ಸಿದ್ಧು, ಡಿಕೆಶಿ ಹುನ್ನಾರ, ಪೆಟ್ಟು ಕೊಡುವರೆ ಬೆಳಗಾವಿ ಮತದಾರ!

ಕೊರೋನಾ ಅಟ್ಟಹಾಸ, ಮತ್ತೊಂದು ಕಡೆ ನೆತ್ತಿ ಸುಡುವ ರಣಬಿಸಿಲಿನಲ್ಲಿ ಬೇಡವೆಂದರೂ ಮೂರು ಕ್ಷೇತ್ರಗಳ ಉಪಚುನಾವಣೆ ಮನೆಯ ಬಾಗಿಲಿಗೆ ಬಂದಿದೆ. ನಾಳಿದ್ದು ಶನಿವಾರ ಬೆಳಗಾವಿ ಲೋಕಸಭಾ ಮತ್ತು ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ ಇಂದು ಸಂಜೆಯೇ ಬಹಿರಂಗ ಪ್ರಚಾರ ಅಂತ್ಯವಾಗಿದೆ.
ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತಿತರರು
ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತಿತರರು

ಬೆಂಗಳೂರು: ಕೊರೋನಾ ಅಟ್ಟಹಾಸ, ಮತ್ತೊಂದು ಕಡೆ ನೆತ್ತಿ ಸುಡುವ ರಣಬಿಸಿಲಿನಲ್ಲಿ ಬೇಡವೆಂದರೂ ಮೂರು ಕ್ಷೇತ್ರಗಳ ಉಪಚುನಾವಣೆ ಮನೆಯ ಬಾಗಿಲಿಗೆ ಬಂದಿದೆ. ನಾಳಿದ್ದು ಶನಿವಾರ ಬೆಳಗಾವಿ ಲೋಕಸಭಾ ಮತ್ತು ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ ಇಂದು ಸಂಜೆಯೇ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬೆಳಗಾವಿ ಲೋಕಸಭೆ ಚುನಾವಣೆ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಕೆರಳಿಸಿದೆ.ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಇತಿಹಾಸದ ಪುಟ ತೆಗೆದುನೋಡಿದರೆ ಬೆಳಗಾವಿ ಕಾಂಗ್ರೆಸ್  ಭದ್ರಕೋಟೆಯಾಗಿದ್ದರೂ, ಎನಿಸಿದ್ದರೂ ಈಗಿನ ಪರಿಸ್ಥಿತಿ ಬೇರೆಯಾಗಿದೆ. 2004 ರಿಂದಲೂ ಸುರೇಶ್ ಅಂಗಡಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಬೆಳಗಾವಿ ಬಿಜೆಪಿಯ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಈಗ ಅವರ ಅಕಾಲಿಕ ನಿಧನದಿಂದ ಅವರ ಪತ್ನಿ ಮಂಗಳ ಅಂಗಡಿ ಕಣಕ್ಕಿಳಿದಿದ್ದಾರೆ ಕಾಂಗ್ರೆಸ್ ನಿಂದ ಜಿಲ್ಲೆಯ ಪ್ರಮುಖ ರಾಜಕಾರಣಿ ಸತೀಶ್ ಜಾರಕಿಹೊಳಿ ರಾಜಕೀಯ ಎದುರಾಳಿಯಾಗಿದ್ದಾರೆ.

ಮಂಗಳ ಮತ್ತು ಸತೀಶ್ ಇಬ್ಬರ ಪೈಕಿ ಪೈಕಿ ಯಾರಿಗೆ ವಿಜಯಮಾಲೆ ಒಲಿಯಲಿದೆ. ಕಾಂಗ್ರೆಸ್ ನಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಸತೀಶ್ ಜಾರಕಿಹೊಳಿ ಅವರಿಗೆ ಚುನಾವಣೆಯಲ್ಲಿ  ಸ್ಪರ್ಧೆ ಮಾಡುವುದು ಇಷ್ಟವಿರಲಿಲ್ಲ, ಬಲವಂತದ ಕಾರಣಕ್ಕಾಗಿ ಅವರು ಚುನಾವಣೆಗೆ ನಿಂತಿದ್ದಾರೆ ಎಂಬ ಗುಸು-ಗುಸು ಮಾತುಗಳು ಕೇಳಿ ಬರುತ್ತಿದೆ.

