ವಿಧಾನ ಪರಿಷತ್ ಚುನಾವಣೆ: ಮೂರೂ ಪಕ್ಷಗಳಿಗೆ ಎಚ್ಚರಿಕೆ ಗಂಟೆ, ಕಾಂಗ್ರೆಸ್-ಬಿಜೆಪಿ ಸಮಬಲ, ನೆಲಕಚ್ಚಿದ ಜೆಡಿಎಸ್

ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳಲ್ಲಿ ಗೆದ್ದು, 75 ಸದಸ್ಯ ಬಲದ ಮೇಲ್ಮನೆಯಲ್ಲಿ ಪೂರ್ಣ ಸರಳ ಬಹುಮತ ಪಡೆಯಲು ಕೇವಲ ಒಂದು ಸ್ಥಾನ ಮಾತ್ರ ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ

ಬೆಂಗಳೂರು: ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳಲ್ಲಿ ಗೆದ್ದು, 75 ಸದಸ್ಯ ಬಲದ ಮೇಲ್ಮನೆಯಲ್ಲಿ ಪೂರ್ಣ ಸರಳ ಬಹುಮತ ಪಡೆಯಲು ಕೇವಲ ಒಂದು ಸ್ಥಾನ ಮಾತ್ರ ಕಡಿಮೆಯಾಗಿದೆ. ಹಾಗೆ ನೋಡಿದರೆ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆಯೇನು ಕಡಿಮೆಯಲ್ಲ, ಅದು ಕೂಡ 11 ಕ್ಷೇತ್ರಗಳಲ್ಲಿ ಗೆದ್ದುಕೊಂಡಿದ್ದು ತನ್ನ ನೆಲೆಯಲ್ಲಿ ಭದ್ರಪಡಿಸಿಕೊಂಡಿದೆ. ಆದರೆ ಜೆಡಿಎಸ್ ಮಾತ್ರ ತನ್ನ ಭದ್ರಕೋಟೆಯಾಗಿದ್ದ ಹಳೆ ಮೈಸೂರು ಭಾಗದಲ್ಲಿ ಈ ಬಾರಿ ನೆಲಕಚ್ಚಿದೆ. 

ವಾಸ್ತವವಾಗಿ ಹೇಳಬೇಕೆಂದರೆ ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಮೂರೂ ಪಕ್ಷಗಳಿಗೆ ಮುಂಬರುವ ವಿಧಾನಸಭೆ ಚುನಾವಣೆಗೆ ಎಚ್ಚರಿಕೆಯ ಗಂಟೆಯಾಗಿದೆ. 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಸ್ಪರ್ಧೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಬಿಜೆಪಿ ಮತ್ತು ಕಾಂಗ್ರೆಸ್ ತಲಾ 11 ಕ್ಷೇತ್ರಗಳಲ್ಲಿ ಗೆದ್ದುಕೊಂಡಿದ್ದು ಜೆಡಿಎಸ್ 2 ಸ್ಥಾನಗಳಲ್ಲಿ ಗೆದ್ದು ತೃಪ್ತಿಪಟ್ಟುಕೊಳ್ಳಬೇಕಾಯಿತು. ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ದೊಡ್ಡ ಮುಜುಗರವೆಂದರೆ ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಸ್ವತಂತ್ರವಾಗಿ ನಿಂತಿದ್ದು. ಈ ಮೂಲಕ ದ್ವಿಸದಸ್ಯ ಕ್ಷೇತ್ರವಾದ ಬೆಳಗಾವಿಯಲ್ಲಿ ಅವರು ಗೆದ್ದು ವಿಧಾನ ಪರಿಷತ್ ನಲ್ಲಿ ಮುಖ್ಯ ಸಚೇತಕರಾಗಿದ್ದ ಮಹಂತೇಶ ಕವಟಗಿಮಠ ಅವರನ್ನು ಮೂರನೇ ಸ್ಥಾನಕ್ಕೆ ಇಳಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನ 6 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡು ಪರಿಷತ್ ನಲ್ಲಿ ಸ್ಥಾನಗಳನ್ನು ಹೆಚ್ಚಿಸಿಕೊಂಡರೂ ಕೂಡ ಅದು ಇಟ್ಟಿದ್ದ 14 ಕ್ಷೇತ್ರಗಳಲ್ಲಿ ಗೆಲುವಿನ ನಿರೀಕ್ಷೆಯನ್ನು ಸಫಲಗೊಳಿಸುವಲ್ಲಿ ವಿಫಲವಾಗಿದೆ. ಪರಿಷತ್ ನಲ್ಲಿ ನಮ್ಮ ಸೀಟುಗಳ ಸಂಖ್ಯೆ 6ರಿಂದ 11ಕ್ಕೆ ಏರಿಕೆಯಾಗಿರುವುದರಿಂದ ನಮಗೆ ಬಿಜೆಪಿಗೆ ಇದು ಉತ್ತಮ ಫಲಿತಾಂಶ, ನಾವು 13 ಅಥವಾ 14 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಹೊಂದಿದ್ದೆವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು.

