ಅಂಟು ಜಾಡ್ಯವಾದ ಕುಟುಂಬ ರಾಜಕಾರಣ: ಪರಿಷತ್ ತುಂಬೆಲ್ಲಾ ಕರುಳ ಕುಡಿಗಳು; ಫ್ಯಾಮಿಲಿ ಪಾಲಿಟಿಕ್ಸ್ 'ಅಡ್ಡಾ' ಆಯ್ತು ಶಕ್ತಿಸೌಧ!

ದೇಶದ ರಾಜಕಾರಣದಲ್ಲಿ ಕಾಂಗ್ರೆಸ್‌ನ ನೆಹರೂ ಕುಟುಂಬ ಮತ್ತು ಜೆಡಿಎಸ್‌ನ ಮಾಜಿ ಪ್ರಧಾನಿ ದೇವೇಗೌಡ ಕುಟುಂಬದ ವಿರುದ್ಧ ಸದಾ ಕೌಟುಂಬಿಕ ರಾಜಕಾರಣದ ಆರೋಪ ಮಾಡಲಾಗುತ್ತದೆ.
ಪರಿಷತ್ ಗೆ ಆಯ್ಕೆಯಾದವರು
ಪರಿಷತ್ ಗೆ ಆಯ್ಕೆಯಾದವರು

ಬೆಂಗಳೂರು: ದೇಶದ ರಾಜಕಾರಣದಲ್ಲಿ ಕಾಂಗ್ರೆಸ್‌ನ ನೆಹರೂ ಕುಟುಂಬ ಮತ್ತು ಜೆಡಿಎಸ್‌ನ ಮಾಜಿ ಪ್ರಧಾನಿ ದೇವೇಗೌಡ ಕುಟುಂಬದ ವಿರುದ್ಧ ಸದಾ ಕೌಟುಂಬಿಕ ರಾಜಕಾರಣದ ಆರೋಪ ಮಾಡಲಾಗುತ್ತದೆ. ಆದರೆ, ಇತ್ತೀಚೆಗೆ ದೇಶಾ ದ್ಯಂತ ಕುಟುಂಬ ರಾಜಕಾರಣದ ಬೇರುಗಳು ಆಳವಾಗಿ ಬೇರೂರುತ್ತಿವೆ.

ನಡೆಯುವ ಪ್ರತಿ ಚುನಾವಣೆಗಳಲ್ಲಿ, ಈಗಾಗಲೇ ಅಧಿಕಾರದಲ್ಲಿರುವ ಕೆಲವೇ ಕೆಲವು ಕುಟುಂಬಗಳ ಕೈಯ್ಯಲ್ಲಿ ಅಧಿಕಾರ ಕೇಂದ್ರೀಕೃತವಾಗುತ್ತದೆ.  ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಮೂರು ಪ್ರಬಲ ರಾಜಕೀಯ ಪಕ್ಷಗಳಿಗೂ ಇದು ಅಂಟು ಜಾಡ್ಯವಾಗಿದೆ.

ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳ ಮೂಲಕ ಆಯ್ಕೆಯಾಗುವ 25 ಸ್ಥಾನಗಳ ಪೈಕಿ, ಸುಮಾರು 10ಕ್ಕಿಂತ ಹೆಚ್ಚು ಸದಸ್ಯರು ರಾಜ ಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಪರಿಸ್ಥತಿ ಹೀಗಿರುವಾಗ ಸಾಮಾನ್ಯ ಕಾರ್ಯಕರ್ತ ಪಕ್ಷದಿಂದ ಹಿಂದೆ ಸರಿಯುತ್ತಿರುವುದರಲ್ಲಿ ಅಚ್ಚರಿಯಿಲ್ಲ.

ನಮಗೆ ಯಾವಾಗ ಅವಕಾಶ ಎಂಬುದು ನಿಷ್ಠಾವಂತ ಕಾರ್ಯಕರ್ತರ ಪ್ರಶ್ನೆಯಾಗಿದೆ, ವಂಶ ರಾಜಕೀಯದ ಯುಗದಲ್ಲಿ ಬಹುತೇಕ ನಿಷ್ಠರು ಭ್ರಮನಿರಸನಗೊಂಡಿದ್ದಾರೆ. ಕೆಲವರು ಖಾಸಗಿಯಾಗಿ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ, ಜೊತೆಗೆ ಬಹಿರಂಗವಾಗಿ ಮಾತನಾಡಿದರೇ ಶಿಕ್ಷೆಯ ಭಯದಿಂದಾಗಿ ಮೌನಕ್ಕೆ ಶರಣಾಗಿದ್ದಾರೆ.