ರಾಜ್ಯ ರಾಜಕೀಯದಲ್ಲಿ ತನ್ನದೇ ಹಿಡಿತ ಮತ್ತು ಪ್ರಭಾವ ಹೊಂದಿರುವ ಜಾರಕಿಹೊಳಿ ಅವರನ್ನು ರಾಜ್ಯ ರಾಜಕಾರಣದಿಂದಲೇ ಹೊರಗಿಡಬೇಕು ಇದರಿಂದ ಮುಂದೆ ನಮ್ಮ ದಾರಿಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರದ ಮೇಲೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ .ಶಿವಕುಮಾರ್ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜಾಣ , ತಂತ್ರಗಾರಿಕೆ ಹುನ್ನಾರದ ಕಾರಣವೇ ಸತೀಶ್ ಜಾರಕಿಹೊಳಿ ಒಲ್ಲದ ಮನಸ್ಸಿನಿಂದ  ಕಣಕ್ಕೆ ಇಳಿಯುವಂತೆ ಮಾಡಿದೆ ಎಂಬ ಮಾತುಗಳೆ ಅವರ ಬೆಂಬಲರಿಗೆ ನುಂಗಲಾರದ ಬಿಸಿತುಪ್ಪವಾಗಿದೆ.! ಅವರನ್ನು ರಾಜ್ಯ ರಾಜಕೀಯದಿಂದಲೇ ದೂರವಿಡಬೇಕು ಎಂಬ ವ್ಯವಸ್ಥಿತ ಲೆಕ್ಕಾಚಾರ ಕಾಂಗ್ರೆಸ್  ನಾಯಕರ ಸಂಚು ಆಗಿರುವ ಕಾರಣ  ಅವರಿಗೆ ಫಲಿತಾಂಶ ಮುಳುವಾಗಬಹುದೆನೋ? ಕಾಂಗ್ರೆಸ್ ಸೋಲಿಸಲು ಬೇರೆಯವರು ಬೇಡವೆ ಬೇಡ ಕಾಂಗ್ರೆಸ್ ನಾಯಕರೇ  ಸಾಕು ಎಂಬ ಮಾತು ಇಲ್ಲಿ ಕೆಲಸ ಮಾಡಲೂಬಹುದು ಎಂಬ ಆತಂಕವೂ ಮಡುಗಟ್ಟಿದೆ.

ಈ ಕಾರಣದಿಂದ  ಇಲ್ಲಿ ಮಂಗಳ ಅಂಗಡಿ ಅವರೇ ಅವರಿಗೆ ವಿಜಯಲಕ್ಷ್ಮಿ ನಿರೀಕ್ಷಿತವಾಗಿ ಒಲಿಯಬಹುದು ಎನ್ನಲಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರ ಈಗ ಬಿಜೆಪಿಯ ಭದ್ರ ಕೋಟೆಯಾಗಿದೆ. ಅದನ್ನು ಸುಲಭವಾಗಿ  ಬೇರ್ಪಡಿಸಲು ಕಾಂಗ್ರೆಸ್ ಗೆ  ಕಷ್ಟವಾಗುತ್ತಿದೆ.  ಕಾಂಗ್ರೆಸ್ ಮೂಲಗಳ  ಪ್ರಕಾರ ಸತೀಶ್ ಜಾರಕಿಹೊಳಿ ಅವರಿಗೆ ಗೆಲುವಿಗಿಂತ ಸೋಲೇ ಸದ್ಯ ಮುಖ್ಯ..!! ಏಕೆಂದರೆ ಅವರು ಒಲ್ಲದ ಮನಸ್ಸಿನಿಂದಲೇ ಚುನಾವಣೆಗೆ ಇಳಿದಿದ್ದಾರೆ ಎನ್ನಲಾಗಿದೆ ಹೇಗಿದ್ದರೂ ಅವರು ಹಾಲಿ ಶಾಸಕರಾದ ಕಾರಣ  ಸೋತರೂ ಅವರಿಗೆ ರಾಜಕೀಯವಾಗಿ ನಷ್ಟವಾಗುವುದಿಲ್ಲ, ರಾಜ್ಯ ರಾಜಕಾರಣದಲ್ಲಿ ಅವರ  ಪಾತ್ರ ಬದಲಾಗುವುದೂ ಇಲ್ಲ. ಅವರು ಸಹ ಪ್ರಬಲ ಸಿಎಂ ಹುದ್ದೆಯ ಅಭ್ಯರ್ಥಿ.!ಈ  ಒಳಗಿನ ಲೆಕ್ಕಾಚಾರ ನೋಡಿದರೆ ಮಂಗಳ ಅವರಿಗೆ ಗೆಲುವಿನ  ಹಾದಿ ಮಂಗಳವಾಗಲೂಬಹುದು. 

