ನಾಚಿಕೆಗೇಡಿನ ವರ್ತನೆ, ಕೂಡಲೇ ಕಾಂಗ್ರೆಸ್ ಕಠಿಣ ಕ್ರಮ ಕೈಗೊಳ್ಳಬೇಕು: ರಮೇಶ್ ಕುಮಾರ್ ಅತ್ಯಾಚಾರ ಹೇಳಿಕೆಗೆ ಜಯಾ ಬಚ್ಚನ್ ಖಂಡನೆ
ಕಾಂಗ್ರೆಸ್ ಶಾಸಕ ಕೆ.ಆರ್ ರಮೇಶ್ ಕುಮಾರ್ ಅವರ ವಿವಾದಾತ್ಮಕ 'ಅತ್ಯಾಚಾರ' ಹೇಳಿಕೆಗೆ ಸಮಾಜವಾದಿ ಪಕ್ಷದ (ಎಸ್‌ಪಿ) ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಅವರು ಶುಕ್ರವಾರ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
Published: 17th December 2021 01:39 PM | Last Updated: 17th December 2021 02:01 PM | A+A A-

ನವದೆಹಲಿ: ಕಾಂಗ್ರೆಸ್ ಶಾಸಕ ಕೆ.ಆರ್ ರಮೇಶ್ ಕುಮಾರ್ ಅವರ ವಿವಾದಾತ್ಮಕ 'ಅತ್ಯಾಚಾರ' ಹೇಳಿಕೆಗೆ ಸಮಾಜವಾದಿ ಪಕ್ಷದ (ಎಸ್‌ಪಿ) ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಅವರು ಶುಕ್ರವಾರ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ್ ಅವರ ಹೇಳಿಕೆ ನಾಚಿಕೆಗೇಡಿನ ವರ್ತನೆಯಾಗಿದೆ. ಪಕ್ಷ ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸದನದಲ್ಲಿದ್ದೇವೆಂಬುದನ್ನು ಮರೆತು ಇಂತಹ ವರ್ತನೆ ತೋರುವ ಇತರರಿಗೆ ಇದು ಉದಾಹರಣೆಯಾಗಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸದನದಲ್ಲಿ ಇಂದು ಬೇಷರತ್ ಕ್ಷಮೆಯಾಚಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಏನೆಂದರು?: ಇದಕ್ಕೆ ಸ್ಪೀಕರ್ ಪ್ರತಿಕ್ರಿಯೆ ಏನು?
ಸದನ ಅಥವಾ ಸಂಸತ್ತಿನಲ್ಲಿ ಇಂತಹ ಮನಸ್ಥಿತಿಯುಳ್ಳ ಜನರು ಕುಳಿತುಕೊಂಡರೆ, ಪರಿಸ್ಥಿತಿ ಹೇಗಾಗಬಹುದು? ಯಾರೂ ಈ ರೀತಿ ಮಾತನಾಡಲು ಧೈರ್ಯ ಮಾಡದಂತಹ ಕಠಿಣ ಶಿಕ್ಷೆಯನ್ನು ನೀಡುವ ಮೂಲಕ ನಾವು ಉದಾಹರಣೆಯನ್ನು ಸೃಷ್ಟಿಸಬೇಕು. ಇದು ಅಸಹ್ಯಕರವಾಗಿದೆ, ಹೇಳಿಕೆಯು ಆಘಾತ ತಂದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'ಹೆಣ್ಣುಮಕ್ಕಳ ಬಗ್ಗೆ ನನಗೆ ಗೌರವವಿದೆ, ನನ್ನ ಮಾತುಗಳಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ': ಮಾಜಿ ಸ್ಪೀಕರ್ ರಮೇಶ್ ಕುಮಾರ್
ಗುರುವಾರ ವಿಧಾನಸಭೆಯಲ್ಲಿ ಅತ್ಯಾಚಾರದ ಕುರಿತು ಮಾತನಾಡಿದ್ದ ರಮೇಶ್ ಕುಮಾರ್, ‘ದೆರ್ ಈಸ್ ಎ ಸೇಯಿಂಗ್, ವೆನ್ ರೇಪ್ ಈಸ್ ಇನೆವಿಟೆಬಲ್ ಲೆಟ್ ಲೇಡೌನ್ ಅಂಡ್ ಎಂಜಾಯ್’ (ಅಂದರೆ, ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ) ಎಂದು ಹೇಳಿದ್ದರು.