'ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ಡಾಬಿನ ಚಿಂತೆ': ಅರುಣ್ ಸಿಂಗ್ ರಾಜ್ಯ ಭೇಟಿ ಕುರಿತು ಕಾಂಗ್ರೆಸ್ ಟೀಕೆ!

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಭೇಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಟೀಕಿಸಿದೆ. "ಅಧಿಕಾರದಲ್ಲಿದ್ದು ಜನಸೇವೆ ಮಾಡುವ ಬದಲು ಆಡಳಿತ ಪಕ್ಷದೊಳಗಿನ ಜಗಳವನ್ನು ಪರಿಹರಿಸಲು ಅವರು ಬರುತ್ತಿದ್ದಾರೆ" ಎಂದು ವಿರೋಧ ಪಕ್ಷ ಆರೋಪಿಸಿದೆ.
ಅರುಣ್ ಸಿಂಗ್
ಅರುಣ್ ಸಿಂಗ್

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಭೇಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಟೀಕಿಸಿದೆ. "ಅಧಿಕಾರದಲ್ಲಿದ್ದು ಜನಸೇವೆ ಮಾಡುವ ಬದಲು ಆಡಳಿತ ಪಕ್ಷದೊಳಗಿನ ಜಗಳವನ್ನು ಪರಿಹರಿಸಲು ಅವರು ಬರುತ್ತಿದ್ದಾರೆ" ಎಂದು ವಿರೋಧ ಪಕ್ಷ ಆರೋಪಿಸಿದೆ.

ಅರುಣ್ ಸಿಂಗ್ ಅವರು ಬುಧವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂಪುಟ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ನಾಳೆ (ಗುರುವಾರ) ಆಡಳಿತ ಪಕ್ಷದ ಶಾಸಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಮತ್ತು ತಮ್ಮ ಮೂರು ದಿನಗಳ ಭೇಟಿಯನ್ನು ಮುಕ್ತಾಯಗೊಳಿಸುವ ಮೊದಲು ಶುಕ್ರವಾರ ಪಕ್ಷದ ರಾಜ್ಯ ಕೋರ್ ಸಮಿತಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ರಾಜ್ಯದಲ್ಲಿನ ನಾಯಕತ್ವದ ಬದಲಾವಣೆಯ ಬಗ್ಗೆ ಕೆಲವು ಊಹಾಪೋಹಗಳಿದ್ದು  ಸಿಂಗ್ ಅವರು ಇತ್ತೀಚೆಗೆ ಮುಖ್ಯಮಂತ್ರಿ ಬದಲಾವಣೆ ಇಲ್ಲವೆಂದಿದ್ದರು. ಅಲ್ಲದೆ ಯಡಿಯೂರಪ್ಪ ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಪ್ರತಿಪಾದಿಸಿದರು. ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಲು ಬಿಜೆಪಿಯ ಒಂದು ಗುಂಪು ಮುಂದಾಗಿದೆ ಎಂದು ಹೇಳಲಾಗಿದೆ.

ಈ ಹಿಂದೆ ಬಿಜೆಪಿ ಹೈಕಮಾಂಡ್ ತನ್ನ ಮೇಲೆ ವಿಶ್ವಾಸ ಹೊಂದಿರುವವರೆಗೂ ತಾನು ಸಿಎಂ ಆಗಿಯೇ ಮುಂದುವರಿಯುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರು ಮತ್ತು ಈ ಬಗ್ಗೆ ಅವರಿಗೆ ಯಾವುದೇ ಗೊಂದಲ ಇಲ್ಲವೆಂದು ಸ್ಪಷ್ಟಪಡಿಸಿದ್ದರು.

ಕರ್ನಾಟಕದ ಕಾಂಗ್ರೆಸ್ ಸಿಂಗ್ ಭೇಟಿಗೆ ಮುಂಚಿತವಾಗಿ ಟ್ವೀಟ್ ಮಾಡಿ "ಅರುಣ್ ಸಿಂಗ್ ಅವರೇ, 'ಕಟ್ಟೆ ಪಂಚಾಯ್ತಿ' ನಡೆಸಲು ಓಡೋಡಿ ಬರುವ ತಾವು, ಜನರ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಲು ಸಮಯವಿಲ್ಲವೇ? ಈ ಗತಿಗೆಟ್ಟ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಆಂತರಿಕ ಕಿತ್ತಾಟಗಳೇ ಸುದ್ದಿ ಮಾಡುತ್ತಿವೆ ಹೊರತು ಸಾಧನೆಗಳಲ್ಲ. ಈ ದುರಾಡಳಿತದ ಬಗ್ಗೆ ತಮಗೆ ಕನಿಷ್ಠ ವಿಷಾದ, ನಾಚಿಕೆ ಯಾವುದೂ ಇಲ್ಲವೇ.

"ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ಡಾಬಿನ ಚಿಂತೆ" ಎನ್ನುವಂತೆ ರಾಜ್ಯದ ಜನತೆಗೆ ಬದುಕಿನ ಚಿಂತೆ, ಬಿಜೆಪಿಗೆ ಕುರ್ಚಿ ಕದನದ ಚಿಂತೆಯಾಗಿದೆ. ಒಂದು ಕಡೆ ಸಹಿ ಸಂಗ್ರಹಿಸುವವರು, ಮತ್ತೊಂದು ಕಡೆ ಪತ್ರ ಬರೆಯುವವರು, ಇನ್ನೊಂದು ಕಡೆ ಅಸಂತೋಷಗೊಂಡವರು! ಎಂದಿಗೂ ಜನಪರವಾಗಿರದ ಬಿಜೆಪಿಗೆ ಅಧಿಕಾರ ಸಿಗುವುದು ರಾಜ್ಯಕ್ಕೆ 'ಶಾಪ' ತಟ್ಟಿದಂತೆ!" ಎಂದಿದೆ.

ರಾಜ್ಯವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಬಿಜೆಪಿಯ ಆಂತರಿಕ ಕಲಹವು ಪರಾಕಾಷ್ಠೆ ತಲುಪಿದೆ ಎಂದು ಕೈ ಪಕ್ಷ ಆರೋಪಿಸಿದೆ. ಬೆಲೆ ಏರಿಕೆ, ನಿರುದ್ಯೋಗ, ಕೊರೋನಾ ಮೂರನೇ ಅಲೆ, ಬ್ಲ್ಯಾಕ್ ಫಂಗಸ್, ರೈತರು ಎದುರಿಸುತ್ತಿರುವ ಕಷ್ಟಗಳು, ಆರ್ಥಿಕ ಹಿಂಜರಿತ ಎಲ್ಲದರ ನಡುವೆ ಅಧಿಕಾರಕ್ಕಾಗಿ ಹೋರಾಟಕ್ಕೆ ಸಾಕಷ್ಟು ಸಮಯ' ತೆಗೆದುಕೊಳ್ಳುವುದನ್ನು ನೋಡಲು ಇದು ಬಿಜೆಪಿಗೆ ಸಮಯೋಚಿತವಲ್ಲ ಎಂದು ಪಕ್ಷ ವಾದಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com