ಬಿಜೆಪಿಯ ಪರವಾಗಿ ಸಹೋದರರಾದ ಬಾಲಚಂದ್ರ ಜಾರಕಿ ಮತ್ತು ಲಖನ್ ಜಾರಕಿ ಹೋಳಿ ನಿಂತಿದ್ದಾರೆ. ಸಿಡಿ ಹಗರಣದ ಆರೋಪಕ್ಕೆ ಸಿಲುಕಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಟಸ್ಥರಾಗಿದ್ದಾರೆ. ಇದು ಕೂಡ ಬಿಜೆಪಿಯ ಗೆಲುವಿಗೆ ಕೊಂಚ ಮಟ್ಟಿಗೆ ಸಹಕಾರಿಯಾಗಲಿದೆ. ಇದುವರೆಗೆ ಗೋಕಾಕದ ಅಳಿಯನನ್ನು ಗೆಲ್ಲಿಸುತ್ತಾ ಬಂದ ಜನತೆ ಈಗ ಮಗಳನ್ನು ಕೈ ಬಿಡುವುದಿಲ್ಲ ಉಡಿ ತುಂಬಿ, ಗೆಲ್ಲಿಸಿ ದೆಹಲಿಗೆ ಕಳುಹಿಸಿಕೊಡುತ್ತಾರೆ ಎಂದು ಮಂಗಳ ಆತ್ಮ ವಿಶ್ವಾಸದಲ್ಲಿ ಇದ್ದಾರೆ.

ಜಾತಿ ಲೆಕ್ಕಾಚಾರದಿಂದ ನೋಡಿದರೂ ಬೆಳಗಾವಿಯಲ್ಲಿ ಮಂಗಳ ಅವರಿಗೆ ಅನುಕೂಲಕರ ಅಂಶಗಳೇ ಹೆಚ್ಚಾಗಿ ಕಾಣಿಸುತ್ತಿದೆ. ಮೇಲಾಗಿ ರಾಷ್ಟ್ರ ರಾಜಕಾರಣ ಅಳೆದು ನೋಡಿದರೆ ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಮತ ಹಾಕಿದರೂ ಯಾವುದೇ ಪ್ರಯೋಜನ ಇಲ್ಲ ಎಂಬ ಭಾವನೆಯೂ ಇದೆ. ಉಪ ಚುನಾವಣಾ ಫಲಿತಾಂಶಗಳು ಆಡಳಿತ ಪಕ್ಷದ ಪರವಾಗಿಯೇ ಬರುವುದು ಸಹಜ. ಈ ಲೆಕ್ಕದಿಂದ ನೋಡಿದರೂ ಬಿಜೆಪಿ ಹೆಚ್ಚು ಅನುಕೂಲವಾಗಲಿದೆ. ಕಾಂಗ್ರೆಸ್  ಒಳ ಪಿತೂರಿಗಳು ಸಹ ಗೆಲುವಿಗೆ ಅಡ್ಡಿಯಾಗಲೂಬಹುದು. 

ಹಾಗೆ ನೋಡಿದರೆ ಈ ಚುನಾವಣೆ ಡಿ.ಕೆ. ಶಿವಕುಮಾರ್ ಅವರಿಗೆ ಬಹಳ ಮಹತ್ವವಾಗಿದೆ. ಒಕ್ಕಲಿಗ ಸಾಮ್ರಾಜ್ಯದಲ್ಲಿ ಅವರು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದರಲ್ಲಿ ವಿಫಲರಾಗಿದ್ದಾರೆ. ಕೆ.ಆರ್ ಪೇಟೆ ಮತ್ತು ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಧ್ಯವಾಗದ ಶಿವಕುಮಾರ್ ಉತ್ತರ ಕರ್ನಾಟಕದಲ್ಲಿ ಪ್ರಭಾವ ಬೀರಿ ಪಕ್ಷವನ್ನು ದಡ ಸೇರಿಸಲು ಸಾಧ್ಯವೇ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಬಸವಕಲ್ಯಾಣದಲ್ಲಿ  ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ  ಮೂಲಕ ಪರೋಕ್ಷವಾಗಿ ಬಿಜೆಪಿ ಗೆಲುವಿಗೆ ದಾರಿ ಮಾಡಿಕೊಡಲು ಹೊರಟಿದೆ ಎಂಬ ಮಾತುಗಳಲ್ಲಿ ಸ್ವಲ್ಪವೂ  ಸತ್ಯಾಂಶವಿಲ್ಲ ಎಂದು ತಳ್ಳಿಹಾಕಲಾಗದು.

