ರಾಜಕೀಯ ನಾಯಕರನ್ನು ಕಾಡುತ್ತಿರುವ 'ಚಾಮರಾಜನಗರ ಭೀತಿ': ಅಧಿಕಾರದಲ್ಲಿರುವಾಗ ಜಿಲ್ಲೆಗೆ ಭೇಟಿ ಕೊಡಲು ಹಿಂದೇಟು 

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ನಾಲ್ಕು ದಿನಗಳು ಕಳೆದ ನಂತರ ಬಿ ಎಸ್ ಯಡಿಯೂರಪ್ಪನವರು ಹೆಲಿಕಾಪ್ಟರ್ ನಲ್ಲಿ ನಿನ್ನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರಕ್ಕೆ ಭೇಟಿ ನೀಡಿದ್ದರು.ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುದ್ದಿ ಕೇಳಿ ಬೇಸತ್ತು ಅಭಿಮಾನಿ ರವಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರದ ಅಭಿಮಾನಿ ರವಿ ನಿವಾಸಕ್ಕೆ ನಿನ್ನೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರದ ಅಭಿಮಾನಿ ರವಿ ನಿವಾಸಕ್ಕೆ ನಿನ್ನೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ನಾಲ್ಕು ದಿನಗಳು ಕಳೆದ ನಂತರ ಬಿ ಎಸ್ ಯಡಿಯೂರಪ್ಪನವರು ಹೆಲಿಕಾಪ್ಟರ್ ನಲ್ಲಿ ನಿನ್ನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರಕ್ಕೆ ಭೇಟಿ ನೀಡಿದ್ದರು.ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುದ್ದಿ ಕೇಳಿ ಬೇಸತ್ತು ಅಭಿಮಾನಿ ರವಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಸಿಎಂ ಆದವರು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ರಾಜಕೀಯ ನಾಯಕರಿಗಿದೆ. ಬಹುಶಃ ಅದಕ್ಕೆ ಇರಬಹುದು, ಕಳೆದ ಬಾರಿ ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಹಲವು ನಾಗರಿಕರು ಅಸುನೀಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರೂ ಯಡಿಯೂರಪ್ಪನವರು ಜಿಲ್ಲೆಗೆ ಭೇಟಿ ನೀಡಿರಲಿಲ್ಲ. ಆದರೂ ಇಂದು ಅವರ ಸಿಎಂ ಅಧಿಕಾರ ಹೋಗಿದೆ. ಅಧಿಕಾರದಿಂದ ಕೆಳಗಿಳಿದ ಮೇಲೆ ನಿನ್ನೆ ಜಿಲ್ಲೆಗೆ ಹೋಗಿ ಬಂದಿದ್ದಾರೆ.

730 ದಿನಗಳ ಕಾಲ ಅಧಿಕಾರದಲ್ಲಿದ್ದರೂ ಯಡಿಯೂರಪ್ಪನವರು ಮಲೆ ಮಹದೇಶ್ವರ ಬೆಟ್ಟದ ತನಕ ಹೋಗಿಬಂದಿದ್ದರು. ರಾಜ್ಯದ ಇನ್ನೂ ಹಲವು ಮುಖ್ಯಮಂತ್ರಿಗಳು ಸಹ ಅಧಿಕಾರದಲ್ಲಿರುವಾಗ ಚಾಮರಾಜನಗರ ಜಿಲ್ಲೆಗೆ ಭೇಟಿ ಕೊಡುವ ಧೈರ್ಯ ಮಾಡಲಿಲ್ಲ. ಮಲೆ ಮಹದೇಶ್ವರ ಬೆಟ್ಟದವರೆಗೆ ಹೋಗಿ ವಾಪಸ್ಸಾಗಿದ್ದಾರೆ.

ಅಂದರೆ ಇನ್ನೂ ಚಾಮರಾಜನಗರ ಜಿಲ್ಲೆಗೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬ ನಂಬಿಕೆ, ಭಯ ರಾಜಕೀಯ ನಾಯಕರಲ್ಲಿದೆ. ನಿನ್ನ ಗುಂಡ್ಲುಪೇಟೆ ತಾಲ್ಲೂಕಿಗೆ ಬಂದಿದ್ದಾಗ ಯಡಿಯೂರಪ್ಪನವರಲ್ಲಿ ಒಬ್ಬ ಪತ್ರಕರ್ತರು ಯಾಕೆ ಸರ್ ಕಳೆದ ಬಾರಿ ಬಂದಿರಲಿಲ್ಲ ಎಂದು ಕೇಳಿದ್ದರು. ಆದರೆ ಅದಕ್ಕೆ ಉತ್ತರಿಸದೆ ಯಡಿಯೂರಪ್ಪನವರು ನುಣುಚಿಕೊಂಡಿದ್ದಾರೆ.

