ಚಾಮರಾಜನಗರ ದುರಂತ: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ; ಸಿಎಂ ಬಿಎಸ್ ವೈ, ಸಚಿವ ಸುಧಾಕರ್ ರಾಜಿನಾಮೆಗೆ ಒತ್ತಾಯ

ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆಯಲ್ಲಿ 24 ಮಂದಿ ಸಾವಿಗೀಡಾಗಿರುವ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆಯಲ್ಲಿ 24 ಮಂದಿ ಸಾವಿಗೀಡಾಗಿರುವ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಘಟನೆಗೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು, ಮೃತರ ಕುಟುಂಬದವರಿಗೆ ತಲಾ 25 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇದು ಸಾವುಗಳಲ್ಲ. ಸರ್ಕಾರವೇ ಮಾಡಿರುವ  ಕೊಲೆಗಳು. ಈ ದುರಂತಕ್ಕೆ ಮುಖ್ಯಮಂತ್ರಿ, ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಹೊಣೆ. ಈ ಎಲ್ಲರೂ ರಾಜಿನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ 23 ರೋಗಿಗಳು ಆಕ್ಸಿಜನ್ ಸಮಸ್ಯೆಯಿಂದಾಗಿ ಮರಣ ಹೊಂದಿದ್ದಾರೆ.

ನನಗಿರುವ ಮಾಹಿತಿಯಂತೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 180 ಬೆಡ್‍ಗಳಿದ್ದು ಅದರಲ್ಲಿ 120 ಅಕ್ಸಿಜೆನ್ ಬೆಡ್‍ಗಳು 20 ವೆಂಟಿಲೇಟರ್‍ಗಳು ಇವೆ. ಈ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತಿ ನಿತ್ಯ 350 ಅಕ್ಸಿಜೆನ್ ಸಿಲೆಂಡರ್‍ಗಳ ಅಗತ್ಯವಿದೆ. ಈ ಅಕ್ಸಿಜೆನ್ ಸಿಲಿಂಡರ್‍ಗಳು ಮೈಸೂರಿನ ಸದರನ್ ಮತ್ತು ಟರ್ಕಿ  ಎಂಬ ಅಕ್ಸಿಜನ್ ಉತ್ಪಾದಕ ಘಟಕಗಳಿಂದ ಸರಬರಾಜಾಗುತ್ತಿದೆ. ಇಲ್ಲಿಗೆ ಶುಕ್ರವಾರದಿಂದ ಅಕ್ಸಿಜೆನ್ ಸಮಸ್ಯೆಯಾಗಿದೆ. ಶನಿವಾರ ಕೇವಲ 30 ಸಿಲೆಂಡರ್‍ಗಳು ಸರಬರಾಜಾಗಿವೆ. ಚಾಮರಾಜನಗರದ ಅಧಿಕಾರಿಗಳು ಮೈಸೂರಿನ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ನಮ್ಮ ಮಾಜಿ ಸಂಸದರು ಹಾಲಿ ಕೆ.ಪಿ.ಸಿ.ಸಿ.  ಕಾರ್ಯಾಧ್ಯಕ್ಷರಾದ ಧೃವನಾರಾಯಣ ರವರು ಉಸ್ತುವಾರಿ ಸಚಿವರಾದ ಸುರೇಶ್ ಕುಮಾರ್ ರವರನ್ನು ಸಂಪರ್ಕಿಸಿ, ಆಕ್ಸಿಜೆನ್ ಕೊರತೆಯಾಗುತ್ತಿರುವುದನ್ನು ಗಮನಕ್ಕೆ ತಂದಿದ್ದಾರೆ. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. 30 ಸಿಲೆಂಡರ್‍ಗಳಲ್ಲಿ ಭಾನುವಾರ ರಾತ್ರಿ 9.00 ಗಂಟೆವರೆಗೆ  ಆಸ್ಪತ್ರೆಯವರು ಆಕ್ಸಿಜೆನ್ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಕೊಲೆಗಳಿಗೆ ಕಾರಣವಾದ ಸರ್ಕಾರವು, ಚಾಮರಾಜನಗರದಲ್ಲಾದ ದುರಂತ ಘಟನೆಯನ್ನು ತನಿಖೆ ಮಾಡಲು ಸರ್ಕಾರದ ಐ.