ಮುಂದಿನ ಎರಡು ವರ್ಷ ಸಿಎಂ ಸ್ಥಾನದಿಂದ ಯಡಿಯೂರಪ್ಪನವರ ಬದಲಾವಣೆ ಅಸಾಧ್ಯ: ರಮೇಶ್ ಜಾರಕಿಹೊಳಿ
ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಂಡಾಯ ಶಾಸಕರನ್ನು ಒಗ್ಗೂಡಿ ಕರೆತರುವಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಈಗ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
Published: 18th June 2021 07:31 AM | Last Updated: 18th June 2021 12:33 PM | A+A A-

ರಮೇಶ್ ಜಾರಕಿಹೊಳಿ
ಬೆಳಗಾವಿ: ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣಕರ್ತರಾಗಿದ್ದ ಹಿಂದೆ ಕಾಂಗ್ರೆಸ್ ನಲ್ಲಿದ್ದು ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಂಡಾಯ ಶಾಸಕರನ್ನು ಒಗ್ಗೂಡಿ ಕರೆತರುವಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಈಗ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಮುಂದಿನ ಎರಡು ವರ್ಷಗಳಿಗೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಸಾಧ್ಯವಿಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಕೂಡ ಅವರ ನಾಯಕತ್ವದಡಿಯಲ್ಲಿಯೇ ಬಿಜೆಪಿ ಸ್ಪರ್ಧೆಗಿಳಿಯಲಿದೆ ಎಂದು ಹೇಳಿದ್ದಾರೆ.
ನಿನ್ನೆ ಗೋಕಾಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 17 ಮಂದಿ ಶಾಸಕರು ಬಿಜೆಪಿ ಸೇರಿದ್ದು ಗೃಹ ಸಚಿವ ಅಮಿತ್ ಶಾ ಮತ್ತು ಯಡಿಯೂರಪ್ಪನವರಿಗೋಸ್ಕರವೇ. ಕೆಲವು ಶಾಸಕರು ಅತೃಪ್ತಿ ಹೊಂದಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಮಾತನಾಡಿದರೆ ಅಂತವರನ್ನು ನಾವೆಲ್ಲರೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಅಂತಹ ಶಾಸಕರನ್ನು ಕರೆದು ಕೂತು ಮಾತನಾಡಿಸಿ ಎಂದು ನಾನು ಯಡಿಯೂರಪ್ಪನವರನ್ನು ಕೇಳಿಕೊಳ್ಳುತ್ತೇನೆ. ಬಿಜೆಪಿಯಲ್ಲಿ ನಾವೆಲ್ಲ ಶಾಸಕರು ಒಂದೇ ಕುಟುಂಬದಂತೆ ಇದ್ದೇವೆ. ಕೆಲವೊಮ್ಮೆ ಕೆಲವರು ಅಸಮಾಧಾನ, ಸಿಟ್ಟು ಹೊರಹಾಕುತ್ತಾರೆ. ಬಿಜೆಪಿ ಪಕ್ಷ ಈ ಎಲ್ಲಾ ಸಮಸ್ಯೆಗಳಿಂದ ಹೊರಬರಲಿದೆ ಎಂದಿದ್ದಾರೆ.