ನಳಿನ್ ಕುಮಾರ್ ಕಟೀಲು ನಿರ್ಗಮನ, ಸಿ ಟಿ ರವಿ ಆಗಮನ?: ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆ?

ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆಗಳು ಸದ್ಯದಲ್ಲಿಯೇ ಇವೆ. ಒಂದೆಡೆ ಬಿಜೆಪಿ ಹೈಕಮಾಂಡ್ ಅದರತ್ತ ಗಮನ ಹರಿಸಿದೆ. ಇನ್ನೊಂದೆಡೆ ಕರ್ನಾಟಕ ಬಿಜೆಪಿಯಲ್ಲಿ ಬಹಳ ಮುಖ್ಯ ಬದಲಾವಣೆಯನ್ನು ಬಿಜೆಪಿ ನಾಯಕತ್ವ ಮಾಡಲು ಮುಂದಾಗಿದೆ ಎಂಬ ವದಂತಿ ಕೇಳಿಬರುತ್ತಿದೆ. 
ಸಿ ಟಿ ರವಿ
ಸಿ ಟಿ ರವಿ
Updated on

ಬೆಂಗಳೂರು: ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆಗಳು ಸದ್ಯದಲ್ಲಿಯೇ ಇವೆ. ಒಂದೆಡೆ ಬಿಜೆಪಿ ಹೈಕಮಾಂಡ್ ಅದರತ್ತ ಗಮನ ಹರಿಸಿದೆ. ಇನ್ನೊಂದೆಡೆ ಕರ್ನಾಟಕ ಬಿಜೆಪಿಯಲ್ಲಿ ಬಹಳ ಮುಖ್ಯ ಬದಲಾವಣೆಯನ್ನು ಬಿಜೆಪಿ ನಾಯಕತ್ವ ಮಾಡಲು ಮುಂದಾಗಿದೆ ಎಂಬ ವದಂತಿ ಕೇಳಿಬರುತ್ತಿದೆ. 

2019ರಲ್ಲಿ ಕರ್ನಾಟಕದಲ್ಲಿ ಆಪರೇಷನ್ ಕಮಲ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಎರಡೂವರೆ ವರ್ಷಗಳು ಕಳೆದರೂ ರಾಜ್ಯದ ಜನತೆಗೆ ಹೇಳಿಕೊಳ್ಳುವಂತಹ ಒಲವು ಬಿಜೆಪಿ ಕಡೆಗೆ ಬಂದಿಲ್ಲ, ಇತ್ತೀಚಿನ ವಿಧಾನ ಪರಿಷತ್ ಚುನಾವಣಾ ಫಲಿತಾಂಶವೇ ಅದಕ್ಕೆ ಸಾಕ್ಷಿ. ಇದು 2023ರ ವಿಧಾನಸಭೆ ಚುನಾವಣೆ ಮೇಲೆ ಖಂಡಿತವಾಗಿಯೂ ಪ್ರಭಾವ ಬೀರುತ್ತದೆ. 

ದಕ್ಷಿಣದಲ್ಲಿ ಬಿಜೆಪಿಗೆ ಅಧಿಕಾರಕ್ಕೆ ಬರಲು ಇರುವ ಹೆಬ್ಬಾಗಿಲೆಂದರೆ ಸದ್ಯದ ಪರಿಸ್ಥಿತಿ ಮಟ್ಟಿಗೆ ಕರ್ನಾಟಕ, ಇಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮುಂದಿನ ಬಾರಿ ಅಧಿಕಾರವನ್ನು ಕಳೆದುಕೊಳ್ಳಲು ಬಿಜೆಪಿ ಹೈಕಮಾಂಡ್ ಸಿದ್ದವಿಲ್ಲ. ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಸೂಕ್ತ ವ್ಯಕ್ತಿಗೆ ನೀಡಬೇಕೆಂಬ ನಿಲುವಿನಲ್ಲಿ ಹೈಕಮಾಂಡ್ ಇದೆ. ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗೆ ಮುನ್ನ ಪಕ್ಷದಲ್ಲಿ ಸಂಘಟನಾತ್ಮಕ ಬದಲಾವಣೆ ನಡೆಯಬಹುದು ಎಂಬ ಸುದ್ದಿ ದಟ್ಟವಾಗಿ ಕೇಳಿಬರುತ್ತಿದೆ.

2019ರ ಆಗಸ್ಟ್ ನಲ್ಲಿ ರಾಜ್ಯಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ನಂತರ ನಳಿನ್ ಕುಮಾರ್ ಕಟೀಲ್ ಅವರ ಸಾಧನೆ, ಕೆಲಸ ಗುರುತರ ಮಟ್ಟದಲ್ಲಿ ಇಲ್ಲ. ಇದು ಹೈಕಮಾಂಡ್ ಯೋಚಿಸುವಂತೆ ಮಾಡಿದೆ. ನಳಿನ್ ಕುಮಾರ್ ಕಟೀಲು ಅವರು ಹಿಂದಿನಂತೆ ಈಗ ಸಕ್ರಿಯವಾಗಿಲ್ಲ, ಪ್ರತಿಪಕ್ಷಗಳನ್ನು ಅಷ್ಟೊಂದು ಪರಿಣಾಮಕಾರಿಯಾಗಿ ಕಟ್ಟಿಹಾಕುವ ಕೆಲಸ ಮಾಡುತ್ತಿಲ್ಲ ಎಂಬ ಮಾತುಗಳು ಕೂಡ ಇವೆ. ಇನ್ನೊಂದೆಡೆ ಇನ್ನು ಮೂರು ವರ್ಷ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷಾವಧಿ ಆಗಸ್ಟ್ 2022ಕ್ಕೆ ಮುಗಿಯುತ್ತದೆ, ಅಲ್ಲಿಯವರೆಗೆ ಅವರೇ ಮುಂದುವರಿಯಲಿ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ ಎನ್ನಲಾಗುತ್ತಿದೆ. 

