'ಮೂರು ಪಕ್ಷಗಳ ಹುನ್ನಾರದಿಂದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ 'ಅಭಿಮನ್ಯು' ಪಾತ್ರದಂತೆ ಏಕಾಂಗಿಯಾಗಿ ಹೋರಾಡಿ ಸೋತೆ'
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ರೈತ ಸಂಘ ಎಲ್ಲರೂ ಪಕ್ಷಾತೀತವಾಗಿ ಒಗ್ಗೂಡಿ, ಸಂಚು ಮಾಡಿ ನನ್ನನ್ನು ಸೋಲಿಸಿದರು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ನೋವು ಹೊರ ಹಾಕಿದರು.
Published: 29th November 2021 09:14 AM | Last Updated: 29th November 2021 02:46 PM | A+A A-

ನಿಖಿಲ್ ಕುಮಾರ್
ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ರೈತ ಸಂಘ ಎಲ್ಲರೂ ಪಕ್ಷಾತೀತವಾಗಿ ಒಗ್ಗೂಡಿ, ಸಂಚು ಮಾಡಿ ನನ್ನನ್ನು ಸೋಲಿಸಿದರು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ನೋವು ಹೊರ ಹಾಕಿದರು.
ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಮಾತನಾಡಿದ ಅವರು ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಮಾಡಿದಂತೆ ಕಳೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ, ಜೊತೆಗೆ ಮೂರು ಪಕ್ಷಗಳ ಮೂರು ಪಕ್ಷಗಳ ಹುನ್ನಾರದಿಂದ ಸೋಲಬೇಕಾಯಿತು ಎಂದು ಬೇಸರ ವ್ಯಕ್ತ ಪಡಿಸಿದರು.
ಮುಂಬರುವ ವಿಧಾನ ಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದು, ಪಕ್ಷ ಸಂಘಟನೆ ಆರಂಭಿಸಿದ್ದೇವೆ, ತಮ್ಮ ತಂದೆಯ ಕೆಲವು ಆಲೋಚನೆಗಳನ್ನು ಮುಂದಿನ ಚುನಾವಣೆಯಲ್ಲಿ ಅನುಷ್ಠಾನಗೊಳಿಸುತ್ತೇನೆ, ಜನರ ಕಷ್ಟಗಳನ್ನು ಆಲಿಸಲು ಕ್ಷೇತ್ರದಲ್ಲಿ ಮನೆ ಮಾಡಿಕೊಂಡು ಇರಬೇಕೆಂದೇನಿಲ್ಲ, ಜನರಿಗೆ ಸಹಾಯ ಮಾಡುವ ಮನಸ್ಸಿದ್ದರೇ ಸಾಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾಲ್ಕು ದಿನಗಳ ಜೆಡಿಎಸ್ ಕಾರ್ಯಾಗಾರ: ಮೊಮ್ಮಕ್ಕಳನ್ನು ಒಗ್ಗೂಡಿಸಲು ಯಶಸ್ವಿಯಾಯ್ತಾ ದೇವೇಗೌಡರ ತಂತ್ರ?
ಮೂರು ಪಕ್ಷಗಳ ಹುನ್ನಾರದಿಂದ ನಾನು ಸೋಲಬೇಕಾಯಿತು. ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರು, ಮುಖಂಡರ ಒತ್ತಡದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೆ. ಆ ಸೋಲಿನಿಂದ ನಾನು ಧೃತಿಗೆಟ್ಟಿಲ್ಲ. ನನ್ನ ವಯಸ್ಸು ಇನ್ನೂ ಚಿಕ್ಕದಿದೆ. ಕಾರ್ಯಕರ್ತರು, ಮುಖಂಡರೊಂದಿಗೆ ಬೆರೆಯುವುದನ್ನು ತಂದೆ ಹಾಗೂ ತಾತಾ ಹೇಳಿಕೊಟ್ಟಿದ್ದಾರೆ ಎಂದು ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಚಿತ್ರರಂಗದಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದೇನೆ. ಇಂತಹ ಸಂದರ್ಭದಲ್ಲಿ ಪಕ್ಷ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ನಾನು ಆಕಸ್ಮಿಕವಾಗಿ ಅಭ್ಯರ್ಥಿಯಾದೆ. ಸ್ಥಾನಮಾನಗಳು ಬೇಕೆಂದು ಹುಚ್ಚಿಡಿಸಿಕೊಂಡು ಅಭ್ಯರ್ಥಿಯಾಗಲಿಲ್ಲ. ನನಗೆ ಅಧಿಕಾರದ ಹುಚ್ಚಿದ್ದರೆ 2018 ರಲ್ಲಿ ನಡೆದ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಲ್ಆರ್ ಶಿವರಾಮೇಗೌಡ ಅವರಿಗೆ ಟಿಕೆಟ್ ಕೊಡದೆ ನಾನೇ ನಿಲ್ಲುತ್ತಿದ್ದೆ. ತಂದೆಯ ಹೆಸರಿನಿಂದ ಅಧಿಕಾರ ಹಿಡಿಯಬೇಕಾದ ಪರಿಸ್ಥಿತಿ ನನಗೆ ಬಂದಿಲ್ಲ ಅಂತ ನಿಖಿಲ್ ಹೇಳಿದ್ದಾರೆ.