ಕೋಮು ಸೌಹಾರ್ದತೆ ಕಾಪಾಡಲು ಕಾಯ್ದೆ ಮೂಲಕ ತಾತ್ಕಾಲಿಕ ಕ್ರಮ ಕೈಗೊಂಡಿದ್ದೇವೆ: ಸಚಿವ ಮಾಧುಸ್ವಾಮಿ

ಕೋಮು ಸೌಹಾರ್ದತೆ ಕಾಪಾಡುವ ಸಲುವಾದಿ ತಾತ್ಕಾಲಿಕವಾಗಿ ಧಾರ್ಮಿಕ ಕೇಂದ್ರ ಉಳಿಸಲು ಕ್ರಮ ಕೈಗೊಂಡಿದ್ದೇವೆಂದು ಕಾನೂನು ಸಚಿವ ಮಾಧುಸ್ವಾಮಿಯವರು ಶುಕ್ರವಾರ ಹೇಳಿದ್ದಾರೆ.
ಕಾನೂನು ಸಚಿವ ಮಾಧುಸ್ವಾಮಿ
ಕಾನೂನು ಸಚಿವ ಮಾಧುಸ್ವಾಮಿ
Updated on

ಬೆಂಗಳೂರು: ಕೋಮು ಸೌಹಾರ್ದತೆ ಕಾಪಾಡುವ ಸಲುವಾದಿ ತಾತ್ಕಾಲಿಕವಾಗಿ ಧಾರ್ಮಿಕ ಕೇಂದ್ರ ಉಳಿಸಲು ಕ್ರಮ ಕೈಗೊಂಡಿದ್ದೇವೆಂದು ಕಾನೂನು ಸಚಿವ ಮಾಧುಸ್ವಾಮಿಯವರು ಶುಕ್ರವಾರ ಹೇಳಿದ್ದಾರೆ. 

ಧಾರ್ಮಿಕ ಕಟ್ಟಡಗಳನ್ನು ನೆಲಸಮ ಮಾಡದಂತೆ ರಕ್ಷಣೆ ನೀಡುವ, ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕಾರವಾದ ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ವಿಧೇಯಕಕ್ಕೆ ದೀರ್ಘ ಚರ್ಚೆ, ಜಿಜ್ಞಾಸೆ, ಆರೋಪ-ಪ್ರತ್ಯಾರೋಪದ ಬಳಿಕ ಧ್ವನಿಮತದ ಮೂಲಕ ಶುಕ್ರವಾರ ವಿಧಾನ ಪರಿಷತ್ ನಲ್ಲೂ ಅಂಗೀಕಾರ ನೀಡಲಾಯಿತು. 

ಹಿಂದೂ ಸಂಘಟನೆಗಳ ಆಕ್ರೋಶದ ಹಿನ್ನೆಲೆಯಲ್ಲಿ ಸರ್ಕಾರ ಕಾನೂನು ತರಲು ಹೊರಟಿದೆ. ಇನ್ನು ಮುಂದೆ ನಾಯಿಕೊಡೆಗಳಂತೆ ಹುಟ್ಟುವ ಧಾರ್ಮಿಕ ಕೇಂದ್ರಗಳಿಗೆ ಕಡಿವಾಣ ಹಾಕುವ ಬಗ್ಗೆ ವಿಧೇಯಕದಲ್ಲಿ ಪ್ರಸ್ತಾಪವಾಗಿಲ್ಲ ಎಂಬ ಪ್ರತಿಪಕ್ಷಗಳ ತರಾಟೆ ನಡುವೆಯೂ ವಿಧೇಯಕಕ್ಕೆ ಸರ್ಕಾರ ಅಂಗೀಕಾರ ಪಡೆಯಿತು. ವಿಧೇಯಕ ಬೇಡ ಎಂದು ಸಾರ್ವಜನಿಕವಾಗಿ ಹೇಳಿ ನೋಡೋಣ ಎಂದು ತಿರುಗೇಟು ನೀಡಿದ ಸರ್ಕಾರದ ಮಾತಿಗೆ ಪ್ರತಿಪಕ್ಷಗಳು ಮೆತ್ತಾಗಾಗಬೇಕಾಯಿತು.
 
ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಮಸೂದೆ ಮಂಡಿಸಿ ಮಾತನಾಡಿದ ಮಾಧುಸ್ವಾಮಿಯವರು, ಸುಪ್ರೀಂಕೋರ್ಟ್‌ ಆದೇಶ ಪಾಲನೆಗಾಗಿ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಅಧಿಕಾರಿಗಳು ಆರಂಭಿಸಿದ್ದರು. ಇದರಿಂದ ಸಮಾಜದಲ್ಲಿ ಶಾಂತಿಭಂಗ ಆಗುವ ಅಪಾಯ ಎದುರಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ತಾತ್ಕಾಲಿಕವಾಗಿ ರಕ್ಷಣೆ ಒದಗಿಸುವುದಕ್ಕೆ ಸೀಮಿತವಾಗಿ ಮಸೂದೆ ತರಲಾಗಿದೆ’ ಎಂದು ವಿವರಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಇನ್ನೂ ಬಾಕಿ ಇದೆ. ನ್ಯಾಯಾಲಯದ ಅಂತಿಮ ತೀರ್ಮಾನ ಬರಬೇಕಿದೆ. ನ್ಯಾಯಾಲಯದ ಅಂತಿಮ ಆದೇಶ ಬರುವವರೆಗೆ ಅಥವಾ ರಾಜ್ಯ ಸರ್ಕಾರದ ಮುಂದಿನ ತೀರ್ಮಾನದವರೆಗೆ ಅಂತಹ ಧಾರ್ಮಿಕ ಕಟ್ಟಡಗಳಿಗೆ ಈ ಮಸೂದೆ ರಕ್ಷಣೆ ನೀಡಲಿದೆ ಎಂದರು.

ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ಸಂಬಂಧಿಸಿದಂತೆ ಸರ್ಕಾರ ನಿರ್ದಿಷ್ಟವಾಗಿ ಒಂದು ತೀರ್ಮಾನಕ್ಕೆ ಬರಲೇಬೇಕಿದೆ. ಪ್ರತಿ ಪ್ರಕರಣವನ್ನೂ ಪ್ರತ್ಯೇಕವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳುವ ಯೋಚನೆಯಿದೆ. ಅಲ್ಲಿಯವರೆಗೂ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡದಂತೆ ಈ ಮಸೂದೆ ತಡೆಯಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಸದಾಗಿ ಯಾವುದೇ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸದಂತೆಯೂ ಮಸೂದೆ ನಿರ್ಬಂಧಿಸಲಿದೆ ಎಂದು ತಿಳಿಸಿದರು. 

2009ರಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಲಾಗಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ಇಡೀ ದೇಶಕ್ಕೆ ಅನ್ವಯಿಸುವಂತೆ ಸುಪ್ರೀಂಕೋರ್ಟ್‌ ನಿರ್ದೇಶನಗಳನ್ನು ನೀಡಿದೆ. ಸುಪ್ರೀಂಕೋರ್ಟ್‌ ಸೂಚನೆಯನ್ನು ಪಾಲಿಸಬೇಕೆಂಬ ಅಧಿಕಾರಿಗಳ ತೀರ್ಮಾನದಿಂದ ಈಗ ರಾಜ್ಯದಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಸಾರ್ವಜನಿಕ, ಸರ್ಕಾರಿ ಸ್ಥಳಗಳಲ್ಲಿ ನಿರ್ಮಾಣವಾಗಿರುವ ಧಾರ್ಮಿಕ ಕೇಂದ್ರಗಳನ್ನು ಕ್ರಮಬದ್ಧಗೊಳಿಸಲು ನಾವು ಈ ವಿಧೇಯಕವನ್ನು ತರುತ್ತಿಲ್ಲ. ರಕ್ಷಿಸಲು ಮುಂದಾಗಿದ್ದೇವೆ. ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಈ ವೇಳೆ ಮಾತನಾಡಿದ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು, ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ರಕ್ಷಣೆ ಒದಗಿಸಲು ನಾಗರಿಕ ಸರ್ಕಾರವೊಂದು ಮಸೂದೆ ಮಂಡಿಸುವುದು ಸಂವಿಧಾನ ವಿರೋಧಿ ನಡೆ. ಎಲ್ಲ ಧರ್ಮಗಳ ಧಾರ್ಮಿಕ ಕಟ್ಟಡಗಳೂ ಮೌಢ್ಯ ಬಿತ್ತುವ ತಾಣಗಳಾಗಿವೆ. ಅಸಮಾನತೆ, ಅಸ್ಪೃಶ್ಯತೆಯನ್ನು ಪೋಷಿಸುತ್ತಿವೆ. ಅಂತಹ ಅಕ್ರಮ ಕಟ್ಟಡಗಳನ್ನು ಏಕೆ ರಕ್ಷಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸುಪ್ರೀಂಕೋರ್ಟ್‌ ಆದೇಶ ಪಾಲಿಸಿ, ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಬೇಕು. ಅಸಮಾನತೆಯನ್ನು ತೊಡೆದುಹಾಕಲು ಸರ್ಕಾರ ಕಾನೂನು ಮಾಡಬೇಕು. ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ರಕ್ಷಿಸುವುದರಿಂದ ಸಮಾಜಕ್ಕೆ ಯಾವುದೇ ರೀತಿಯಲ್ಲೂ ಒಳಿತಾಗುವುದಿಲ್ಲ ಎಂದು ಹೇಳಿದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com