ಬಿಜೆಪಿಯೊಳಗೆ ನಾಯಕರು ಈ ಫಲಿತಾಂಶದ ಬಗ್ಗೆ ಚರ್ಚೆ ನಡೆಸಿ ಮುಂಬರುವ ದಿನಗಳಲ್ಲಿ ಪಕ್ಷವನ್ನು ಬಲಪಡಿಸಲು ನೋಡುತ್ತೇವೆ. ಬೆಳಗಾವಿಯಲ್ಲಿ ಸ್ವತಂತ್ರ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಬಹಿರಂಗವಾಗಿ ರಮೇಶ್ ಜಾರಕಿಹೊಳಿಯವರು ಕೆಲಸ ಮಾಡಿದ್ದರಿಂದ ಅಲ್ಲಿ ಬಿಜೆಪಿ ಸೋತಿರುವ ಕುರಿತು ಆತುರದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂಬ ಮಾತನ್ನು ಕೂಡ ಮುಖ್ಯಮಂತ್ರಿಗಳು ಹೇಳಿದರು.

ಇನ್ನು ಮೈಸೂರಿನ ಫಲಿತಾಂಶ ಹಲವು ಬಿಜೆಪಿ ನಾಯಕರಿಗೆ ಅಚ್ಚರಿ ತಂದಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬಿಜೆಪಿಗೆ 12 ಸ್ಥಾನ ಬಂದಿದೆ ಎಂದು ಘೋಷಿಸಿಯೇ ಬಿಟ್ಟಿದ್ದರು. ಆದರೆ ನಿನ್ನೆ ರಾತ್ರಿಯವರೆಗೆ ನಡೆದ ಮತ ಎಣಿಕೆ ನಂತರ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಮೂರನೇ ಸ್ಥಾನಕ್ಕೆ ಇಳಿದ ನಂತರ ಸದನದಲ್ಲಿ ಸರಳ ಬಹುಮತ ಬಿಜೆಪಿಗೆ ಸಿಗಲು ಒಂದು ಸ್ಥಾನದ ಕೊರತೆಯುಂಟಾಯಿತು.ದ್ವಿಸದಸ್ಯ ಹೊಂದಿರುವ ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲುವು ಕಂಡರು. 

ಬಿಜೆಪಿ ಸರ್ಕಾರದ ಮೇಲೆ ಪರಿಣಾಮವಿಲ್ಲ: ಮೊದಲೇ ಹೇಳಿದಂತೆ ಈ ಬಾರಿಯ ಚುನಾವಣೆ ಆಡಳಿತಾರೂಢ ಬಿಜೆಪಿ ಸೇರಿದಂತೆ ಮೂರೂ ಪಕ್ಷಗಳಿಗೂ ದಿಕ್ಸೂಚಿಯಾಗಿದೆ. ಬಿಜೆಪಿಯ ಉಪ ಸಭಾಪತಿ ಎಂ ಕೆ ಪ್ರಾಣೇಶ್, ಕೇವಲ 6 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಬಹುತೇಕ ದ್ವಿಸದಸ್ಯ ಹೊಂದಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಉತ್ತಮ ಸಾಧನೆ ತೋರಿಸಿದೆ. ಬೆಳಗಾವಿಯಲ್ಲಿ ಕೂಡ ಬಿಜೆಪಿ ಮೂರನೇ ಸ್ಥಾನಕ್ಕೆ ಇಳಿದಿದೆ.

ಈ ಬಾರಿಯ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ಬಗ್ಗೆ ಬಿಜೆಪಿ ಖಂಡಿತವಾಗಿಯೂ ವಿಮರ್ಶೆ ಮಾಡಿಕೊಳ್ಳಲಿದೆ. ಹಾಗೆಂದು ಸದ್ಯಕ್ಕೆ ಬಿಜೆಪಿ ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ, ಮೇಲ್ಮನೆಯಲ್ಲಿ ಮಸೂದೆಗಳು ಸುಲಭವಾಗಿ ಅಂಗೀಕಾರವಾಗಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com