ ಮಾಡಲಾಗಿದೆ'' ಎಂದು ತಿಳಿಸಿದ್ದಾರೆ.
"ಒಟ್ಟಾರೆಯಾಗಿ ನನ್ನಿಂದ ತಪ್ಪಾಗಿದೆ. ನನ್ನ ಅಭಿಪ್ರಾಯವನ್ನೂ ಕೇಳದೆ ನನ್ನನ್ನು ಪಕ್ಷದಿಂದ ಉಚ್ಛಾಟನೆಯನ್ನೂ ಮಾಡಲಾಗಿದೆ. ನಾನು ಯಾವ ಮುಖ ಇಟ್ಟುಕೊಂಡು ಶಿವಕುಮಾರ್ ಅವರನ್ನು ಭೇಟಿ ಮಾಡಬೇಕು ಗೊತ್ತಿಲ್ಲ. ಕೆಲವರು ನನಗೆ ಬೆದರಿಕೆ ಕರೆಗಳನ್ನೂ ಮಾಡಿದ್ದಾರೆ. ಶಿವಕುಮಾರ್ ನೀಡುವ ಯಾವುದೇ ಶಿಕ್ಷೆ ಅನುಭವಿಸಲು ನಾನು ಸಿದ್ಧ ಇದ್ದೇನೆ. ಎಲ್ಲರೂ ಸಹ ಈ ವಿಷಯವನ್ನು ಇಲ್ಲಿಗೇ ಕೈಬಿಡಬೇಕು' ಮನವಿ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