ದೇಶವನ್ನು 70 ವರ್ಷ ಹಿಂದಕ್ಕೆ ಕೊಂಡೊಯ್ದಿದ್ದೇ ಬಿಜೆಪಿ ಸರ್ಕಾರದ 7 ವರ್ಷಗಳ ಮಹಾನ್ ಸಾಧನೆ: ಸಿದ್ದರಾಮಯ್ಯ

ಕೇಂದ್ರದಲ್ಲಿ ಏಳು ವರ್ಷಗಳ ಆಡಳಿತ ಪೂರೈಸಿರುವ ಬಿಜೆಪಿಯ ಸಾಧನೆ ಶೂನ್ಯ ಎಂದು ಕಿಡಿಕಾರಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ತಮ್ಮ ಏಳು ವರ್ಷಗಳ ಆಳ್ವಿಕೆಯಲ್ಲಿ ದೇಶವನ್ನು 70 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿರುವುದೇ ನರೇಂದ್ರ ಮೋದಿಯವರ ಸಾಧನೆ ಎಂದಿದ್ದಾರೆ.
ನರೇಂದ್ರ ಮೋದಿ-ಸಿದ್ದರಾಮಯ್ಯ
ನರೇಂದ್ರ ಮೋದಿ-ಸಿದ್ದರಾಮಯ್ಯ

ಬೆಂಗಳೂರು: ಕೇಂದ್ರದಲ್ಲಿ ಏಳು ವರ್ಷಗಳ ಆಡಳಿತ ಪೂರೈಸಿರುವ ಬಿಜೆಪಿಯ ಸಾಧನೆ ಶೂನ್ಯ ಎಂದು ಕಿಡಿಕಾರಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ತಮ್ಮ ಏಳು ವರ್ಷಗಳ ಆಳ್ವಿಕೆಯಲ್ಲಿ ದೇಶವನ್ನು 70 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿರುವುದೇ ನರೇಂದ್ರ ಮೋದಿಯವರ ಸಾಧನೆ ಎಂದಿದ್ದಾರೆ.

ತಮ್ಮ ನಿವಾಸದಲ್ಲಿಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ನಾಯಕರು ಮೋದಿಯವರ ನೇತೃತ್ವದ ಸರ್ಕಾರಕ್ಕೆ ಏಳು ವರ್ಷ ತುಂಬಿತೆಂದು ಖಾಲಿ ಕೊಡ ಹೊತ್ತುಕೊಂಡು ಸಂಭ್ರಮ ಪಟ್ಟಿದ್ದಾರೆ. ದೇಶ ಸೂತಕದ ಮನೆಯಾಗಿದೆ. ಮನೆ ಮನೆಗಳೂ ಕತ್ತಲಾಗಿವೆ. ಪ್ರತಿ ಕಣ್ಣಿನಲ್ಲೂ ಕಣ್ಣೀರಿದೆ. ದೇಶದ ಜನ ಮೋದಿಯವರ ಆಡಳಿತಕ್ಕೆ 7 ವರ್ಷವಾಯಿತೆಂದು ಸಂಭ್ರಮ ಪಟ್ಟಿಲ್ಲ. ಬದಲಾಗಿ ಶ್ರದ್ಧಾಂಜಲಿ ಅರ್ಪಿಸಿದವರಂತೆ ಶೋಕ ಪಟ್ಟಿದ್ದಾರೆ ಎಂದರು.

ದೇಶದ ಪಾಲಿಗೆ ಮೋದಿಯವರ 7 ವರ್ಷಗಳ ಸಾಧನೆ ಎಂದರೆ ಅಸಂಖ್ಯಾತ ದುರಂತಗಳ ಅವಧಿಯಾಗಿದೆ. ಪಟ್ಟಿ ಮಾಡಿದರೆ ಬಹುಶಃ ನೂರಾರು, ಸಾವಿರಾರು ಸುಳ್ಳುಗಳಿವೆ. ಬಿಜೆಪಿ ಎಂದರೆ ಸುಳ್ಳನ್ನು ಉತ್ಪಾದಿಸುವ ಜಗತ್ತಿನ ಅತಿ ದೊಡ್ಡ ಕೈಗಾರಿಕೆ ಇದ್ದಂತೆ ಎಂದು ಲೇವಡಿ ಮಾಡಿದರು. 

70 ವರ್ಷಗಳ ಅವಧಿಯಲ್ಲಿ ದೇಶದ ಜನರು ಕಷ್ಟ ಪಟ್ಟು ಕಟ್ಟಿದ ಅಮೂಲ್ಯವಾದ ಕಾರ್ಖಾನೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಕೇವಲ ಸುಳ್ಳಿನ ಕಾರ್ಖಾನೆಯನ್ನು ನಡೆಸುತ್ತಿದ್ದಾರೆ.  ದೇಶ ವೇಗವಾಗಿ ಅಭಿವೃದ್ಧಿಯಾಗುತ್ತಿಲ್ಲ. ಬದಲಾಗಿ ವೇಗವಾಗಿ ಹಿಂದು ಹಿಂದಕ್ಕೆ ಕುಸಿದು ಹೋಗುತ್ತಿದೆ. ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬುದು ಕೇವಲ ಸುಳ್ಳು ಘೋಷಣೆ ಎಂಬುದನ್ನು ಸ್ವತಃ ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಹಾಗಿದ್ದರೆ ಯಾರ ವಿಕಾಸವಾಗಿದೆ? ಎಂದು ಪ್ರಶ್ನಿಸಿದರು.

