'ಲಸಿಕೆ ವಿಚಾರದಲ್ಲಿ ನನ್ನನ್ನು ಟೀಕಿಸಲು ಬಂದು ಹಿಟ್ ವಿಕೆಟ್ ಆಗಿದ್ದೀರಿ: ಪ್ರತಿ ಎಸೆತಕ್ಕೆ ಸಿಕ್ಸರ್ ಕೊಡಬೇಕೆನಿಸಿದೆ'

ಕೊರೋನಾ ಲಸಿಕೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ ಕುಮಾರಸ್ವಾಮಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ಎಚ್.ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
ಎಚ್.ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ

ಬೆಂಗಳೂರು: ಕೊರೋನಾ ಲಸಿಕೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ ಕುಮಾರಸ್ವಾಮಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಸಿದ್ದರಾಮಯ್ಯ ಹೇಳಿಕೆಗೆ ಟ್ವಿಟ್ಟರ್‌ ಮೂಲಕ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಟಾಂಗ್‌ ನೀಡಿದ್ದಾರೆ.

ಶಾಂತಿ ಕಾಲದಲ್ಲಿ ಕಲಹಕ್ಕೆ ಬರುವುದು, ನೆರೆ ಮನೆ ಬೆಂಕಿಯಲ್ಲಿ ಬೇಳೆ ಬೇಯಿಸುವುದು ಕಾಂಗ್ರೆಸ್‌ನ ಜಾಡ್ಯ. ಈ ಅಂಟುರೋಗಕ್ಕೆ ಒಳಗಾದವರು ಸಿದ್ದರಾಮಯ್ಯ. ಲಸಿಕೆ ವಿಚಾರದಲ್ಲಿ ಕಾಂಗ್ರೆಸ್‌ನ ಆತ್ಮವಂಚನೆ ನೆನಪಿಸಿದ್ದಕ್ಕೆ ಸಿದ್ದರಾಮಯ್ಯ ನನ್ನ ವಿರುದ್ಧ ಕಾಲು ಕೆರೆದುಕೊಂಡು ಬಂದಿದ್ದಾರೆ. ಅವರ ಪ್ರತಿ ಎಸೆತಕ್ಕೆ ಸಿಕ್ಸರ್‌ ಕೊಡಬೇಕೆನಿಸಿದೆ" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

"ಕೋವಿಡ್‌ ಲಸಿಕೆ ವಿಚಾರದಲ್ಲಿನ ಕಾಂಗ್ರೆಸ್‌ನ ಆತ್ಮವಂಚನೆಯನ್ನು ಪ್ರಸ್ತಾಪಿಸಿದ್ದಕ್ಕೆ ನಾನು ಸ್ವಯಂ ಗೋಲು ಹೊಡೆದುಕೊಂಡಿರುವುದಾಗಿ ನೀವು ಹೇಳಿದ್ದೀರಿ. ಸಿದ್ದರಾಮಯ್ಯನವರೇ ಲಸಿಕೆ ವಿಚಾರದಲ್ಲಿ ರಾಷ್ಟ್ರದ ಎದುರು ಬೆತ್ತಲಾಗಿ, ನಿಂತಿರುವುದು ಕಾಂಗ್ರೆಸ್‌. ಈ ವಿಚಾರದಲ್ಲಿ ನನ್ನನ್ನು ಟೀಕಿಸಲು ಬಂದು ನೀವು ಹಿಟ್‌ ವಿಕೆಟ್‌ ಆಗಿದ್ದೀರಿ" ಎಂದು ಕಾಲೆಳೆದಿದ್ದಾರೆ.

"ಲಸಿಕೆ ವಿಚಾರವಾಗಿ ಕಾಂಗ್ರೆಸ್ ಅನುಮಾನದ ಮಾತುಗಳನ್ನು ಆಡಲಿಲ್ಲವೇ? ಭಾರತದ್ದೇ ಕೋವ್ಯಾಕ್ಸಿನ್‌ನ ಬಗ್ಗೆ ಅಪಪ್ರಚಾರ ಮಾಡಲಿಲ್ಲವೇ? ನಮ್ಮದೇ ಲಸಿಕೆಯನ್ನು ನೀವು ಪ್ರೋತ್ಸಾಹಿಸಬೇಕಿತ್ತೋ ಇಲ್ಲವೋ? ಅದು ಬಿಟ್ಟು ನೀವು ಮಾಡಿದ್ದೇನು? ಅಡಿಗಡಿಗೆ ಲಸಿಕೆ ಮೇಲೆ ಅನುಮಾನ. ಈ ಮೂಲಕ ಭಾರತೀಯ ವಿಜ್ಞಾನಿಗಳ ಅಪಮಾನ. ಇದನ್ನೇ ಅಲ್ಲವೇ ನಾನು ಹೇಳಿದ್ದು? ಎಂದು ಸಿದ್ದರಾಮಯ್ಯರನ್ನು ಎಚ್‌ಡಿಕೆ ಪ್ರಶ್ನಿಸಿದ್ದಾರೆ.

"ಕಾಂಗ್ರೆಸ್‌ನ ಲಸಿಕೆ ರಾಜಕಾರಣವನ್ನು ನಾನು ವಿವರಿಸಿದ್ದೇನೆ. ಕಾಂಗ್ರೆಸ್‌ನ ಅಪಪ್ರಚಾರದಿಂದ ಜನ ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ ಎಂದು ನಾನು ಹೇಳಿಲ್ಲ. ಲಸಿಕೆಗಾಗಿ ಜನರು ಸಿದ್ದರಾಗಿಯೇ ಇದ್ದಾರೆ. ಕಾಂಗ್ರೆಸ್‌ ಹೇಳಿದ ಮಾತ್ರಕ್ಕೆ ಜನ ಲಸಿಕೆಯಿಂದ ವಿಮುಖರಾಗಿಲ್ಲ.ಜನ ಕಾಂಗ್ರೆಸ್‌ ಮಾತು ಕೇಳುತ್ತಾರೆ ಎಂಬ ಭ್ರಮೆ ಸಿದ್ದರಾಮಯ್ಯನವರಿಗೆ ಬೇಡ ಎಂದು ಟಾಂಗ್‌ ಕೊಟ್ಟಿದ್ದಾರೆ.

ಲಸಿಕೆಯೊಂದು ಸಿಕ್ಕಾಗ ಅದನ್ನು ಮೊದಲಿಗೆ ಮುಂಚೂಣಿ ಹೋರಾಟಗಾರರಿಗೆ ನೀಡಲಾಗುತ್ತದೆ.ಇದು ನಿಮಗೆ ತಿಳಿದಿರಲಿ. ದೇಶದಲ್ಲಿ ಮೊದಲು ಕೋವಿಡ್‌ ವಾರಿಯರ್‌ಗಳಿಗೆ ಲಸಿಕೆ ನೀಡಲಾಯಿತು. ನನ್ನ ಸರದಿ ಬಂದಾಗ ನಾನು ಲಸಿಕೆ ಪಡೆದೆ. ಇಲ್ಲಿ ಕಾಂಗ್ರೆಸ್‌ ಮಾತು ನಂಬಿ ಕೂರುವಂಥದ್ದೇನಿತ್ತು. ಕಾಂಗ್ರೆಸ್‌ ಮಾತನ್ನು 50 ವರ್ಷದಿಂದಲೂ ಕೇಳದ ಕುಟುಂಬ ನಮ್ಮದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com