ಗೆಲ್ಲುವ ಕ್ಷೇತ್ರದ ಟಿಕೆಟ್ ಕುಟುಂಬಕ್ಕೆ; ಸೋಲುವ ಕಡೆ ಅನ್ಯರಿಗೆ: ಪ್ರಧಾನಿ ಮೋದಿ ಜೊತೆ ದೇವೇಗೌಡರು ಈಗ ಭಾಯಿ ಭಾಯಿ!
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಭೇಟಿ ಮಾಡಿರುವುದಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, ಎಚ್‌ಡಿ ದೇವೇಗೌಡರು ಗೋಹತ್ಯೆ ನಿಷೇಧ ಕಾಯ್ದೆ ವಿರೋಧ ಮಾಡಿದ್ರಾ? ಎಂದು ಪ್ರಶ್ನಿಸಿ, ಇವಾಗ ಹೋಗಿ ನರೇಂದ್ರ ಮೋದಿ ಜೊತೆಗೆ ಭಾಯಿ ಭಾಯಿ! ಎಂದು ಲೇವಡಿ ಮಾಡಿದ್ದಾರೆ.
ಕುಟುಂಬ ರಾಜಕಾರಣಕ್ಕೆ ಜೆಡಿಎಸ್ ಹೆಸರುವಾಸಿ. ಕಾರ್ಯಕರ್ತರನ್ನು ದುಡಿಸಿಕೊಳ್ಳುವುದಷ್ಟೇ ಅವರ ಕೆಲಸ. ಅವರ (ಎಚ್.ಡಿ. ದೇವೇಗೌಡ) ಮನೆಯಲ್ಲಿ ಎಂಟನೆಯವರು ರಾಜಕೀಯಕ್ಕೆ ಬಂದಿದ್ದಾರೆ. ಎಲ್ಲಿ ಗೆಲ್ಲಲು ಅವಕಾಶ ಇದೆ ಅವರು ನಿಲ್ಲುತ್ತಾರೆ. ಎಲ್ಲಿ ಸೋಲುತ್ತಾರೆ ಅಲ್ಲಿ ಬೇರೆಯವರನ್ನು ಕಣಕ್ಕೆ ಇಳಿಸುತ್ತಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
‘ಜೆಡಿಎಸ್‌ನವರದ್ದು ಅವಕಾಶವಾದಿ ರಾಜಕಾರಣ. ಅವರಿಗೆ ಯಾವುದೇ ಸಿದ್ಧಾಂತ, ಕಾರ್ಯಕ್ರಮ ಇಲ್ಲ. ಅದಕ್ಕೆ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಹೇಳುವುದು. ನಾನು ಬಿ ಟೀಂ ಎಂದು ಹೇಳಿದರೆ ಅವರಿಗೆ ಸಿಟ್ಟು ಬರುತ್ತದೆ’ ಎಂದರು.
‘ಕರ್ನಾಟಕದಲ್ಲಿ ನಡೆಯುತ್ತಿರುವ ಕಮಿಷನ್ ದಂಧೆಯ ಬಗ್ಗೆ ಪ್ರಧಾನಿಗೆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಶೇ 40ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ. ಈ ಬಗ್ಗೆ ತಕ್ಷಣ ತನಿಖೆ ಮಾಡಿಸಬೇಕಲ್ಲವೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
‘ಬಿಜೆಪಿ ಅಂದರೆ ಭ್ರಷ್ಟ ಜನತಾ ಪಾರ್ಟಿ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಸವರಾಜ ಬೊಮ್ಮಾಯಿ ಗೃಹಸಚಿವರಾಗಿದ್ದವರು. ಬಿಜೆಪಿಯಲ್ಲಿರುವವರ ಭ್ರಷ್ಟಾಚಾರದ ಬಗ್ಗೆ ಬೊಮ್ಮಾಯಿಗೆ ಗೊತ್ತಿರಲಿಲ್ಲವೇ’ ಎಂದೂ ಪ್ರಶ್ನಿಸಿದರು.
ಇಂದಿರಾ ಕ್ಯಾಂಟೀನ್, ಶೂ ಭಾಗ್ಯ, ಶಾದಿ ಭಾಗ್ಯ, ವಿದ್ಯಾ ಸಿರಿ ಎಲ್ಲವೂ ನಿಲ್ಲಿಸಿದ್ದಾರೆ. ಗೌತಮ್ ಅದಾನಿ ಏಷ್ಯಾದಲ್ಲಿಯೇ ನಂಬರ್ ಒನ್ ಶ್ರೀಮಂತ ಆಗಿದ್ದಾರೆ. ಇಂತವರು ಬೆಳೆಯಲು ಅವಕಾಶ ಹಾಗೂ ಇದಕ್ಕೆ ಕುಮ್ಮಕ್ಕು ನೀಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಎಂದು ಹರಿಹಾಯ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