ನಾನಿಲ್ಲದೇ ಮೈಸೂರಿನಲ್ಲಿ ಸಭೆ ಮಾಡಬೇಡಿ: ಡಿಕೆ ಶಿವಕುಮಾರ್ ಗೆ ಸಿದ್ದರಾಮಯ್ಯ ಸೂಚನೆ

ಮೇಕೆದಾಟು ಯೋಜನೆ ಜಾರಿಗಾಗಿ ಒತ್ತಾಯಿಸಿ ಕಾಂಗ್ರೆಸ್‌ ಪಾದಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಡಿ,ಕೆ. ಶಿವಕುಮಾರ್‌ ಅವರು ಮೈಸೂರಿನಲ್ಲಿ ಸಭೆ ಕರೆದಿರುವುದು ಅಲ್ಲಿನ ಶಾಸಕರ, ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಳಗಾವಿ: ಮೇಕೆದಾಟು ಯೋಜನೆ ಜಾರಿಗಾಗಿ ಒತ್ತಾಯಿಸಿ ಕಾಂಗ್ರೆಸ್‌ ಪಾದಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಡಿ,ಕೆ. ಶಿವಕುಮಾರ್‌ ಅವರು ಮೈಸೂರಿನಲ್ಲಿ ಸಭೆ ಕರೆದಿರುವುದು ಅಲ್ಲಿನ ಶಾಸಕರ, ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಬೇಸರಗೊಂಡಿದ್ದಾರೆ ಎಂದು ಹೇಳಲಾಗಿದೆ.

ಡಿಸೆಂಬರ್‌ 23ರಂದು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಪೂರ್ವಭಾವಿ ಸಭೆ ಕರೆದಿದ್ದರು. ಈ ಕ್ರಮಕ್ಕೆ ಮೈಸೂರು ಭಾಗದ ಶಾಸಕರು ಮತ್ತು ಮಾಜಿ‌ ಶಾಸಕರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರು ಖಡಕ್‌ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ. ತಮ್ಮ ಗಮನಕ್ಕೆ ತಾರದೇ  ತಾವು ಮೈಸೂರಿನಲ್ಲಿ ಹಾಜರಿರದ ಸಮಯದಲ್ಲಿ ಸಭೆ ದಿನಾಂಕ ನಿಗದಿ ಮಾಡಿರುವುದು ಕೂಡ ಸಿದ್ದರಾಮಯ್ಯ ಅವರ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗಿದೆ.

ನಾನು ಇಲ್ಲದೇ ಮೈಸೂರಿನಲ್ಲಿ ನೀವು ಸಭೆ ಮಾಡಲು ಹೋಗಬೇಡಿ. ಅದು ಸರಿಯಲ್ಲ. ಡಿಸೆಂಬರ್‌ 23 ರಂದೇ ಸಭೆ ಮಾಡೋದಾದ್ರೆ ಕೊಡಗಿನಲ್ಲಿ ಮಾಡಿ. ಸದ್ಯಕ್ಕೆ ಮೈಸೂರು – ಚಾಮರಾಜನಗರದ ಸಭೆಯನ್ನು ಮುಂದಕ್ಕೆ ಹಾಕಿ. ಅಲ್ಲಿ ನಾನು ಬರುವ ತನಕ ಸಭೆ ಬೇಡ ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಈ ಮಾತಿಗೆ ಡಿ,ಕೆ, ಶಿವಕುಮಾರ್‌ ಸಮಜಾಯಿಷಿ ನೀಡಿದ್ದು “ಧೃವನಾರಾಯಣ್‌ ಜೊತೆ ಮಾತನಾಡಿದ್ದೆ. ಸಭೆ ಮಾಡಲ್ಲ ಬಿಡಿ ಎಂದಿದ್ದಾರೆ. ಈ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಇಲ್ಲಪ್ಪಾ, ನಾವಿಬ್ಬರೂ ಜೊತೆಗೆ ಹೋದರೆ ಒಳ್ಳೆಯ ಮೇಸೇಜ್ ಹೋಗುತ್ತದೆ. ಇಲ್ಲಾಂದ್ರೆ ಬ್ಯಾಡ್ ಮೇಸೇಜ್ ಹೋಗ್ತದೆ. ಗೊತ್ತಾಯ್ತಾ ಎಂದು ಹೇಳಿದ್ದಾರೆ.  ಮಧ್ಯ ಪ್ರವೇಶ ಮಾಡಿದ ಕೆ ಜೆ ಜಾರ್ಜ್, ನೀವು ಸಭೆ ಕರೆಯುವಾಗ ಸಿದ್ದರಾಮಯ್ಯ ಅವರ  ಗಮನಕ್ಕೆ ತರಬೇಕಾಗಿತ್ತು ಎಂದಿದ್ದಾರೆ. ಈ ಬಗ್ಗೆ ಸದನದ ಮೊಗಸಾಲೆಯಲ್ಲಿ ಗಂಭೀರ ಚರ್ಚೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com