ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಇಂದು ನಡೆದ ಸಚಿವರುಗಳ ಸಭೆ
ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಇಂದು ನಡೆದ ಸಚಿವರುಗಳ ಸಭೆ

ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಂದಿನ ಸಭೆಯಲ್ಲಿ ಬಂದಿಲ್ಲ: ನಳಿನ್ ಕುಮಾರ್ ಕಟೀಲು

ಜನರಿಗೆ ಉತ್ತಮ ಆಡಳಿತ ನೀಡುವುದು ಹೇಗೆ, ಸರ್ಕಾರದ ಆಡಳಿತವನ್ನು ತಳಮಟ್ಟಕ್ಕೆ ಕೊಂಡೊಯ್ಯುವುದು ಹೇಗೆ ಎಂಬುದರ ಕುರಿತು ಇಂದಿನ ನನ್ನ ಭೇಟಿಯ ಮೊದಲ ದಿನದ ಸಭೆಯಲ್ಲಿ ಚರ್ಚಿಸಲಾಯಿತು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

ಬೆಂಗಳೂರು: ಜನರಿಗೆ ಉತ್ತಮ ಆಡಳಿತ ನೀಡುವುದು ಹೇಗೆ, ಸರ್ಕಾರದ ಆಡಳಿತವನ್ನು ತಳಮಟ್ಟಕ್ಕೆ ಕೊಂಡೊಯ್ಯುವುದು ಹೇಗೆ ಎಂಬುದರ ಕುರಿತು ಇಂದಿನ ನನ್ನ ಭೇಟಿಯ ಮೊದಲ ದಿನದ ಸಭೆಯಲ್ಲಿ ಚರ್ಚಿಸಲಾಯಿತು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

ಇಂದು ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಅಧಿಕೃತ ಸಭೆಯ ನಂತರ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಜಿಲ್ಲೆ, ತಾಲ್ಲೂಕು, ಗ್ರಾಮ ಮಟ್ಟಗಳವರೆಗೆ ಹೇಗೆ ಜನರಿಗೆ ತಲುಪಿಸಬೇಕು, ಪ್ರಚಾರ ಮಾಡಬೇಕು, ಸಚಿವರು, ಶಾಸಕರು ಹೇಗೆ ಒಗ್ಗೂಡಿ ಕೆಲಸ ಮಾಡಬೇಕೆಂಬುದರ ಬಗ್ಗೆ ಚರ್ಚಿಸಲಾಯಿತು. ಜನರಿಗೆ ಜನಪ್ರತಿನಿಧಿಗಳು ಸುಲಭವಾಗಿ ಸಿಗುವಂತೆ ಮಾಡುವುದು ನಮ್ಮ ಚರ್ಚೆಯ ಅಜೆಂಡಾವಾಗಿತ್ತು ಎಂದು ಹೇಳಿದರು.

ಪಕ್ಷದೊಳಗೆ ಯಾರಿಗೆ ಭಿನ್ನಾಭಿಪ್ರಾಯ, ಸಮಸ್ಯೆಗಳಿದ್ದರೆ ಸಂಬಂಧಪಟ್ಟ ಸಚಿವರು, ಮುಖ್ಯಮಂತ್ರಿಗಳು, ಶಾಸಕರ ಬಳಿ ಹೇಳಿಕೊಳ್ಳಬೇಕೆ ಹೊರತು ಮಾಧ್ಯಮಗಳ ಮುಂದೆ ಹೇಳಿಕೆ ನೀಡಬೇಡಿ ಎಂದು ಸೂಚನೆ ನೀಡಿದ್ದೇನೆ, ತಮ್ಮ ಹೇಳಿಕೆಯಿಂದ ಪಕ್ಷಕ್ಕೆ, ಪಕ್ಷದ ನಾಯಕರಿಗೆ ಮುಜುಗರವಾಗಬಹುದೇ ಎಂದು ಯೋಚಿಸಬೇಕು ಎಂದು ಪುನರುಚ್ಛರಿಸಿದರು.

ಇಂದು ಮುಖ್ಯಮಂತ್ರಿಗಳು, ಸಚಿವ ಸಂಪುಟದ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾಹಿತಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ನಮ್ಮ ರಾಜ್ಯದಲ್ಲಿ ನಡೆದಿರುವ ಕೆಲಸಗಳ ಬಗ್ಗೆ ವರದಿಗಳನ್ನು ನೀಡಿ ಸಂಘಟನೆ ಬಗ್ಗೆ ಕೂಡ ಮಾಹಿತಿ ನೀಡಿದ್ದೇವೆ. ಸರ್ಕಾರ ಮತ್ತು ಸಂಘಟನೆ ಎರಡೂ ಕೂಡ ಚೆನ್ನಾಗಿ ಕೆಲಸ ಮಾಡಿದೆ ಎಂದು ಅರುಣ್ ಸಿಂಗ್ ಅವರು ಮೆಚ್ಚುಗೆ ಸೂಚಿಸಿದ್ದಾರೆ ಎಂದರು.

ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು: ಮುಂದಿನ ದಿನಗಳಲ್ಲಿ ಮಂತ್ರಿಗಳು ಪ್ರತಿ ವಾರ ತಮ್ಮ ಕಾರ್ಯಾಲಯದಲ್ಲಿ ಇರಬೇಕು, ಶಾಸಕರು, ಸಾರ್ವಜನಿಕರು ಮತ್ತು ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಬೇಕು.

ಪ್ರವಾಸಗಳನ್ನು ಮಾಡಿದಾಗ ಜಿಲ್ಲೆಯಲ್ಲಿ ಶಾಸಕರನ್ನಿಟ್ಟುಕೊಂಡು ಅಧಿಕಾರಿಗಳ ಸಭೆಗಳನ್ನು ಮಾಡಬೇಕು. ಪಕ್ಷದ ಕಾರ್ಯಕರ್ತರ ಜೊತೆ ಅಲ್ಲಿರುವ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹಾರಕ್ಕೆ ಯತ್ನ.

ಎರಡು ತಿಂಗಳಿಗೊಮ್ಮೆ ಮಂತ್ರಿಗಳ ಕಾರ್ಯಾಲಯದಲ್ಲಿ ಕಾರ್ಯವೈಖರಿ, ಅವರವರ ಯೋಜನೆಗಳ ಬಗ್ಗೆ ಚರ್ಚೆ ಮಾಡಬೇಕು. ಇವತ್ತು ರಾಜ್ಯದಲ್ಲಿ ಹತ್ತಾರು ಒಳ್ಳೆಯ ಯೋಜನೆಗಳನ್ನು ಸರ್ಕಾರ ತಂದಿದ್ದರೂ ಅವುಗಳಿಗೆ ಸೂಕ್ತ ಪ್ರಚಾರ ಸಿಕ್ಕಿಲ್ಲ, ಅವುಗಳಿಗೆ ಪ್ರಚಾರ ನೀಡಬೇಕು.

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ ಅನುಷ್ಠಾನಕ್ಕೆ ತರುವ ಕೆಲಸ ಮಾಡಬೇಕೆಂದು ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಂದಿನ ಸಭೆಯಲ್ಲಿ ಬಂದಿಲ್ಲ ಎಂದು ನಳಿನ್ ಕುಮಾರ್ ಕಟೀಲು ಸ್ಪಷ್ಟಪಡಿಸಿದರು.
 

Related Stories

No stories found.

Advertisement

X
Kannada Prabha
www.kannadaprabha.com