ಸಿಎಂ ಆದ ಕೂಡಲೆ ದೇವೇಗೌಡರ ಭೇಟಿ ಅಗತ್ಯವೇನಿತ್ತು, ಹೊಂದಾಣಿಕೆ ರಾಜಕೀಯ ಬೇಡ: ಶಾಸಕ ಪ್ರೀತಂ ಗೌಡ ಅಸಮಾಧಾನ

ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಕುಳಿತರೆ ಪಕ್ಷದ ಶಾಸಕರು, ಕಾರ್ಯಕರ್ತರಿಗೆ ಏನು ಸಂದೇಶ ನೀಡಲು ಹೊರಟಿದ್ದೀರಿ ಎಂದು ತಮ್ಮ ಅಸಮಾಧಾನವನ್ನು ಶಾಸಕ ಪ್ರೀತಂ ಗೌಡ ಸಿಎಂ ಬೊಮ್ಮಾಯಿಯವರು ದೇವೇಗೌಡರ ಮನೆಗೆ ಭೇಟಿ ನೀಡಿದ ಸಂದರ್ಭವನ್ನು ಪ್ರಸ್ತಾಪಿಸುವ ಮೂಲಕ ಹೊರಹಾಕಿದ್ದಾರೆ.
ಶಾಸಕ ಪ್ರೀತಂ ಗೌಡ
ಶಾಸಕ ಪ್ರೀತಂ ಗೌಡ

ಹಾಸನ: ಹಳೆ ಮೈಸೂರು, ಹಾಸನ ಮತ್ತು ರಾಜ್ಯದ ಇತರ ಭಾಗದ ಬಿಜೆಪಿ ಕಾರ್ಯಕರ್ತರಿಗೆ ಮಾನಸಿಕವಾಗಿ ಸ್ಥೈರ್ಯ ತುಂಬುವುದನ್ನು ಬಿಟ್ಟು ನೀವು ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಕುಳಿತರೆ ಪಕ್ಷದ ಶಾಸಕರು, ಕಾರ್ಯಕರ್ತರಿಗೆ ಏನು ಸಂದೇಶ ನೀಡಲು ಹೊರಟಿದ್ದೀರಿ ಎಂದು ತಮ್ಮ ಅಸಮಾಧಾನವನ್ನು ಶಾಸಕ ಪ್ರೀತಂ ಗೌಡ ಸಿಎಂ ಬೊಮ್ಮಾಯಿಯವರು ದೇವೇಗೌಡರ ಮನೆಗೆ ಭೇಟಿ ನೀಡಿದ ಸಂದರ್ಭವನ್ನು ಪ್ರಸ್ತಾಪಿಸುವ ಮೂಲಕ ಹೊರಹಾಕಿದ್ದಾರೆ.

ಹಾಸನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿಯವರ ತಂದೆ ಎಸ್ ಆರ್ ಬೊಮ್ಮಾಯಿಯವರ ಸರ್ಕಾರವನ್ನು ಉರುಳಿಸಿದವರು ಮಾಜಿ ಪ್ರಧಾನಿ ದೇವೇಗೌಡರು, ಅವರ ಮನೆಗೆ ಸಿಎಂ ಆದ ಬಳಿಕ ಬಸವರಾಜ ಬೊಮ್ಮಾಯಿಯವರು ಮೊದಲು ಏಕೆ ಹೋಗಬೇಕಿತ್ತು, ಅವರ ಮನೆಗೆ ಹೋಗುವ ಬದಲು ಸಿದ್ದಗಂಗಾ ಶ್ರೀಗಳೋ, ಸುತ್ತೂರು ಮಠದ ಶ್ರೀಗಳೋ, ಆದಿಚುಂಚನಗಿರಿ ಮಠಕ್ಕೋ ಭೇಟಿ ನೀಡಿ ಆಶೀರ್ವಾದ ತೆಗೆದುಕೊಳ್ಳಬೇಕಿತ್ತು, ಅದು ಬಿಟ್ಟು ಅವರ ತಂದೆಯವರ ಸರ್ಕಾರವನ್ನು ಉರುಲಿಸಿದವರ ಮನೆಗೆ ಹೋಗುವ ಅವಶ್ಯಕತೆಯೇನಿತ್ತು, ಈ ಬಗ್ಗೆ ಬೊಮ್ಮಾಯಿ ಅಭಿಮಾನಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಸಿಎಂ ಬೊಮ್ಮಾಯಿಯವರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ನಾನು ಯಾವುದೇ ಮುಲಾಜಿಗೆ ಒಳಗಾಗಿ ರಾಜಕಾರಣ ಮಾಡುವಂಥವನಲ್ಲ, ನಮ್ಮ ಮನೆಗೆ ಕಲ್ಲು ಹೊಡೆದ ಸಂದರ್ಭದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಆರ್ ಅಶೋಕ್ ಅವರು ಮಾನಸಿಕವಾಗಿ, ನೈತಿಕವಾಗಿ ಧೈರ್ಯ ತುಂಬಿ ಹೆಚ್ಚು ಶಕ್ತಿ ಕೊಟ್ಟ ನಾಯಕರ ಮಧ್ಯೆ ಬೆಳೆದು ಬಂದಿದ್ದೇನೆ. ನಾವಿಲ್ಲಿ ದಿನಾ ಬೆಳಗ್ಗೆದ್ದು ಜಾತ್ಯತೀತ ಜನತಾದಳದೊಂದಿಗೆ ಗುದ್ದಾಡಿ ಪಕ್ಷ ಕಟ್ಟುವುದು, ಇನ್ನೊಬ್ಬರು ಹೋಗಿ ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡುವುದಿದ್ದರೆ ಅದಕ್ಕೆ ನಾವ್ಯಾರೂ ಕೂಡ ರಾಜಕೀಯದಲ್ಲಿ ಸನ್ಯಾಸಿಗಳಲ್ಲ, ನಾನು ಕೂಡ ರಾಜಕಾರಣ ಮಾಡಲು ಬಂದಿರುವವನು, ಅದು ಹಾಸನ ಜಿಲ್ಲೆಯಾಗಿರಬಹುದು, ಹಳೆ ಮೈಸೂರು ಭಾಗವಾಗಿರಬಹುದು ಯಾವುದೇ ಹೊಂದಾಣಿಕೆ ರಾಜಕಾರಣ ಸಾಧ್ಯವಿಲ್ಲ, ಈ ಮೂಲಕ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಬೇಡಿ ಎಂದು ಸಿಎಂ ಬೊಮ್ಮಾಯಿಗೆ ಟಾಂಗ್ ನೀಡಿದರು. 

ನಮ್ಮ ಕಾರ್ಯಕರ್ತರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಮುಖ್ಯಮಂತ್ರಿಗಳನ್ನು, ರಾಜ್ಯಾಧ್ಯಕ್ಷರನ್ನು, ನಮ್ಮ ಸಂಘ ಪರಿವಾರದ ಹಿರಿಯರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ, ಮುಂದಿನ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜನತಾದಳವನ್ನು ಎದುರಿಸಬೇಕಾಗುತ್ತದೆ, ಹೀಗಾಗಿ ಈ ಬಗ್ಗೆ ನಮಗೆ ಸ್ಪಷ್ಟ ಉತ್ತರ ಸಿಗಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com