'ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಸಂಕಲ್ಪ, ನನಗೆ ಎಲ್ಲ ಸಂದರ್ಭದಲ್ಲೂ ಅಗ್ನಿಪರೀಕ್ಷೆ': ಭಾವುಕರಾದ ಸಿಎಂ ಯಡಿಯೂರಪ್ಪ
ವಿಧಾನಸಭೆಯಲ್ಲಿ ಜಿಲ್ಲೆಯಿಂದ ಒಬ್ಬನೇ ಬಂದು ಹೋರಾಟ ಮಾಡಿದ್ದೇನೆ, ನಾನು ಏಕಾಂಗಿ ಅಲ್ಲ, ಹಿಂತಿರುಗಿ ಎಂದೂ ನೋಡಲಿಲ್ಲ ಎಂದು ವಿದಾಯ ಭಾಷಣ ರೀತಿಯಲ್ಲಿ ತಮ್ಮ ಹಿಂದಿನ ಹೋರಾಟದ ಬದುಕನ್ನು ನೆನೆದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಭಾವುಕರಾದ ಪ್ರಸಂಗ ನಡೆಯಿತು.
Published: 26th July 2021 11:58 AM | Last Updated: 26th July 2021 02:29 PM | A+A A-

ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಘೋಷಿಸಿದ ಸಂದರ್ಭ
ಬೆಂಗಳೂರು; ವಿಧಾನಸಭೆಯಲ್ಲಿ ಜಿಲ್ಲೆಯಿಂದ ಒಬ್ಬನೇ ಬಂದು ಹೋರಾಟ ಮಾಡಿದ್ದೇನೆ, ನಾನು ಏಕಾಂಗಿ ಅಲ್ಲ, ಹಿಂತಿರುಗಿ ಎಂದೂ ನೋಡಲಿಲ್ಲ ಎಂದು ವಿದಾಯ ಭಾಷಣ ರೀತಿಯಲ್ಲಿ ತಮ್ಮ ಹಿಂದಿನ ಹೋರಾಟದ ಬದುಕನ್ನು ನೆನೆದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಭಾವುಕರಾದ ಪ್ರಸಂಗ ನಡೆಯಿತು.
75 ವರ್ಷ ದಾಟಿದ ವ್ಯಕ್ತಿಗೆ ಯಾವುದೇ ಸ್ಥಾನಮಾನ ಕೊಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ತೀರ್ಮಾನ ತೆಗೆದುಕೊಂಡಿತು. ಆದರೆ ನನಗೆ ಸ್ಥಾನಮಾನ ಕೊಟ್ಟಿದ್ದಾರೆ, ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೂಡ ನರೇಂದ್ರ ಮೋದಿ-ಅಮಿತ್ ಶಾ ಜೋಡಿ ಪ್ರಬಲವಾಗಿ ಹೋರಾಡಿ ಗೆದ್ದುಬಂದು ಈ ದೇಶವನ್ನು ಮುನ್ನಡೆಸಿಕೊಂಡು ಹೋಗಬೇಕೆಂದು ನಾನು ಆಶಿಸುತ್ತೇನೆ ಎಂದು ಹೇಳಿದರು.
ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ 2 ವರ್ಷದ ಬಿಜೆಪಿ ಸರ್ಕಾರದ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪನವರು ಅತ್ಯಂತ ಭಾವುಕರಾಗಿ ಮಾತನಾಡಿದರು. ತಮ್ಮ ಹೋರಾಟದ ದಿನಗಳನ್ನು ನೆನಪು ಮಾಡಿಕೊಂಡರು. ಮಂಡ್ಯದ ಬೂಕನಕೆರೆಯಲ್ಲಿ ಹುಟ್ಟಿ ಶಿವಮೊಗ್ಗದ ಶಿಕಾರಿಪುರದಲ್ಲಿ ಬೆಳೆದು ಅಲ್ಲಿಂದ ರಾಜಕೀಯ ನಾಯಕನಾಗಿ ಹೊರಹೊಮ್ಮಿದ್ದೇನೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ 2008ರಲ್ಲಿ ಸ್ವಂತ ಬಲದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ, ರಾಜ್ಯದ ಜನತೆ ನನಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
ಬಿಎಸ್ ವೈ ವಿದಾಯ ಭಾಷಣದ ಮುಖ್ಯಾಂಶಗಳು: ಸಾಧನಾ ಪರ್ವ ಸಮಾವೇಶದಲ್ಲಿ ಭಾಷಣ ಆರಂಭ ಮಾಡುವಾಗಲೂ ಯಡಿಯೂರಪ್ಪನವರು ಉತ್ಸಾಹದಿಂದ ಇದ್ದಂತೆ ಕಂಡುಬರಲಿಲ್ಲ. ತಾನು ಇಂದು ದುಃಖದಿಂದ ವಿದಾಯ ಹೇಳುತ್ತಿಲ್ಲ, ಬದಲಿಗೆ ಸಂತೋಷದಿಂದಲೇ ನಿರ್ಗಮಿಸುತ್ತಿದ್ದೇನೆ ಎಂದು ಬಿಜೆಪಿ ಕೇಂದ್ರ ನಾಯಕರಿಗೆ ಧನ್ಯವಾದ ಹೇಳುವುದನ್ನು ಮರೆಯಲಿಲ್ಲ.
ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಅಧ್ಯಕ್ಷ ಜೆ ಪಿ ನಡ್ಡಾ ಅವರು ನನಗೆ 75 ವರ್ಷ ದಾಟಿದರೂ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಅವಕಾಶ ನೀಡಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ಅವರಿಗೆ ಧನ್ಯವಾದ ಹೇಳಲು ಪದಗಳು ಸಾಲದು. ಇಂದು ನಾನು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುತ್ತಿದ್ದೇನೆ ಎಂದು ಬೇಸರವಾಗುತ್ತಿಲ್ಲ, ಯಾರೂ ಉದ್ವೇಗಕ್ಕೊಳಗಾಗಬೇಡಿ, ಎಲ್ಲರೂ ಸೇರಿ ಪಕ್ಷವನ್ನು ಬೆಳೆಸುವ, ಇನ್ನಷ್ಟು ಸಂಘಟಿಸುವ ಕೆಲಸದಲ್ಲಿ ತೊಡಗೋಣ ಎಂದರು. ಪಕ್ಷ ಸಂಘಟನೆಯ, ಆರಂಭದ ರಾಜಕೀಯ ದಿನಗಳನ್ನು ನೆನೆದ ಬಿಎಸ್ ವೈ: ಅಂದು ಕಾರುಗಳೇ ಇಲ್ಲದಿದ್ದ ಕಾಲದಲ್ಲಿ ಸೈಕಲ್ ನಲ್ಲಿ ಹೋಗಿ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ.
