ಹಿರಿಯ ನಾಯಕರನ್ನು ಅವಮಾನಿಸಿ ಕಸದಬುಟ್ಟಿಗೆ ಎಸೆಯುವುದು ಬಿಜೆಪಿ ಸಂಸ್ಕೃತಿ: ಸುರ್ಜೇವಾಲಾ
ಪಕ್ಷದ ಹಿರಿಯ ನಾಯಕರನ್ನು ಅವಮಾನಿಸಿ ಕಸದ ಬುಟ್ಟಿಗೆ ಎಸೆಯುವುದು ಬಿಜೆಪಿ ಸಂಸ್ಕೃತಿಯಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಟೀಕಿಸಿದರು.
Published: 25th July 2021 10:27 AM | Last Updated: 25th July 2021 10:27 AM | A+A A-

ರಣದೀಪ್ ಸುರ್ಜೇವಾಲಾ
ತುಮಕೂರು: ಪಕ್ಷದ ಹಿರಿಯ ನಾಯಕರನ್ನು ಅವಮಾನಿಸಿ ಕಸದ ಬುಟ್ಟಿಗೆ ಎಸೆಯುವುದು ಬಿಜೆಪಿ ಸಂಸ್ಕೃತಿಯಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಟೀಕಿಸಿದರು.
ತುಮಕೂರಿನಲ್ಲಿ ಮಾತನಾಡಿದ ಅವರು ಪಕ್ಷದಲ್ಲಿನ ಹಿರಿಯ ನಾಯಕರನ್ನು ಅವಮಾನಿಸುವುದು ಬಿಜೆಪಿಯಲ್ಲಿರುವ ಸಂಸ್ಕೃತಿ. ಅದೇ ರೀತಿ ಯಡಿಯೂರಪ್ಪ ಅವರನ್ನೂ ಅವಮಾನಿಸಿ ಕಸದ ಬುಟ್ಟಿಗೆ ಹಾಕಲಾಗುತ್ತಿದೆ ಎಂದು ಲೇವಡಿ ಮಾಡಿದರು.
ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಹೈಜಾಕ್ ಸರ್ಕಾರವಾಗಿದೆ. ಇದನ್ನು ಜನರು ಆಯ್ಕೆ ಮಾಡಿದ್ದಲ್ಲ. ಇದು ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿರುವ ಸರ್ಕಾರ. ಜನರು ಇದರಿಂದ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಪಕ್ಷವು ಅಭಿವೃದ್ಧಿ ಪರ ಸರ್ಕಾರ ನೀಡಲು ಯತ್ನಿಸಲಿದೆ ಎಂದು ತಿಳಿಸಿದರು.
ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಭೆ ನಡೆಸಲಾಯಿತು. ಕಾರ್ಯಕರ್ತರ ಸಲಹೆಗಳನ್ನು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮುಖ್ಯವಾಗಿತ್ತು. ಬೇರು ಮಟ್ಟದಿಂದ ಪಕ್ಷವನ್ನು ಸಂಘಟಿಸಲು ಯತ್ನಿಸಲಾಗಿದೆ.
ಎಸ್‌ಸಿ/ಎಸ್‌ಟಿ, ಅಲ್ಪಸಂಖ್ಯಾತರ ಘಟಕ ಸೇರಿದಂತೆ ವಿವಿಧ ಘಟಕಗಳ ಸಭೆ ನಡೆಸಲಾಗಿದೆ. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಯನ್ನು ಎದುರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಸಭೆಯ ಉದ್ದೇಶವನ್ನು ತಿಳಿಸಿದರು.
ಸುರ್ಜೇವಾಲಾ ಅವರು ಎಲ್ಲಾ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಅಭಿಪ್ರಾಯ ಪಡೆಯುತ್ತಿದ್ದಾರೆ. ಜಿಲ್ಲೆಗಳಲ್ಲಿನ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಪಕ್ಷದ ಸ್ಥಿತಿಗತಿಯ ಸಲಹೆ ಪಡೆಯುತ್ತಿದ್ದಾರೆ. ಪ್ರಜಾತಾಂತ್ರಿಕವಾಗಿ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬ್ಲಾಕ್ ಮಟ್ಟ, ವಾರ್ಡ್ ಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಕರ್ನಾಟಕದಲ್ಲಿ ಭ್ರಷ್ಟ ಸರ್ಕಾರವಿದೆ. ಕೋವಿಡ್19ರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ನೇರವಾಗಿ ಆರ್‌ಟಿಜಿಎಸ್ ಮೂಲಕ ಹಣ ಪಡೆಯುತ್ತಿದ್ದಾರೆ. ಬಿಜೆಪಿಯೇ ಭ್ರಷ್ಟ ಪಕ್ಷವಾಗಿದೆ. ಐಎಎಸ್, ಐಪಿಎಸ್‌ನಿಂದಲೇ ಹಣ ಪಡೆದು ಭ್ರಷ್ಟಾಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಕ್ಕೆ ದುಡ್ಡಿಲ್ಲ, ಮಾತೆತ್ತಿದ್ದರೆ ಕೊರೊನಾ ಎಂದು ಹೇಳುತ್ತಿದ್ದಾರೆ. ರಾಜ್ಯ ಉಳಿಸಲು ಬಿಜೆಪಿ ಪಕ್ಷವನ್ನು ಅಧಿಕಾರದಿಂದ ತೆಗೆಯಬೇಕಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ ಸಂಕಲ್ಪ ಯಾತ್ರೆಯನ್ನು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆಸಲಾಯಿತು. ಪ್ರತಿ ಜಿಲ್ಲೆಯಲ್ಲಿಯೂ ಇರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಸಜ್ಜಾಗುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಕುರಿತ ವಿಷಯದಲ್ಲಿ ಮೂಗು ತೂರಿಸುವುದಿಲ್ಲ. ಉತ್ತಮ ಆಡಳಿತ ಕೊಟ್ಟಿಲ್ಲ ಎಂದೇ ಅವರು ಮುಖ್ಯಮಂತ್ರಿ ಬದಲಾಯಿಸುತ್ತಿದ್ದಾರೆ. ನಾವು ನಮ್ಮ ಕಾಂಗ್ರೆಸ್ ಕಾರ್ಯಕರ್ತರನ್ನು ಸಜ್ಜುಗೊಳಿಸುತ್ತಿದ್ದೇವೆ ಎಂದರು. ಒಬ್ಬ ಭ್ರಷ್ಟಮುಖ್ಯಮಂತ್ರಿ ಬದಲಾಗಿ ಮತ್ತೊಬ್ಬ ಭ್ರಷ್ಟಮುಖ್ಯಮಂತ್ರಿ ಬರಲಿದ್ದಾರೆ. ಈಗಿರುವ ಮುಖ್ಯಮಂತ್ರಿ ಅಧಿಕಾರದಿಂದ ಕೆಳಗಿಳಿದರೆ ಆ ಜಾಗಕ್ಕೆ ಮತ್ತೊಬ್ಬ ಭ್ರಷ್ಟಮುಖ್ಯಮಂತ್ರಿ ಬರಲಿದ್ದಾರೆ. ಅದರಲ್ಲಿ ವಿಶೇಷ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.