ಪಕ್ಷ ಬಿಟ್ಟುಹೋದ ಶಾಸಕರ ಮರುಸೇರ್ಪಡೆ ಕುರಿತು ಚರ್ಚೆ ನಡೆಸುತ್ತೇವೆ: ಕಾಂಗ್ರೆಸ್ ಹಿರಿಯ ನಾಯಕ

ಪಕ್ಷ ಬಿಟ್ಟು ಬಿಜೆಪಿಗೆ ಸೇರ್ಪಡೆಗೊಂಡಿದ್ದ ಶಾಸಕರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಮುಂದಾಗಿದ್ದು, ಈ ಕುರಿತು ಕಾಂಗ್ರೆಸ್ ಶೀಘ್ರದಲ್ಲಿಯೇ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಆರ್.ಧ್ರುವನಾರಾಯಣ್ ಅವರು ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಪಕ್ಷ ಬಿಟ್ಟು ಬಿಜೆಪಿಗೆ ಸೇರ್ಪಡೆಗೊಂಡಿದ್ದ ಶಾಸಕರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಮುಂದಾಗಿದ್ದು, ಈ ಕುರಿತು ಕಾಂಗ್ರೆಸ್ ಶೀಘ್ರದಲ್ಲಿಯೇ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಆರ್.ಧ್ರುವನಾರಾಯಣ್ ಅವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಸ್ತವಿಕ ಸ್ಥಿತಿಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರಿಗೆ ತಿಳಿದಿದೆ. ಆದರೂ, ಪಕ್ಷ ಬಿಟ್ಟು ಹೋದವರು ಹಾಗೂ ಪಕ್ಷದ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟವರು ಪಕ್ಷಕ್ಕೆ ಸೇರ್ಪಡೆಗೊಳ್ಳಬಹುದು ಎಂದು ಹೇಳಿದ್ದಾರೆ. ಪಕ್ಷಕ್ಕೆ ಬರುವವರ ಬಗ್ಗೆ ಅಲ್ಲಂ ವೀರಭದ್ರಪ್ಪ ಸಮಿತಿ ಪರಿಶೀಲನೆ ಮಾಡುತ್ತೆ. ರಾಜ್ಯದಲ್ಲಿ ಬಿಜೆಪಿ ವೈಫಲ್ಯ ಸಾಕಷ್ಟಿದೆ. ಬಿಎಸ್‍ವೈ ಗೋಲ್ಡನ್ ಆಪರ್ಚುನಿಟಿ ಮಿಸ್ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ಆರೋಪ ಇದ್ದರೂ ಸಿಎಂ ಬದಲಾವಣೆ ಮಾಡ್ತಿಲ್ಲ ಎಂದು ಹೇಳಿದ್ದಾರೆ. 

ಇದೇ ವೇಳೆ ಬಂಡಾಯ ಶಾಸಕರನ್ನು ಪಕ್ಷಕ್ಕೆ ಮರುಸೇರ್ಪಡೆ ಮಾಡಿಕೊಳ್ಳುವ ವಿಚಾರ ಸಂಬಂಧ ಡಿಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಎದುರಾಗಿರುವ ವೈಮಸ್ಸು ಕುರಿತು ಮಾತನಾಡಿದ ಅವರು, ಈ ಹಿಂದೆಯೇ ಸಿದ್ದರಾಮಯ್ಯ ಅವರು ಪಕ್ಷ ಬಿಟ್ಟುಹೋದ ನಾಯಕರ ಮರಳಿ ಸೇರ್ಪಡೆಗೊಳಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ. 

ಸರ್ಕಾರದ ವೈಫಲ್ಯಗಳು ಎತ್ತಿಹಿಡಿದು ಪಕ್ಷದ ಬಲ ಹೆಚ್ಚಿಸುವತ್ತ ಕಾಂಗ್ರೆಸ್ ಗಮನ ಹರಿಸಿದೆ. ಚುನಾವಣೆಗಿನ್ನೂ 2 ವರ್ಷಗಳು ಬಾಕಿಯಿದೆ. ಈಗಲೇ ಮುಖ್ಯಮಂತ್ರಿ ಅಭ್ಯರ್ಥಿ ಕುರಿತ ಚರ್ಚೆ ಬೇಕಿಲ್ಲ ಎಂದಿದ್ದಾರೆ. 

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೊರೋನಾ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ನಿಭಾಯಿಸುತ್ತಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ವಾಧಿಕಾರಿ ವರ್ತನೆಯಿಂದ ಕೋವಿಡ್ ಸೋಂಕಿನಿಂದ ಇಡೀ ದೇಶದಲ್ಲಿ ಮೂರುವರೆ ಲಕ್ಷ ಜನ ಸಾವನ್ನಪ್ಪಿದ್ದಾರೆ. ದೇಶದ ಈ ದೊಡ್ಡ ಅನಾಹುತಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com