2018ರಲ್ಲಿ 14 ತಿಂಗಳು ರಾಜ್ಯವನ್ನಾಳಿದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕೂಡ ಜಿಲ್ಲೆಗೆ ಭೇಟಿ ಕೊಟ್ಟಿರಲಿಲ್ಲ, ಆದರೂ 2019ರಲ್ಲಿ ಅವರ ಅಧಿಕಾರ ಹೋಯಿತು.2007ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ, ಕೊಟ್ಟ ಮಾತಿನಂತೆ ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟು ಕೊಡಬೇಕಾದ ಸಮಯಕ್ಕಿಂತ ಮೊದಲು ಕುಮಾರಸ್ವಾಮಿ ಜಿಲ್ಲೆಗೆ ಭೇಟಿ ಕೊಟ್ಟಿದ್ದರು. 2008ರಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪನವರು ಅಂದು ಮುಖ್ಯಮಂತ್ರಿಯಾಗಿದ್ದಾಗಲೂ ಜಿಲ್ಲೆಗೆ ಭೇಟಿ ನೀಡಿರಲಿಲ್ಲ, ನಂತರ ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಹೋಗಿರಲಿಲ್ಲ. 2013ರಲ್ಲಿ ಜಗದೀಶ್ ಶೆಟ್ಟರ್ ಅವರು ಹೋಗಿ ಬಂದಿದ್ದರು. ನಂತರ ಕೆಲವೇ ತಿಂಗಳುಗಳಲ್ಲಿ ಬಿಜೆಪಿ ಸರ್ಕಾರ ಉರುಳಿಬಿತ್ತು.

ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಸಹ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿರಲಿಲ್ಲ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಸಿದ್ದರಾಜು, ಎಸ್ ಎಂ ಕೃಷ್ಣ ಅವರು 2004ರಲ್ಲಿ ಮುದ್ದೆಬಿಹಾಳದ ತಾಳಿಕೋಟಕ್ಕೆ ಭೇಟಿ ನೀಡಿದ್ದರು, ಅದು ಕೂಡ ಚಾಮರಾಜನಗರ ಜಿಲ್ಲೆಯ ರೀತಿಯಲ್ಲಿಯೇ ಅಲ್ಲಿಗೆ ಕಾಲಿಟ್ಟರೆ ಅಧಿಕಾರ ಹೋಗುತ್ತದೆ ಎಂಬ ನಂಬಿಕೆಯನ್ನು ಹೊಂದಿದೆ. ನಂತರ ಕೃಷ್ಣ ಅವರು ಗೆದ್ದಿರಲಿಲ್ಲ.

ಚಾಮರಾಜನಗರ ಜಿಲ್ಲೆಗೆ ಧೈರ್ಯ ಮಾಡಿ ಸಿಎಂ ಆಗಿದ್ದಾಗ ಭೇಟಿ ನೀಡಿದ್ದವರೆಂದರೆ ಸಿದ್ದರಾಮಯ್ಯನವರೇ. ಅವರು 9 ಬಾರಿ ಹೋಗಿ ಬಂದಿದ್ದರು. ಆದರೆ ಅವರು ಕೂಡ 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಸೋತರು.

ಕ್ರಾಂತಿಕಾರಿ, ವಿಚಾರವಾದಿ ಚಿಂತಕ ಎಂದು ಹೆಸರಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಹೆಚ್ ಪಟೇಲ್ ಕೂಡ ಚಾಮರಾಜನಗರಕ್ಕೆ ಹೋಗುವ ಧೈರ್ಯ ಮಾಡಿರಲಿಲ್ಲ, ಮಲೆ ಮಹದೇಶ್ವರ ಬೆಟ್ಟದವರೆಗೆ ಹೋಗಿ ಬಂದಿದ್ದರು. ಅದೇ ಹೆಜ್ಜೆಯನ್ನು ಯಡಿಯೂರಪ್ಪನವರು ಕೂಡ ಇಟ್ಟಿದ್ದಾರೆ.

ಸಿದ್ದರಾಮಯ್ಯನವರನ್ನು ಹೊರತುಪಡಿಸಿ ಕಳೆದ 6 ಮುಖ್ಯಮಂತ್ರಿಗಳಲ್ಲಿ ಯಾರೂ ಚಾಮರಾಜನಗರಕ್ಕೆ ಅಧಿಕಾರದಲ್ಲಿದ್ದಾಗ ಹೋಗಿ ಬಂದಿರಲಿಲ್ಲ. ಕ್ರಾಂತಿಕಾರಿ ಚಿಂತಕ ಎಂದು ಹೆಸರಾಗಿರುವ ಬಸವರಾಜ ಬೊಮ್ಮಾಯಿಯವರಾದರೂ ಜಿಲ್ಲೆಗೆ ಭೇಟಿ ನೀಡುತ್ತಾರಾ ಎಂದು ನೋಡಬೇಕಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಬಿ ಎಸ್ ಮೂರ್ತಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com