2019ರ ಲೋಕಸಭೆ ಚುನಾವಣೆಯಲ್ಲಿ ಸೋಲು: ಈಗ ಮಂಡ್ಯದಲ್ಲಿ ಜೆಡಿಎಸ್ ಗೆ ವಿಧಾನ ಪರಿಷತ್ ಚುನಾವಣೆ ಅಗ್ನಿಪರೀಕ್ಷೆ!
2019ರ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ನಂತರ ಈ ಬಾರಿಯ ವಿಧಾನಪರಿಷತ್ ಚುನಾವಣೆಯನ್ನು ಜೆಡಿಎಸ್ ಮಂಡ್ಯ ಜಿಲ್ಲೆಯಲ್ಲಿ ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿದೆ.
Published: 09th December 2021 11:28 AM | Last Updated: 09th December 2021 01:00 PM | A+A A-

ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ
ಮೈಸೂರು: 2019ರ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ನಂತರ ಈ ಬಾರಿಯ ವಿಧಾನಪರಿಷತ್ ಚುನಾವಣೆಯನ್ನು ಜೆಡಿಎಸ್ ಮಂಡ್ಯ ಜಿಲ್ಲೆಯಲ್ಲಿ ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಕೂಡ ಪೈಪೋಟಿ ಈ ಬಾರಿ ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ಇದೆ.
ಜಿಲ್ಲೆಯಲ್ಲಿ ಜೆಡಿಎಸ್ ನ ಏಳು ಮಂದಿ ಶಾಸಕರಿದ್ದು ಒಕ್ಕಲಿಗ ಸಮುದಾಯದವರು ಹೆಚ್ಚಾಗಿರುವ ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರಿಗೆ ಸಮುದಾಯದವರು ಬೆಂಬಲಕ್ಕಿದ್ದಾರೆ ಎಂಬುದನ್ನು ತೋರಿಸಲು ಹೊರಟಿದ್ದಾರೆ. ಮಂಡ್ಯದಲ್ಲಿ ಹಲವು ಪ್ರಮುಖ ಜೆಡಿಎಸ್ ನಾಯಕರು ಈಗಾಗಲೇ ಕಾಂಗ್ರೆಸ್ ಗೆ ಜಿಗಿಯಲು ಸಿದ್ಧರಾಗಿರುವಾಗ ಜೆಡಿಎಸ್ ನ ಒಗ್ಗಟ್ಟು ಪ್ರದರ್ಶಿಸಿ ಅದರ ಪ್ರಾಬಲ್ಯವನ್ನು ತೋರಿಸುವ ಅವಶ್ಯಕತೆಯಿದೆ. ಜಿಲ್ಲೆಯಲ್ಲಿ ಜೆಡಿಎಸ್ ನ ಅಭ್ಯರ್ಥಿ ಅಪ್ಪಾಜಿ ಗೌಡ ಅವರ ಗೆಲುವು ಪಕ್ಷಕ್ಕೆ ಅನಿವಾರ್ಯವಾಗಿದೆ.
ಹೀಗಾಗಿ ಜೆಡಿಎಸ್ ನ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಂಡ್ಯ ಜಿಲ್ಲೆಯಲ್ಲಿ ತೀವ್ರ ಮಟ್ಟದ ಪ್ರಚಾರದಲ್ಲಿ ತೊಡಗಿದ್ದಾರೆ. ಮಂಡ್ಯ ಜಿಲ್ಲೆಗೆ ಅದರಲ್ಲೂ ವಿಶೇಷವಾಗಿ ರೈತ ಸಮುದಾಯಕ್ಕೆ ಹೆಚ್ ಡಿ ಕುಮಾರಸ್ವಾಮಿಯವರು ಸಾಕಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ಪಕ್ಷ ತೋರಿಸಲು ಮುಂದಾಗಿದೆ.
ಇದನ್ನೂ ಓದಿ: 'ಮೂರು ಪಕ್ಷಗಳ ಹುನ್ನಾರದಿಂದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ 'ಅಭಿಮನ್ಯು' ಪಾತ್ರದಂತೆ ಏಕಾಂಗಿಯಾಗಿ ಹೋರಾಡಿ ಸೋತೆ'
ಈ ಮಧ್ಯೆ ಕಳೆದ ಬಾರಿ ಕೆ ಆರ್ ಪೇಟೆ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಕ್ರೀಡಾ ಸಚಿವ ಕೆ ಸಿ ನಾರಾಯಣ ಗೌಡ ಅವರು ಗೆದ್ದ ನಂತರ ಇಲ್ಲಿನ ಗ್ರಾಮ ಪಂಚಾಯತ್ ಸದಸ್ಯರು ತಮ್ಮ ಅಭ್ಯರ್ಥಿ ಬೂಕನಹಳ್ಳಿ ಮಂಜು ಅವರನ್ನು ಬೆಂಬಲಿಸುತ್ತದೆ ಎಂಬ ನಂಬಿಕೆಯಲ್ಲಿ ಬಿಜೆಪಿಯವರಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ದಿನೇಶ್ ಗೂಳಿಗೌಡರನ್ನು ವಿಧಾನ ಪರಿಷತ್ ಚುನಾವಣಾ ಕಣಕ್ಕಿಳಿಸಿದ್ದು ಅವರು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದವರು. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಅವರಿಗೆ ಬೆಂಬಲ ಸೂಚಿಸಿದ್ದ ಜಿಲ್ಲೆಯ ಹಿರಿಯ ನಾಯಕರುಗಳಾದ ಎನ್ ಚಲುವರಾಯಸ್ವಾಮಿ, ಪಿ ಎಂ ನರೇಂದ್ರಸ್ವಾಮಿ ಹಾಗೂ ಇತರರು ಜೆಡಿಎಸ್ ನ್ನು ಬದಿಗೆ ತಳ್ಳಲು ನೋಡುತ್ತಿದ್ದಾರೆ.
ಜೆಡಿಎಸ್-ಬಿಜೆಪಿ ನಡುವಿನ ತಂತ್ರಗಾರಿಕೆ ಮತ್ತು ಬಿಜೆಪಿಯ ಎರಡನೇ ಪ್ರಾಶಸ್ತ್ಯದ ಮತಗಳು ಜೆಡಿಎಸ್ ಗೆ ಹೋಗಬಹುದಾಗಿದ್ದು ಅದು ಕಾಂಗ್ರೆಸ್ ಗೆ ಚಿಂತೆಯಾಗಿದೆ.