ತಮ್ಮ ಕ್ಷೇತ್ರಗಳ ಸಮಸ್ಯೆ ಬಗ್ಗೆ ದನಿ ಎತ್ತುವ ಸದಸ್ಯರನ್ನು ಆಯ್ಕೆ ಮಾಡಲು  ಪರಿಷತ್ ಚುನಾವಣೆ ನಡೆಯುತ್ತದೆ.  ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರು  ಇವರನ್ನು ಆಯ್ಕೆ ಮಾಡಬೇಕಾಗಿದೆ,  ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗ ನಾಯಕನನ್ನು ಕಣಕ್ಕಿಳಿಸುವ ಬದಲು ರಾಜಕಾರಣಿಗಳು ತಮ್ಮ ಸಂಬಂಧಿಕರಿಗೆ ಮಣೆ ಹಾಕುತ್ತಿದದ್ದಾರೆ ಎಂದು ರಾಜಕೀಯ ವಿಶ್ಲೇಷಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಪರಿಷತ್ತಿಗೆ ಆಯ್ಕೆಯಾಗಿರುವ ಕುಟುಂಬ ಸದಸ್ಯರ ಪಟ್ಟಿ ದೊಡ್ಡದಿದೆ,  ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸೋದರ ಸಂಬಂಧಿ ಎಸ್.ರವಿ, ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಅವರ ಎರಡನೇ ಪುತ್ರ ಸೂರಜ್ ರೇವಣ್ಣ, ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ  ಪುತ್ರ ಕೆ.ಆರ್. ರಾಜೇಂದ್ರ (ತುಮಕೂರು), ಪರಿಷತ್ತಿನ ಮಾಜಿ ಸಭಾಪತಿ ಹಾಗೂ ಬಿಜೆಪಿ ಮುಖಂಡ ಡಿ.ಎಚ್.ಶಂಕರಮೂರ್ತಿ  ಪುತ್ರ ಡಿ.ಎಸ್.ಅರುಣ್ (ಶಿವಮೊಗ್ಗ), ಮಡಿಕೇರಿ ಬಿಜೆಪಿ ಹಾಲಿ ಶಾಸಕ ಅಪ್ಪಚ್ಚು ರಂಜನ್  ಸಹೋದರ ಸುಜಾ ಕುಶಾಲಪ್ಪ (ಕೊಡಗು), ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್ ಅವರ ಸಹೋದರ ಸುನೀಲಗೌಡ ಪಾಟೀಲ್ (ಬಾಗಲಕೋಟ), ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ (ಬೆಳಗಾವಿ-ಚಿಕ್ಕೋಡಿ), ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ (ಬೆಳಗಾವಿ-ಚಿಕ್ಕೋಡಿ) ಕೊಪ್ಪಳ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಅವರ ಸೋದರಳಿಯ ಶರಣಗೌಡ ಪಾಟೀಲ್ ಮತ್ತು ರಾಯಚೂರು-ಕೊಪ್ಪಳದಿಂದ ಬಿ.ಜಿ.  ಪಾಟೀಲ್ ಆಯ್ಕೆಯಾಗಿದ್ದಾರೆ.

ದೇಶದಲ್ಲಿ ಕೇವಲ ಆರು ರಾಜ್ಯಗಳು ಮೇಲ್ಮನೆಯನ್ನು ಹೊಂದಿವೆ, ಇದು ಪ್ರಜಾಪ್ರಭುತ್ವ ಪ್ರಕ್ರಿಯೆಗಳು ಮತ್ತು ವ್ಯವಸ್ಥೆಗಳಿಗೆ ಮಾರ್ಗದರ್ಶನ ನೀಡುವ ಹಿರಿಯರನ್ನು ಹೊಂದುವ ಉದ್ದೇಶದಿಂದ ಇದನ್ನು ರಚಿಸಲಾಯಿತು.  ಜನಸಾಮಾನ್ಯರನ್ನು ಸಬಲೀಕರಣಗೊಳಿಸುವ ಪ್ರಜಾಪ್ರಭುತ್ವ ತಂತ್ರವನ್ನು ಬುಡಮೇಲು ಮಾಡಿದಂತಾಗಿದೆ.  ಸ್ವಂತ ಕುಟುಂಬದ ಸದಸ್ಯ ಅಥವಾ ಸಂಬಂಧಿಕರ ಬದಲಿಗೆ ಕೆಲವು ಅರ್ಹ ವ್ಯಕ್ತಿಗಳು ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಹುಡುಕಲಾಗಲಿಲ್ಲವೇ? ಸ್ವಜನಪಕ್ಷಪಾತವು ಎಲ್ಲಾ ಪಕ್ಷಗಳಿಗೂ ಸಾಮಾನ್ಯವಾದ ಸಮಸ್ಯೆಯಾಗಿದೆ ಎಂದು ರಾಜಕೀಯ ವಿಶ್ಲೇಷಕ ಸಿದ್ದರಾಜು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com