ನಿರುದ್ಯೋಗಿಗಳಿಂದ ಪ್ರಧಾನಿ ಮೋದಿಗೆ ಪದವಿ ಪ್ರಮಾಣಪತ್ರ ವಾಪಸು: ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆ

ರಾಜ್ಯ ಸೇರಿದಂತೆ ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ. ಕೋವಿಡ್ ಈ ನಿರುದ್ಯೋಗವನ್ನು ಇನ್ನಷ್ಟು ಹೆಚ್ಚಿಸಿದೆ. ಅಲ್ಲದೇ ಇತ್ತ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಯ ಭರವಸೆಯನ್ನೂ ಹುಸಿಮಾಡಿದೆ.
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಬೆಳಗಾವಿ: ರಾಜ್ಯ ಸೇರಿದಂತೆ ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ. ಕೋವಿಡ್ ಈ ನಿರುದ್ಯೋಗವನ್ನು ಇನ್ನಷ್ಟು ಹೆಚ್ಚಿಸಿದೆ. ಅಲ್ಲದೇ ಇತ್ತ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಯ ಭರವಸೆಯನ್ನೂ ಹುಸಿಮಾಡಿದೆ. ಹೀಗಾಗಿ ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಯುವಕರು ತಮ್ಮ ಪದವಿ ಪ್ರಮಾಣ ಪತ್ರದ ಪ್ರತಿಯನ್ನು ಪ್ರಧಾನಮಂತ್ರಿಗಳಿಗೆ ವಾಪಸ್ ಕಳುಹಿಸಿಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ.

ಈ ಬಗ್ಗೆ ಬೆಳಗಾವಿಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಯುವ ಕಾಂಗ್ರೆಸ್ ಏರ್ಪಡಿಸಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜನರ ಭಾವನೆಗೆ ತಕ್ಕಂತೆ ಸರ್ಕಾರದ ವಿರುದ್ಧ ಹೋರಾಟ ತಮ್ಮದಾಗಿದೆ. ಯುವಕರ ಕಣ್ಣು ತೆರೆಸುವ ಹೋರಾಟವಾಗಿದೆ. ಇಡೀ ರಾಜ್ಯದ ಜನತೆ ಕಾಂಗ್ರೆಸಿನ ಈ ಹೋರಾಟಕ್ಕೆ ಬೆಂಬಲ ನೀಡಲಿದೆ. ಕೋವಿಡ್ ಸಮಯದಲ್ಲಿ ಉದ್ಯೋಗ ಕಡಿಮೆಯಾಗಿದೆ. ಬಿಜೆಪಿ ಸರ್ಕಾರದಿಂದ ಸರ್ಕಾರಿ ಹಾಗೂ ಖಾಸಗಿ ಉದ್ಯೋಗ ಸೃಷ್ಟಿಸಲು ಸಾಧ್ಯವಾಗಿಲ್ಲ. ದೇಶದ ಯುವಕರು ಪಕೋಡ ಮಾರಿಕೊಂಡು ಬದುಕಿರಿ ಎಂದು ಹೇಳುತ್ತಾರೆ. ಪಕೋಡ ಮಾರೋಣ ಎಂದರೆ ಅಡುಗೆ ಎಣ್ಣೆ ಲೀಟರ್ ಗೆ 200 ರೂ. ಆಗಿದೆ ಎಂದು ಪ್ರಧಾನಿ ಮೋದಿ ಹೇಳಿಕೆಗೆ ವ್ಯಂಗ್ಯವಾಡಿದರು.

ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಅವರು ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿಯೂ ಕೆಪಿಸಿಸಿ ವತಿಯಿಂದ ನಾವು ಉದ್ಯೋಗಕ್ಕೆ ಆಗ್ರಹಿಸಿ ಚಳವಳಿ ಮಾಡುತ್ತಿದ್ದೇವೆ. ವರ್ಷಕ್ಕೆ 2 ಕೋಟಿ ಉದ್ಯೋಗ ಕೋಡುತ್ತೇವೆ ಎಂದ ಕೇಂದ್ರದ ಬಿಜೆಪಿ ಸರ್ಕಾರ ನುಡಿದಂತೆ ನಡೆಯಲಿಲ್ಲ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಪದವೀಧರರೆಲ್ಲರೂ ಬೀದಿಬದಿಯಲ್ಲಿ ವ್ಯಾಪಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಯಾರಿಗೂ ಈ ಸರ್ಕಾರ ನೆರವಾಗಿಲ್ಲ ಎಂದು ಆರೋಪಿಸಿದರು‌

ಅತಿಥಿ ಶಿಕ್ಷಕರಿಗೆ ಸಿಗುತ್ತಿರುವ ವೇತನಕ್ಕಿಂತ ನರೇಗಾ ಯೋಜನೆಯ ಕಾರ್ಮಿಕರ ಕೂಲಿಯೇ ಹೆಚ್ಚಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೇಂದ್ರ ಸರ್ಕಾರ ಉದ್ಯೋಗ ನೀಡಬೇಕು ಅಥವಾ ಕನಿಷ್ಠ 9 ಸಾವಿರ ರುಪಾಯಿಯಾದರೂ ಉದ್ಯೋಗ ಭತ್ಯೆ ನೀಡಬೇಕು. ಮುಂದಿನ ಚುನಾವಣೆಯಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಭತ್ಯೆ ನೀಡುವ ವಿಚಾರವನ್ನು ನಮ್ಮ ಪ್ರಣಾಳಿಕೆಯಲ್ಲಿ ಸೇರಿಸುವ ಚಿಂತನೆ ಮಾಡುತ್ತಿದ್ದೇವೆ. ಈ ಕುರಿತು ರಾಹುಲ್ ಗಾಂಧಿ ಅವರು ನ್ಯಾಯ್ ಯೋಜನೆ ಬಗ್ಗೆ ಸಂದೇಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಿರುದ್ಯೋಗ ವಿರುದ್ಧ ಕಾಂಗ್ರೆಸ್ ದೊಡ್ಡ ಹೋರಾಟ ಮಾಡಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com