'ಎನ್ ಇಪಿ ಜಾರಿ ನಿರ್ಧಾರ ಹಿಂಪಡೆಯಿರಿ': ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಯನ್ನು ಜಾರಿಗೊಳಿಸುವ ನಿರ್ಧಾರ ಹಿಂಪಡೆಯುವಂತೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶಿಕ್ಷಣದ ಮೂಲಕ ಕೋಮುವಾದದ ಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದು ಎನ್ ಇಪಿ ಹಿಂದಿನ ಉದ್ದೇಶವಾಗಿದೆ ಮತ್ತು ಇದು ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳ ಮೇಲೆ ರಾಜ್ಯಗಳ ಸ್ವಾಯತ್ತತೆಯನ್ನು ಉಲ್ಲಂಘಿಸುತ್ತದೆ ಎಂದು ಮಾಜಿ ಸಿಎಂ ಹೇಳಿದ್ದಾರೆ.
ಉನ್ನತ ಶಿಕ್ಷಣ ಸಚಿವ ಸಿ ಎನ್ ಅಶ್ವಥ್ ನಾರಾಯಣ್ ಅವರ ಕಚೇರಿಯಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಬಗ್ಗೆ ವಿರೋಧ ಪಕ್ಷದ ನಾಯಕರೊಂದಿಗೆ ಚರ್ಚಿಸುವ ಸಂಬಂಧ ಅಪಾಯಿಂಟ್ಮೆಂಟ್ ಕೋರಿ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, "ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣ ತಜ್ಞರು ಅಥವಾ ವಿರೋಧ ಪಕ್ಷಗಳೊಂದಿಗೆ ಯಾವುದೇ ಚರ್ಚೆಯಿಲ್ಲದೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಈ ನೀತಿಯನ್ನು ಜಾರಿಗೆ ತರಲು ಸರ್ಕಾರ ಈಗಾಗಲೇ ನಿರ್ಧರಿಸಿದೆ ಮತ್ತು ಉದ್ಘಾಟಿಸಿರುವುದನ್ನು ಗಮನಿಸಬೇಕು ಎಂದರು.
ಎನ್ ಇಪಿ ಅನುಷ್ಠಾನ ಉದ್ಘಾಟಿಸಿದ ನಂತರ ಈಗ ಚರ್ಚೆಗೆ ಕರೆಯುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಅವರು ಅಶ್ವಥ್ ನಾರಾಯಣ್ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.
ಶಿಕ್ಷಣ ಮತ್ತು ಆರೋಗ್ಯದಂತಹ ವಿಷಯಗಳಲ್ಲಿ ನೀತಿಯ ಬದಲಾವಣೆಯು ಸಣ್ಣ ವಿಷಯಗಳಲ್ಲ ಎಂದು ತಿಳಿಸಿದ ಅವರು, ವ್ಯಾಪಕವಾದ ಪರಿಣಾಮಗಳೊಂದಿಗೆ ಇಂತಹ ನೀತಿಗಳನ್ನು ರೂಪಿಸುವ ಮೊದಲು ವಿವರವಾದ ಚರ್ಚೆಗಳನ್ನು ಪ್ರಜಾಸತ್ತಾತ್ಮಕವಾಗಿ ಆರಂಭಿಸಬೇಕಿತ್ತು ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