ಮಾಜಿ ಸ್ಪೀಕರ್ ರಮೇಶ್ ಕುಮಾರ್ 'ಎಂಜಾಯ್ ರೇಪ್' ಹೇಳಿಕೆಗೆ ಕಾಂಗ್ರೆಸ್ ಖಂಡನೆ

ಕಾಂಗ್ರೆಸ್‌ ನಾಯಕ, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅತ್ಯಾಚಾರ ಕುರಿತು ನೀಡಿರುವ ಹೇಳಿಕೆಗೆ ದೇಶವ್ಯಾಪ್ತಿ ಆಕ್ರೋಶ ವ್ಯಕ್ತವಾಗಿದ್ದು ಕಾಂಗ್ರೆಸ್ ಹೈಕಮಾಂಡ್ ಸಹ ಗರಂ ಆಗಿದೆ. 
ರಮೇಶ್ ಕುಮಾರ್
ರಮೇಶ್ ಕುಮಾರ್

ನವದೆಹಲಿ: ಕಾಂಗ್ರೆಸ್‌ ನಾಯಕ, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅತ್ಯಾಚಾರ ಕುರಿತು ನೀಡಿರುವ ಹೇಳಿಕೆಗೆ ದೇಶವ್ಯಾಪ್ತಿ ಆಕ್ರೋಶ ವ್ಯಕ್ತವಾಗಿದ್ದು ಕಾಂಗ್ರೆಸ್ ಸಹ ಖಂಡಿಸಿದೆ.

ಕರ್ನಾಟಕ ವಿಧಾನಸಭೆಯಲ್ಲಿ ನಮ್ಮದೇ ಶಾಸಕರೊಬ್ಬರು ಆಡಿದ ಮಾತನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಮಹಿಳೆಯರ ವಿರುದ್ಧದ ಅಸಂವೇದನಾಶೀಲ ಹೇಳಿಕೆಗಳು ಲಿಂಗ ಸಮಾನತೆಯ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ಅತ್ಯಾಚಾರ ಸಂಬಂಧ ರಮೇಶ್ ಕುಮಾರ್ ಹೇಳಿಕೆಯನ್ನು ಕಾಂಗ್ರೆಸ್‌ ಒಪ್ಪುವುದಿಲ್ಲ. ಹಿರಿಯ ಶಾಸಕರು ಮಾದರಿಯಾಗಿರಬೇಕು. ಒಪ್ಪಿತವಲ್ಲದ ನಡವಳಿಕೆಯಿಂದ ದೂರವಿರಬೇಕು ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಂದೀಪ್‌ ಸಿಂಗ್‌ ಸುರ್ಜೇವಾಲ ಸಲಹೆ ನೀಡಿದ್ದಾರೆ.

ಕರ್ನಾಟಕ ವಿಧಾನಸಭೆಯ  ಅಧಿವೇಶನದಲ್ಲಿ ಸ್ಪೀಕರ್ ಹಾಗೂ ಹಿರಿಯ ಕಾಂಗ್ರೆಸ್ ಶಾಸಕರ ನಡುವೆ ನಡೆದಿರುವ ಆಕ್ಷೇಪಾರ್ಹ ಹಾಗೂ ಸಂವೇದನಾ ರಹಿತ ಮಾತುಗಳ ವಿನಿಮಯವನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ. ಸ್ಪೀಕರ್ ಹಾಗೂ ಹಿರಿಯ ಶಾಸಕರು ಮಾದರಿಯಾಗಿರಬೇಕು. ಸ್ವೀಕಾರಾರ್ಹವಲ್ಲದ ನಡವಳಿಕೆಯಿಂದ ದೂರವಿರಬೇಕು ಎಂದು ಸುರ್ಜೇವಾಲ ಟ್ವೀಟ್‌ ಮಾಡಿದ್ದಾರೆ.

ನಾನು ರಮೇಶ್ ಕುಮಾರ್ ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಅವರು ಸ್ಪೀಕರ್  ಮತ್ತು ಸಚಿವರಾಗಿದ್ದವರು. ನನಗೆ ಇದು ಇಷ್ಟವಾಗಲಿಲ್ಲ. ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಆದರೆ ಅಂತಹ ಭಾಷೆ ಖಂಡನೀಯವಾಗಿದೆ. ನಾವು ಮಹಿಳೆಯರನ್ನು ಗೌರವಿಸುತ್ತೇವೆ. ಸ್ಪೀಕರ್ ಈ ಹೇಳಿಕೆಗೆ ನಗುತ್ತಿದ್ದರು, ನಾವು ಅದನ್ನೂ ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ರಾಜ್ಯಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮಹಿಳೆ ಮೇಲೆ ಅತ್ಯಾಚಾರವಾದಾಗ ಅದನ್ನು ತಡೆಯಬೇಕು, ಇಲ್ಲದಿದ್ದರೆ ಆನಂದಿಸಬೇಕು ಎಂದು ರಮೇಶ್‌ಕುಮಾರ್‌ ನಿನ್ನೆ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದರು. ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಎಚ್ಚೆತ್ತ ರಮೇಶ್‌ ಕುಮಾರ್‌ ಇಂದು ಕಲಾಪದಲ್ಲಿ ಕ್ಷಮೆಯಾಚಿಸಿದ್ದಾರೆ.

ಈ ನಡುವೆ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ವಿಧಾನಸಭೆ ಕಲಾಪದಲ್ಲಿ ನೀಡಿದ್ದ ದೇಶಾದ್ಯಂತ ವ್ಯಾಪಕ ಟೀಕೆಗೆ ಒಳಗಾಗುತ್ತಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ರಮೇಶ್‌ ಕುಮಾರ್‌ ಹೇಳಿಕೆಯನ್ನು ಖಂಡಿಸಿದ್ದಾರೆ.

ವಿಧಾನಸೌಧದೊಳಗೆ ಕಾಂಗ್ರೆಸ್ ನಾಯಕರೊಬ್ಬರು ಈ ರೀತಿ ಮಾತನಾಡಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಲಡ್ಕಿ ಹೂ, ಲಡ್ ಸಕ್ತಿ ಹೂ ಎಂಬ ಘೋಷಣೆಗಳನ್ನು ಕೂಗುವ ಮೊದಲು ಪಕ್ಷದ ಶಾಸಕ ರಮೇಶ್‌ ಕುಮಾರ್‌ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com