ಎ.ಎಸ್. ಅಧಿಕಾರಿಯಾದ ಶಿವಯೋಗಿ ಕಳಸದ ಇವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿದೆ. ಈ ತನಿಖೆಯಿಂದ ಸತ್ಯ ಹೊರಬರಲು ಸಾಧ್ಯವಿಲ್ಲ. ಆದ್ದರಿಂದ ಅಲ್ಲಿನ ಜಿಲ್ಲಾ  ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ಮಾಡಬೇಕು. ಆಕ್ಸಿಜೆನ್ ಸಮಸ್ಯೆ ಶುಕ್ರವಾರದಿಂದಲೆ ಪ್ರಾರಂಭವಾಗಿದೆ. ಸರ್ಕಾರದ ಆಕ್ಸಿಜೆನ್ ಒದಗಿಸಲು 3 ದಿನಗಳ ಅವಕಾಶವಿತ್ತು. ಈ ಅವಕಾಶವನ್ನು ಬಳಸಿಕೊಂಡು ಆಕ್ಸಿಜೆನ್ ಒದಗಿಸಿದ್ದರೆ 23 ಜನ ಅಮಾಯಕ ಜನರ ಮರಣ ಹೊಂದುವ  ಅನಿವಾರ್ಯಯತೆ ಉದ್ಭವವಾಗುತ್ತಿರಲಿಲ್ಲ. ಹಾಗಾಗಿ ಗೊತ್ತಿದ್ದು, ಜನರ ಸಾವಿಗೆ ಸರ್ಕಾರ ಕಾರಣವಾಗಿರುವುದರಿಂದ ಸತ್ತವರ ಸಾವನ್ನು ಸಹಜವೆಂದು ಭಾವಿಸಲಾಗದು. ಆದುದರಿಂದ ಈ ಆಮಾಯಕರ ಕೊಲೆಗಳಿಗೆ ಕಾರಣರಾಗಿರುವ ಮುಖ್ಯಮಂತ್ರಿಗಳು, ಆರೋಗ್ಯ ಮಂತ್ರಿಗಳು, ಜಿಲ್ಲಾ ಸಚಿವರು ಈ ಕೂಡಲೇ  ರಾಜಿನಾಮೆ ನೀಡಿ ಹೊರನಡೆಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಯಡಿಯೂರಪ್ಪ ರಾಜೀನಾಮೆಗೆ ಒತ್ತಾಯ
ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ 24 ರೋಗಿಗಳು ಸಾವನ್ನಪ್ಪಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಆಡಳಿತಾರೂಢ ಬಿಜೆಪಿ ನೇತೃತ್ವದ ಸರ್ಕಾರವೇ ಹೊಣೆ ಎಂದಿರುವ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ನೈತಿಕ ಹೊಣೆ ಹೊತ್ತು ಯಡಿಯೂರಪ್ಪ ಮತ್ತು  ಆರೋಗ್ಯ ಸಚಿವ ಡಾ ಸುಧಾಕರ್ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಆಸ್ಪತ್ರೆಗಳಿಗೆ ಆಮ್ಲಜನಕ ಒದಗಿಸದಿರುವುದು ರಾಜ್ಯ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ ಎಂದು ಸಿದ್ದರಾಮಯ್ಯ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ. ಇದು ತುಂಬಾ ಗಂಭೀರ ಮತ್ತು ಅಮಾನವೀಯ ಪರಿಸ್ಥಿತಿಯಾಗಿದ್ದು, ರಾಜ್ಯದಲ್ಲಿನ  ಆಡಳಿತ ಸಂಪೂರ್ಣ ಕುಸಿದಿದೆ ಎಂಬುದಕ್ಕೆ ಹೆಚ್ಚಿನ ಸಾಕ್ಷ್ಯಗಳು ಅಗತ್ಯವಿಲ್ಲ. ಬಿಜೆಪಿಯ ಅಧಿಕಾರ ದಾಹಕ್ಕೆ ಇನ್ನೂ ಎಷ್ಟು ಅಮಾಯಕ ಜನರು ಬಲಿಯಾಗಬೇಕು? ಎಂದು ಅವರು ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com