ಜೊತೆಗೆ ಬಿಜೆಪಿ ಇಲ್ಲಿ ತನ್ನದೇ  ಪಕ್ಷದ ಬಂಡಾಯ ಎದುರಿಸುತ್ತಿರುವ ಕಾರಣ ಕಾಂಗ್ರೆಸ್ ಗೆ ಇದರಿಂದ ರಾಜಕೀಯ ಲಾಭ ದೊರಕಬಹುದು. ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಅನುಕಂಪದ ಅಲೆಯ  ಮೇಲೆ ಗೆಲುವಿನ ದಡಸೇರಲೂಬಹುದು ಆದರೆ ಕಡೆ ಘಳಿಗೆಯ ಕಾಂಚಾಣದ  ಪ್ರಭಾವ ಇದನ್ನು ತಿರುವು- ಮುರುವು ಮಾಡಲೂಬಹುದು. ಏಕೆಂದರೆ  ಇಂದಿನ ಚುನಾವವಣೆಗಳು  ವಿಷಯಾಧಾರಿತವಾಗಿ ನಡೆಯಲಿವೆ ಎಂದು ಯಾರು  ಖಚಿತವಾಗಿ ಹೇಳಲು ಆಗದು. ಹೀಗಾಗಿ ಪಲಿತಾಂಶ  ದುಡ್ಡು, ಕೊನೆ ಘಳಿಗೆ ಕೈ ಚಳಕ ಇದನ್ನೆ  ಹೆಚ್ಚಾಗಿ ಅವಲಂಭಿಸಿದೆ. ಇನ್ನು ಮಸ್ಕಿಯಲ್ಲಿ ಅನುಕಂಪ ಕೈಹಿಡಿಯಲಿದೆಯೇ? ಇಲ್ಲವೇ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ  ವಿಜಯೇಂದ್ರ ಕೈಚಳಕ, ಪ್ರಭಾವ   ಕೆಲಸ ಮಾಡಬಹುದೇ ಎಂಬುದು ಬಹಳ ಕುತೂಹಲವಾಗಿದೆ. 

ಕಳದೆ ಬಾರಿ ಚುನಾವಣೆಯಲ್ಲಿ ಗೆದ್ದಿದ್ದ ಪ್ರತಾಪ್ ಗೌಡ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟು ಈಗ ಬಿಜೆಪಿ ಅಭ್ಯರ್ಥಿಯಾಗಿದ್ದರೇ ಕಳೆದ ಭಾರಿ ಕೆಲವೇ ಕೆಲವು ಮತಗಳ ಅಂತರದಿಂದ ಸೋಲು ಕಂಡಿದ್ದ ಬಸನಗೌಡ ತುರುವಿಹಾಳ ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೇ, ಕಳೆದ ಭಾರಿ ಅವರು ಕೇವಲ ಅಲ್ಪಮತಗಳ ಅಂತರದಿಂದ ಸೋಲು ಕಂಡಿದ್ದು, ಈ ಬಾರಿ ಅನುಕಂಪ ಗೆಲುವಿಗೆ ಮುನ್ನುಡಿ ಬರೆಯಲೂಬಹುದು ಎಂದು ಹೇಳಲಾಗುತ್ತಿದೆ. ಹೀಗಿದ್ದರೂ ಮಸ್ಕಿಯಲ್ಲಿ ಫಲಿತಾಂಶ ಏನಾಗಲಿದೆ, ಏನಾಗಬಹುದು ಎಂಬುದು ಮೇ ಎರಡನೇ ತಾರೀಖಿನವರೆಗೂ ಕಾಡಲೂಬಹುದು.

ವಿಶೇಷ ವರದಿ  ಕೆ.ಎಸ್. ರಾಜಮನ್ನಾರ್ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com