ಇತ್ತ ಕಾಂಗ್ರೆಸ್ ನಲ್ಲಿ ಇತ್ತೀಚೆಗೆ ರಾಜ್ಯಾಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಅವರ ಸಾಧನೆ ಹೆಚ್ಚುತ್ತಲೇ ಇದೆ, ವಿಶೇಷವಾಗಿ ಒಕ್ಕಲಿಗ ಸಮುದಾಯದಲ್ಲಿ ಕಾಂಗ್ರೆಸ್ ಪ್ರಬಲವಾಗುತ್ತಿದ್ದು ಜೆಡಿಎಸ್ ಸೋಲುತ್ತಿದೆ. ಬಿಜೆಪಿ ಕೂಡ ಒಕ್ಕಲಿಗ ಮತದಾರರನ್ನು ಒಲಿಸಿಕೊಳ್ಳಲು ವಿಫಲವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಒಕ್ಕಲಿಗ ಮುಖಂಡನನ್ನು ರಾಜ್ಯಾಧ್ಯಕ್ಷ ಮಾಡಿದರೆ ಹೇಗೆ ಎಂಬ ಯೋಚನೆಯಲ್ಲಿ ಕೇಸರಿ ಪಕ್ಷ ಇದ್ದಂತಿದೆ. ಮೂಲಗಳ ಪ್ರಕಾರ, ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ.

ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ಪಕ್ಕಾ ಶಿಷ್ಯ, ಬದಲಾವಣೆಯಾದರೆ ಅದು ಅವರ ಆಯ್ಕೆ. ಸಿ ಟಿ ರವಿಯವರು ಕೂಡ ಬಿ ಎಲ್ ಸಂತೋಷ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ರವಿ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಲೂಬಹುದು ಎಂದು ಬಿಜೆಪಿ ಒಕ್ಕಲಿಗ ಮುಖಂಡರೊಬ್ಬರು ಹೇಳುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆಪ್ತರಾಗಿರುವ ಕೇಂದ್ರ ಸಚಿವ ಭೂಪೇಂದರ್ ಯಾದವ್ ಕೂಡ ಹೇಳಿಕೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ವೀರಶೈವ-ಲಿಂಗಾಯತ ಸಮುದಾಯದಿಂದಲೇ ಉಳಿಯುವ ಸಾಧ್ಯತೆಯಿರುವುದರಿಂದ, ಒಕ್ಕಲಿಗ, ಹಿಂದುಳಿದ ವರ್ಗ ಅಥವಾ ದಲಿತ ಯಾವುದೇ ಪ್ರಬಲ ಜಾತಿಯ ನಾಯಕನನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸುವುದು ಉತ್ತಮ ರಾಜಕೀಯ  ನಡೆಯನ್ನು ಸೂಚಿಸುತ್ತದೆ ಎಂದು ಮತ್ತೊಬ್ಬ ನಾಯಕ ಅಭಿಪ್ರಾಯಪಟ್ಟಿದ್ದಾರೆ. 

ಸಿ ಟಿ ರವಿ ಅವರು ಇತ್ತೀಚೆಗೆ ಒಕ್ಕಲಿಗ ಡಿ ಕೆ ಶಿವಕುಮಾರ್ ಅವರ ಮೇಲೆ ವಾಗ್ದಾಳಿ, ಟೀಕೆ ಮಾಡಿರುವುದು ನೋಡಿದರೆ ಅವರು ಪ್ರತಿಸ್ಪರ್ಧಿ ಪಕ್ಷಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂಬುದರ ಸೂಚನೆಯಾಗಿದೆ. ಪ್ರತಿಪಕ್ಷಗಳು ಮತಾಂತರ ವಿರೋಧಿ ಕಾಯ್ದೆ, ಗೋಹತ್ಯೆ ವಿರೋಧಿ ಕಾನೂನು, ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮತ್ತು ಬಿಟ್‌ಕಾಯಿನ್ ಹಗರಣವನ್ನು ಚುನಾವಣಾ ಅಸ್ತ್ರ ಮಾಡುವ ನಿರೀಕ್ಷೆಯಿರುವುದರಿಂದ, ರವಿ ಅವರು ಪಕ್ಷದ ವಿಷಯಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದು ಹೇಳಲಾಗುತ್ತಿದೆ.

ಎಸ್‌ಸಿ ಮತ್ತು ಹಿಂದುಳಿದ ಸಮುದಾಯದ ಅರವಿಂದ ಲಿಂಬಾವಳಿ ಮತ್ತು ಸುನೀಲ್ ಕುಮಾರ್ ಕಾರ್ಕಳ ಅವರ ಹೆಸರುಗಳೂ ಕೇಳಿಬರುತ್ತಿವೆ, ಆದರೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಈ ಸಮುದಾಯಗಳ ಮತಗಳನ್ನು ಯಥಾಸ್ಥಿತಿಯಲ್ಲಿಡುವಲ್ಲಿ ಯಶಸ್ವಿಯಾಗಿರುವುದರಿಂದ ಬಿಜೆಪಿ ಅವರನ್ನು ನೇಮಿಸದೆ ಇರಬಹುದು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com