ಬಿಜೆಪಿಯಲ್ಲಿ ಮುಗಿಯದ 'ಅಂತರ್ಯುದ್ಧ'; ತಣಿಯದ 'ಬೇಗುದಿ': ಆಂತರಿಕ ಸಂಘರ್ಷಕ್ಕೆ ಹೊಸ ತಿರುವು ನೀಡಿದ ಶಾಸಕರ ಟ್ವೀಟ್!

ಪಕ್ಷದೊಳಗೆ ಏನೂ ನಡೆಯುತ್ತಿಲ್ಲ; ಯಡಿಯೂರಪ್ಪ ಬದಲಾವಣೆಯ ಪ್ರಶ್ನೆಯೇ ಇಲ್ಲ’ ಎಂದು ಬಿಜೆಪಿಯ ಎಲ್ಲ ನಾಯಕರು ಬಹಿರಂಗವಾಗಿ ಉದ್ಘೋಷ ಮಾಡುತ್ತಿದ್ದರೂ ಒಳಗಡೆ ‘ತುಮುಲ–ಅಸಹನೆ’ಯ ಕುದಿ ತಣ್ಣಗಾಗಿಲ್ಲ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಪಕ್ಷದೊಳಗೆ ಏನೂ ನಡೆಯುತ್ತಿಲ್ಲ; ಯಡಿಯೂರಪ್ಪ ಬದಲಾವಣೆಯ ಪ್ರಶ್ನೆಯೇ ಇಲ್ಲ’ ಎಂದು ಬಿಜೆಪಿಯ ಎಲ್ಲ ನಾಯಕರು ಬಹಿರಂಗವಾಗಿ ಉದ್ಘೋಷ ಮಾಡುತ್ತಿದ್ದರೂ ಒಳಗಡೆ ‘ತುಮುಲ–ಅಸಹನೆ’ಯ ಕುದಿ ತಣ್ಣಗಾಗಿಲ್ಲ ಎಂಬುದಕ್ಕೆ ಈ ಹೊಸ ಬೆಳವಣಿಗೆ ಸಾಕ್ಷಿಯಾಗಿದೆ.

ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗಳು ಮುಗಿಯಿತು ಎನ್ನುವಾಗಲೇ, ‘ಎಲ್ಲ ಶಾಸಕರ ಅಭಿಪ್ರಾಯ ಆಲಿಸಲು ಪ್ರತ್ಯೇಕ ಸಭೆ ನಡೆಸಬೇಕು’ ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್‌ಕುಮಾರ್‌ ಒತ್ತಾಯಿಸುವ ಮೂಲಕ ಬಿಜೆಪಿ ಆಂತರಿಕ ಸಂಘರ್ಷಕ್ಕೆ ಹೊಸ ತಿರುವು ನೀಡಿದ್ದಾರೆ.

ಕಳೆದ 3 ದಿನದಿಂದ ಮಾಧ್ಯಮದಲ್ಲಿ ಬರುತ್ತಿರುವ ಹೇಳಿಕೆಗಳು ಪಕ್ಷದ ಹಿತದೃಷ್ಟಿಯಿಂದ ಒಳಿತಲ್ಲ. ಈ ಅಭಿಪ್ರಾಯಗಳು ಎಲ್ಲ ಶಾಸಕರು ಮತ್ತು ಕಾರ್ಯಕರ್ತರ ಅಭಿಪ್ರಾಯವೂ ಅಲ್ಲ. ನಮ್ಮ ಅಭಿಪ್ರಾಯಗಳನ್ನು ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲವಾದ್ದರಿಂದ, ಪಕ್ಷದ ವರಿಷ್ಠರು ಅಭಿಪ್ರಾಯ ಆಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು’ ಎಂದು ಅವರು ಅಧ್ಯಕ್ಷ
ನಳಿನ್ ಕುಮಾರ್‌ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ಟ್ವೀಟ್‌ ಟ್ಯಾಗ್‌ ಮಾಡಿದ್ದಾರೆ.

‘ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಿರಿ’ ಎಂದು ಅವರು ನೇರವಾಗಿ ಹೇಳಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವದ ಬಗ್ಗೆಯೂ ಪ್ರಸ್ತಾಪಿಸದೇ, ಶಾಸಕರ ಅಭಿಪ್ರಾಯ ಹಂಚಿಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂದು ಅವರು ಬೇಡಿಕೆ ಮಂಡಿಸಿರುವುದು ನಾನಾ ರೀತಿಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.

ಕೆಲವೇ ತಿಂಗಳುಗಳ ಹಿಂದೆ ಸುನೀಲ್ ಕುಮಾರ್  ಪಕ್ಷದ ಮುಖಂಡರಿಗೆ ಸಭೆ ಕರೆಯಲು ಮತ್ತು ಸಮಸ್ಯೆಗಳನ್ನು ಚರ್ಚಿಸಲು ವೇದಿಕೆಗೆ ಅವಕಾಶ ನೀಡುವಂತೆ ಪತ್ರ ಬರೆದಿದ್ದರು. ಸರ್ಕಾರ ಮತ್ತು ರಾಜ್ಯ ಘಟಕದ ನಡುವಿನ ಸಮನ್ವಯದ ಕೊರತೆಯ ಬಗ್ಗೆ ಮತ್ತು ನಿಗಮ-ಮಂಡಳಿಗಳಿಗೆ ನೇಮಕಾತಿಗಳ ನಿರ್ಧಾರಗಳು ಪಕ್ಷದಲ್ಲಿ ಅನೇಕರನ್ನು ನಿರಾಶೆಗೊಳಿಸಿದ್ದರ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದರು.

ಮುಖ್ಯಮಂತ್ರಿಯಾಗಿ ಮುಂದುವರಿಯಲು ಯಡಿಯೂರಪ್ಪ ಅವರನ್ನು ಬೆಂಬಲಿಸಿ ಸಹಿ ಅಭಿಯಾನವನ್ನು ಆಯೋಜಿಸುತ್ತಿರುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿಕೊಂಡ ಒಂದು ದಿನದ ನಂತರ ಪ್ರತಿಕ್ರಿಯಿಸಿದ್ದ ಸುನೀಲ್ ಕುಮಾರ್, ಒಬ್ಬ ಶಾಸಕರ ಹೇಳಿಕೆಯು ಎಲ್ಲಾ ಶಾಸಕರ ನಿಲುವು ಎಂದು ಒಬ್ಬರು ಭಾವಿಸಬಾರದು ಎಂದಿದ್ದರು. ಯಾರಾದರೂ ಮಾಧ್ಯಮದಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದರಿಂದ, ಇದು ಜನಪ್ರಿಯ ಅಭಿಪ್ರಾಯ ಎಂದು ಅರ್ಥವಲ್ಲ ಎಂದು ತಿವಿದಿದ್ದರು.

ಕೇಂದ್ರ ನಾಯಕತ್ವಕ್ಕೆ ತಿಳಿಸಬೇಕಾದ ಕಾಳಜಿ ನಮ್ಮಲ್ಲಿದೆ, ಎಂದು ವೇದಿಕೆಯ ಬೇಡಿಕೆಯನ್ನು ಬೆಂಬಲಿಸುವ ನಾಯಕರೊಬ್ಬರು ಹೇಳಿದ್ದಾರೆ. ಸರ್ಕಾರ, ಸಿಎಂ ಮತ್ತು ಅವರ ನಿರ್ಧಾರಗಳ ಬಗ್ಗೆ ವಿಮರ್ಶಿಸಲು ಅರುಣ್ ಸಿಂಗ್ ಕರ್ನಾಟಕದ ಭೇಟಿಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com