.@CMofKarnataka announced his resignation in his farewell speech at 2nd year "Sadhana Samavesha". @santwana99 @bansykalappa @KannadaPrabha @XpressBengaluru @chetanabelagere @ramupatil_TNIE @NammaBengaluroo @drashwathcn @GovindKarjol @LaxmanSavadi pic.twitter.com/l13fCHpwvm
— Nagaraja Gadekal (@gadekal2020) July 26, 2021
ಯಾರೂ ಪಕ್ಷವನ್ನು ಕಟ್ಟಲು ಸಾಧ್ಯವಾಗದಿದ್ದ ಸಮಯದಲ್ಲಿ ನಾವು ಪಕ್ಷವನ್ನು ಕಟ್ಟಿದ್ದೇವೆ. ಶಿಕಾರಿಪುರ ತಾಲ್ಲೂಕಿನಲ್ಲಿ ನಮ್ಮನ್ನು ಮಾತನಾಡಿಸಲೂ 50-100 ಮಂದಿ ಸಿಗದಿದ್ದ ಸಂದರ್ಭದಲ್ಲಿ ಬಸವಕಲ್ಯಾಣ, ಬಸವನಬಾಗೇವಾಡಿ, ಕೂಡಲಸಂಗಮ, ಶಿವಮೊಗ್ಗದಿಂದ ಪಾದಯಾತ್ರೆ ಮಾಡುವ ಮೂಲಕ ಪಕ್ಷವನ್ನು ಬಲಪಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೆವು. ಆ ಸಮಯಲ್ಲಿ ಶಾಸನಸಭೆಯಲ್ಲಿ ಯಾರೂ ಇರಲಿಲ್ಲ. ನಾವಿಬ್ಬರು ಗೆದ್ದಾಗ ವಸಂತ ಬಂಗೇರ ನಮ್ಮ ಜೊತೆ ಇದ್ದವರು ಬಿಟ್ಟು ಹೋದಾಗ ವಿಧಾನಸಭೆಯೊಳಗೆ ನಾನೊಬ್ಬನೇ ಹೋಗಿದ್ದು. ಆ ನಂತರ ನಾನು ಹಿಂದೆ ತಿರುಗಿ ನೋಡಲಿಲ್ಲ. ನಾನೊಬ್ಬನೇ ಇದ್ದೇನೆ ಎಂದು ಚಿಂತೆ ಮಾಡಲಿಲ್ಲ, ಜನಮೆಚ್ಚುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದೆ ಎಂದು ಬಿಎಸ್ ವೈ ನುಡಿದರು. ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಹುಟ್ಟಿ ಶಿವಮೊಗ್ಗದ ಶಿಕಾರಿಪುರದಲ್ಲಿ ಆರ್ ಎಸ್ ಎಸ್ ನ ಕಾರ್ಯಕರ್ತನಾಗಿ ನನ್ನ ರಾಜಕೀಯ ಸಾರ್ವಜನಿಕ ಜೀವನವನ್ನು ಆರಂಭಿಸಿದೆ. ಶಿಕಾರಿಪುರದಲ್ಲಿ ಪುರಸಭೆ ಚುನಾವಣೆಯಲ್ಲಿ ನಿಂತು ಗೆದ್ದು ಪುರಸಭಾಧ್ಯಕ್ಷನಾದೆ.
ಪುರಸಭಾಧ್ಯಕ್ಷನಾಗಿದ್ದಾಗ ಮನೆಯಿಂದ ಕಚೇರಿಗೆ ದಾರಿ ಮಧ್ಯೆಯಲ್ಲಿ ಹೋಗುವಾಗ ನನ್ನನ್ನು ಮಾರಣಾಂತಿಕ ಹಲ್ಲೆ ಮಾಡಿದರು. ನಾನು ಮುಗಿದೇ ಹೋದೆ ಎಂದು ನನ್ನನ್ನು ಕೈಬಿಟ್ಟು ಹೋದರು. ಭಗವಂತನ ದಯೆಯಿಂದ ನನ್ನ ಪತ್ನಿ, ಮಕ್ಕಳು ಭಾಗ್ಯದಿಂದ ಬದುಕಿಬಂದೆ. ಬದುಕಿಬಂದರೆ ಈ ನಾಡಿನ ಜನತೆಗಾಗಿ ಮೀಸಲಿಡುತ್ತೇನೆ ಎಂದು ಹೇಳಿದ್ದೆ ಎಂದು ಭಾವುಕರಾಗಿ ಅಂದಿನ ಕಷ್ಟದ ದಿನಗಳನ್ನು ನೆನೆದರು. ಜನಸಂಘದ ತಾಲ್ಲೂಕು ಅಧ್ಯಕ್ಷನಾಗಿ, ಜಿಲ್ಲಾಧ್ಯಕ್ಷನಾಗಿ ದಲಿತಪರ, ರೈತರ ಪರ ಹೋರಾಟ ಮಾಡುತ್ತಾ ಬಂದೆ. ಅಂದು ಅಟಲ್ ಬಿಹಾರಿ ವಾಜಪೇಯಿಯವರು ಕೇಂದ್ರದಲ್ಲಿ ಸಚಿವನಾಗಬೇಕೆಂದು ಹೇಳಿದ್ದರು, ಆಗ ನಾನು ಕರ್ನಾಟಕದಲ್ಲಿ ಪಕ್ಷ ಕಟ್ಟಬೇಕಾಗಿ ಬಂದಿದೆ, ನನ್ನನ್ನು ಬಿಟ್ಟುಬಿಡಿ, ಕರೆಯಬೇಡಿ ಎಂದು ಹೇಳುತ್ತಾ ಭಾವುಕರಾದರು. ಅಂದು ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಷಿ, ವಾಜಪೇಯಿಯವರ ಸಹಕಾರದಿಂದ ನಾಡಿನ ಉದ್ದಗಲಕ್ಕೂ ಹೋಗಿ ಪಕ್ಷ ಸಂಘಟನೆ ಮಾಡಿ ಬಿಜೆಪಿಯನ್ನು ಇಂದು ಈ ಸ್ಥಾನಕ್ಕೆ ತಂದು ನಿಲ್ಲಿಸಿದ್ದೇವೆ ಎಂದರು.
ಇಂದು ಕೇಂದ್ರ ನಾಯಕರಿಗೆ ಯಡಿಯೂರಪ್ಪನವರ ಬಗ್ಗೆ ಪ್ರೀತಿ, ವಾತ್ಸಲ್ಯದಿಂದ 2 ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಲು ಅವಕಾಶ ಮಾಡಿಕೊಟ್ಟರು. ಮುಂದಿನ ದಿನಗಳಲ್ಲಿಯೂ ನರೇಂದ್ರ ಮೋದಿ-ಅಮಿತ್ ಶಾ ಜೋಡಿ ಮತ್ತೊಮ್ಮೆ ಲೋಕಸಭೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದು ಪ್ರಪಂಚದಲ್ಲಿಯೇ ಬಲಿಷ್ಠ ರಾಷ್ಟ್ರವನ್ನಾಗಿ ಹೊರಹೊಮ್ಮುವಂತೆ ಮಾಡಲು ಅವಕಾಶ ಸಿಗಲಿ ಎಂದು ಆಶಿಸಿದರು.
ಜೆಡಿಎಸ್ ಪಕ್ಷದ ಜೊತೆ ಒಪ್ಪಂದ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದು ನಂತರ ಜೆಡಿಎಸ್ ನಾಯಕರು ತಮ್ಮ ಮಾತಿನಿಂದ ವಿಮುಖರಾದರು, ವಚನ ಭ್ರಷ್ಟರಾದರು ಎಂದು ಕೂಡ ಸ್ಮರಿಸಿದ ಯಡಿಯೂರಪ್ಪ, ಮುಂದೆ ಸ್ವಂತ ಬಲದಿಂದ ಅಧಿಕಾರಕ್ಕೆ ತರುವ ವಿಶ್ವಾಸವಿದೆ, ಇದಕ್ಕೆ ಎಲ್ಲ ನಾಯಕರು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.
#BREAKING #Karnataka CM @BSYBJP announces his resignation
— Yathiraju_TNIE (@rajaarushi) July 26, 2021
ಬಿ. ಎಸ್. ವೈ. ಸರ್ಕಾರದ ಎರಡು ವರ್ಷಗಳ ಸಾರ್ಥಕ ಸೇವೆ ಸವಾಲುಗಳ ಮೀರಿದ ಸಾಧನಾ ಪರ್ವ https://t.co/9uOUaokZxr
— CM of Karnataka (@CMofKarnataka) July 26, 2021