ಯಡಿಯೂರಪ್ಪನವರಿಗೆ ಕಣ್ಣೀರಿನ ನೋವು ಕೊಟ್ಟವರಾರು ಎಂಬುದನ್ನು ಬಹಿರಂಗಪಡಿಸಲಿ: ಡಿಕೆ ಶಿವಕುಮಾರ್
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸುವಾಗ ಕಣ್ಣೀರಿಟ್ಟ ಯಡಿಯೂರಪ್ಪ ಅವರು ತಮ್ಮ ಕಣ್ಣೀರಿಗೆ ನೋವು ಕೊಟ್ಟವರು ಯಾರು? ಕಣ್ಣೀರಿನ ಹಿಂದಿನ ನೋವು ಏನು? ಎನ್ನುವುದನ್ನು ಬಹಿರಂಗಪಡಿಸಬೇಕು....
Published: 26th July 2021 05:41 PM | Last Updated: 26th July 2021 05:41 PM | A+A A-

ಡಿಕೆ ಶಿವಕುಮಾರ್
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸುವಾಗ ಕಣ್ಣೀರಿಟ್ಟ ಯಡಿಯೂರಪ್ಪ ಅವರು ತಮ್ಮ ಕಣ್ಣೀರಿಗೆ ನೋವು ಕೊಟ್ಟವರು ಯಾರು? ಕಣ್ಣೀರಿನ ಹಿಂದಿನ ನೋವು ಏನು? ಎನ್ನುವುದನ್ನು ಬಹಿರಂಗಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
'ಯಡಿಯೂರಪ್ಪ ಅವರ ರಾಜೀನಾಮೆ ಹಿಂದೆ ಸಂತೋಷ ಕಾಣುತ್ತಿಲ್ಲ. ಬದಲಿಗೆ ಅವರ ನಿರ್ಧಾರದಲ್ಲಿ ನೋವು ಕಾಣುತ್ತಿದೆ. ಆ ನೋವು ಏನು? ರಾಜೀನಾಮೆ ಕುರಿತ ನಮ್ಮ ವಿಮರ್ಶೆಯನ್ನು ಮುಂದೆ ತಿಳಿಸುತ್ತೇವೆ. ಆದರೆ ಅದಕ್ಕೂ ಮೊದಲು ಮುಖ್ಯಮಂತ್ರಿಗಳು ತಮ್ಮ ನೋವಿನ ಬಗ್ಗೆ ಜನರಿಗೆ ತಿಳಿಸಬೇಕು. ಎರಡು ವರ್ಷಗಳಲ್ಲಿ ಜನರು ಕೋವಿಡ್ ಸಮಸ್ಯೆಗೆ ತುತ್ತಾಗಿದ್ದರಿಂದ ನೋವಾಯ್ತಾ? ಪಕ್ಷದ ಶಾಸಕರನ್ನು ಹೈಕಮಾಂಡ್ ನಿಯಂತ್ರಣ ಮಾಡಲಿಲ್ಲ ಎಂದು ನೋವಾಯ್ತಾ? ಎಂಬುದು ಜನರಿಗೆ ಗೊತ್ತಾಗಬೇಕು.'ಬಿಜೆಪಿ ನಾಯಕರುಗಳೇ ಯಡಿಯೂರಪ್ಪ ಅವರಿಗೆ ಹಿಂದೆಯಿಂದ ಮುಂದೆಯಿಂದ ಚುಚ್ಚಿದ್ದಾರೆ. ಅವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಈಶ್ವರಪ್ಪನವರು ರಾಜ್ಯಪಾಲರಿಗೆ ದೂರು ಕೊಡ್ತಾರೆ, ಮತ್ತೊಬ್ಬ ಪರೀಕ್ಷೆ ಬರೆದಿದ್ದೀನಿ ಎಂದರು, ಮಗದೊಬ್ಬರು ಅವರ ವಿರುದ್ಧ ಹಾದಿ-ಬೀದಿಯಲ್ಲಿ ಟೀಕೆ ಮಾಡುತ್ತಾ ಮಾನ ಕಳೆದರು. ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರ ನಾಯಕರು ಯಡಿಯೂರಪ್ಪ ಅವರಿಗೆ ಮೊದಲಿಂದಲೂ ತೊಂದರೆ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರಿಗೆ ಅವರ ಪಕ್ಷದ ಹೈಕಮಾಂಡ್ ನಿಂದ ಬೆಂಬಲ ಸಿಗಲಿಲ್ಲ. ಯಡಿಯೂರಪ್ಪ ವಿರುದ್ಧ ಮಾತನಾಡಿದವರನ್ನು ನಿಯಂತ್ರಿಸಲಿಲ್ಲ ಎಂದು ಡಿಕೆಶಿ ಹೇಳಿದರು.
ಯಡಿಯೂರಪ್ಪ ಇವತ್ತು ರಾಜೀನಾಮೆ ಕೊಟ್ಟು ಇದೆಲ್ಲದಕ್ಕೂ ತೆರೆ ಎಳೆದಿದ್ದಾರೆ. ನಾವು ಯಡಿಯೂರಪ್ಪ ಅವರಿಗೆ ತೊಂದರೆ ಕೊಡಲಿಲ್ಲ. ಚಪ್ಪಾಳೆ ತಟ್ಟಿ ಅಂದಾಗ ತಟ್ಟಿದ್ದೇವೆ. ಕೊರೋನಾ ಸಮಯದಲ್ಲಿ ಜನರಿಗೆ ಸಹಾಯ ಮಾಡಿ ಎಂದು ಹೇಳಿದ್ದೇವೆ. ಅಷ್ಟು ಬಿಟ್ರೆ ನಮ್ಮಿಂದ ಅವರಿಗೆ ಯಾವುದೇ ತೊಂದರೆ ಆಗಿಲ್ಲ. ಆದರೂ ಬಿಜೆಪಿ ಸರ್ಕಾರ ಸಪೂರ್ಣ ವಿಫಲವಾಗಿದೆ ಎಂದರು.
ಯಡಿಯೂರಪ್ಪನವರ ಸ್ಥಾನ ಯಾರು ತುಂಬುತ್ತಾರೆ ಎಂಬುದರ ಬಗ್ಗೆ ನಾನು ಮಾತಾಡಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಕಾಂಗ್ರೆಸ್ ಬಿಟ್ಟು ಹೋದವರು ಇಂದು ಮಾಜಿಗಳಾಗಿದ್ದಾರೆ. ಅವರು ಪಕ್ಷಕ್ಕೆ ಬರುವ ವಿಚಾರವನ್ನು ಮುಂದೆ ನೋಡೋಣ. ಬಿಜೆಪಿ ನಾಯಕತ್ವದಿಂದ ಯಡಿಯೂರಪ್ಪ ಅವರನ್ನು ಬದಲಿಸಿದ್ದರಿಂದ ನಮಗೇನೂ ಲಾಭ ಇಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಬದಲಿಸಬೇಕು ಎಂದು ರಾಜ್ಯದ ಜನರೇ ತೀರ್ಮಾನಿಸಿದ್ದಾರೆ ಎಂದು ಮಾರ್ಮಿಕವಾಗಿ ಶಿವಕುಮಾರ್ ಹೇಳಿದರು,