ಡಿ. 28ರಂದು ಬಿಜೆಪಿ ಕೋರ್ ಕಮಿಟಿ ಸಭೆ: ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ; ಚುನಾವಣೆ ಫಲಿತಾಂಶದ ಕೂಲಂಕುಷ ಚರ್ಚೆ
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕಳೆದ ಕೆಲವು ದಿನಗಳಿಂದ ಸರ್ಕಾರ ಮತ್ತು ಸಂಘಟನೆಗಳಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಕೂಲಂಕುಷ ವಾಗಿ ಚರ್ಚೆ ಮಾಡಲಾಗುವುದು.
Published: 24th December 2021 09:24 AM | Last Updated: 24th December 2021 01:23 PM | A+A A-

ಅರುಣ್ ಸಿಂಗ್
ಬೆಂಗಳೂರು: ಡಿಸೆಂಬರ್ 28-29 ರಂದು ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕಳೆದ ಕೆಲವು ದಿನಗಳಿಂದ ಸರ್ಕಾರ ಮತ್ತು ಸಂಘಟನೆಗಳಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಕೂಲಂಕುಷ ವಾಗಿ ಚರ್ಚೆ ಮಾಡಲಾಗುವುದು.
ಕಳೆದ ಮೂರು ತಿಂಗಳ ಬೆಳವಣಿಗೆಗಳು, ಇತ್ತೀಚಿನ ಎಂಎಲ್ ಸಿ ಚುನಾವಣೆ ಫಲಿತಾಂಶ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಮಂಡ್ಯ, ಬೆಳಗಾವಿ ಮತ್ತು ಹಾಸನದಲ್ಲಿ ಪಕ್ಷದ ಸೋಲು ಮತ್ತು ಧಾರವಾಡದಲ್ಲಿ ಅಲ್ಪ ಮತಗಳ ಅಂತರದ ಗೆಲುವಿನ ವರದಿ ಈಗಾಗಲೇ ಪಕ್ಷದ ಹೈಕಮಾಂಡ್‌ಗೆ ತಲುಪಿದೆ.
ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಸೆಳೆಯುವಲ್ಲಿ ಸಚಿವ ನಾರಾಯಣಗೌಡ ವಿಫಲರಾಗಿದ್ದು, ಜೆಡಿಎಸ್‌ನಿಂದ ಕಾಂಗ್ರೆಸ್ ಸ್ಥಾನ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: 2023 ವಿಧಾನಸಭೆ ಹೋರಾಟಕ್ಕೆ ಕಾಂಗ್ರೆಸ್ ನಾಯಕರಿಗೆ ಹೊಸ ಚೈತನ್ಯ ನೀಡಿದ ಫಲಿತಾಂಶ
ಉತ್ತರ ಕರ್ನಾಟಕದಲ್ಲಿ ಎರಡನೇ ಪ್ರಾಶಸ್ತ್ಯದ ಮತಗಳು ಕಾಂಗ್ರೆಸ್ ಗೆ ದೊರೆತಿರುವ ಬಗ್ಗೆ ಬಿಜೆಪಿಗೆ ಆತಂಕ ಎದುರಾಗಿದೆ. ಇದೇ ವೇಳೆ, ಹಾವೇರಿ ಜಿಲ್ಲೆಯ ಮತದಾರರನ್ನು ಒಳಗೊಂಡ ಧಾರವಾಡ ದ್ವಿಸದಸ್ಯ ಕ್ಷೇತ್ರದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ಕಿರಿಯ ಸಹೋದರ ಪ್ರದೀಪ ಶೆಟ್ಟರ್ ಗೆದ್ದು ಎರಡನೇ ಸ್ಥಾನದಲ್ಲಿದ್ದಾರೆ.
1,200 ಮತಗಳನ್ನು ಗಳಿಸಿದ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ್ ಹಾವೇರಿ ಅವರನ್ನು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವೊಲಿಸುವಲ್ಲಿ ನಾಯಕತ್ವ ವಿಫಲವಾಗಿರುವ ಬಗ್ಗೆ ಪ್ರದೀಪ್ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಂಟು ಜಾಡ್ಯವಾದ ಕುಟುಂಬ ರಾಜಕಾರಣ: ಪರಿಷತ್ ತುಂಬೆಲ್ಲಾ ಕರುಳ ಕುಡಿಗಳು; ಫ್ಯಾಮಿಲಿ ಪಾಲಿಟಿಕ್ಸ್ 'ಅಡ್ಡಾ' ಆಯ್ತು ಶಕ್ತಿಸೌಧ!
ಇನ್ನೂ ಕಾರ್ಯಕ್ಷಮತೆ ಕಡಿಮೆ ಇರುವ ಸಚಿವರನ್ನು ಕೈ ಬಿಡುವುದರ ಜೊತೆಗೆ ಸಂಪುಟ ಪುನಾರಚನೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಕೂಡ ರಾಜ್ಯದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕೇಂದ್ರ ನಾಯಕತ್ವಕ್ಕೆ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.