ಸಬ್ ಕಾ ಸಾಥ್ ಅಂಬಾನಿ ಕಾ ವಿಕಾಸ್, ಅದಾನಿ ಕಾ ವಿಕಾಸ್, ಟೋಟಲಿ ಗುಜರಾತ್ ಕಾರ್ಪೊರೇಟ್ ಆದ್ಮಿ ಕಾ ವಿಶ್ವಾಸ್ ಆಗಿದೆ. ಯಾಕೆಂದರೆ ದೇಶದ ಜನ ಎರಡು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ. ಬೊಗಸೆ ಆಮ್ಲಜನಕಕ್ಕೆ, ಒಂದು ಇಂಜೆಕ್ಷನ್ನಿಗೆ, ಒಂದು ಲಸಿಕೆಗೆ, ಉದ್ಯೋಗಕ್ಕೆ ಪರದಾಡುತ್ತಿದ್ದಾರೆ ಆದರೆ ಮೋದಿಯವರ ಸರ್ಕಾರದ ತುಘಲಕ್ ಆಡಳಿತ ನೀತಿಯಿಂದಾಗಿ ಈ ಕಾರ್ಪೊರೇಟ್ ಕಂಪೆನಿಗಳು  ಕೊರೋನಾ ಅವಧಿಯಲ್ಲೂ 12 ಲಕ್ಷ ಕೋಟಿಗೂ ಅಧಿಕ ಹಣವನ್ನು ಜನರಿಂದ ದೋಚಿಕೊಂಡಿವೆ ಎಂದರು.

2019ರಲ್ಲಿ ಸಣ್ಣ ಕುಟುಂಬವೊಂದು ಸರಾಸರಿ 5000 ರೂ. ಖರ್ಚು ಮಾಡುತ್ತಿದ್ದರೆ ಈ ವರ್ಷ 11000ದಷ್ಟು ಖರ್ಚು ಮಾಡಬೇಕಾಗಿದೆ. ಅನೇಕ ಮನೆಗಳಲ್ಲಿ ಹೆಣ್ಣು ಮಕ್ಕಳು ತವರು ಮನೆಯವರು ಕೊಟ್ಟ ಸಣ್ಣ ಪುಟ್ಟ ವಡವೆಗಳನ್ನು ಮಾರಿ ಸಂಸಾರ ನಡೆಸುವಂಥ ಪರಿಸ್ಥಿತಿ ಬಂದಿದೆ.  ದುಡಿಮೆ ಇಲ್ಲ. ಕೈಯಲ್ಲಿ ಕಾಸಿಲ್ಲ. ಬೆಲೆಗಳು ಆಕಾಶ ಮುಟ್ಟಿವೆ. ಜನರು ದುಡಿದ ಒಂದೊಂದು  ರೂಪಾಯಿಯೂ ಅದಾನಿ, ಅಂಬಾನಿಗಳಿಗೆ ಸೇರುತ್ತಿದೆ. ದೇಶ ಹೇಗೆ ಅಭಿವೃದ್ಧಿ ಆಗುತ್ತದೆ? ಜನ ಹೇಗೆ ನೆಮ್ಮದಿಯಿಂದಿರಲು ಸಾಧ್ಯ? ಅದಕ್ಕೆ ಬಿಜೆಪಿಯವರ ಸಂಭ್ರಮ ದೇಶದ ಜನರದ್ದಲ್ಲ. ಅದು ಅದಾನಿ ಅಂಬಾನಿಗಳದ್ದು. ಇನ್ನು ಸುಳ್ಳು ಹೇಳುವುದರಲ್ಲಿ ಟ್ರಂಪ್ ನನ್ನೂ ಮೀರಿಸಿದ ಖ್ಯಾತಿ ಮೋದಿಯವರಿಗಿದೆ ಎಂದು ಆರೋಪಿಸಿದರು.

ಘೋಷಣೆಯನ್ನೆ ಸಾಧನೆ ಎಂದು ಹೇಳುವುದಾದರೆ, ಬುಲೆಟ್ ರೈಲು, ಸ್ಮಾರ್ಟ ಸಿಟಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ, 15 ಲಕ್ಷ ಪ್ರತಿಯೊಬ್ಬರ ಖಾತೆಗೆ, ಕಪ್ಪು ಹಣ ಜನರ  ಜೇಬಿಗೆ ಇವೆಲ್ಲವುಗಳಿಂದ ಭಾರತ ಸ್ವರ್ಗ ಸಮಾನವಾಗಬೇಕಾಗಿತ್ತು ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು. 

ಮೋದಿ ಸರ್ಕಾರದ 7 ಮಹಾ ದುರಂತಗಳು: 
1. ನೋಟು ಅಮಾನ್ಯೀಕರಣ/ ನೋಟ್ ಬ್ಯಾನ್.
2. ಜಿಎಸ್ ಟಿ, ರಾಜ್ಯಗಳ ಶೋಷಣೆ.
3. ಕೊರೋನ ವಿರುದ್ಧ ಗೆದ್ದು ಬಿಟ್ಟಿದ್ದೇವೆಂದು ಹೇಳಿ ಜನ ಮೈಮರೆಯುವಂತೆ ಮಾಡಿ ಎರಡನೆ ಕೋವಿಡ್ ಅಲೆಯ ಸೃಷ್ಟಿಗೆ ಕಾರಣ, ಜನರು ಆಮ್ಲಜನಕ, ಔಷಧ ಸಿಗದೆ ಬೀದಿಬೀದಿಯಲ್ಲಿ ಸಾವನ್ನಪ್ಪಿದ್ದು.
4. ರೈತ ವಿರೋಧಿ, ಕಾರ್ಮಿಕ ವಿರೋಧಿ, ದೇಶ ವಿರೋಧಿ ಕಾನೂನುಗಳನ್ನು ತಂದಿರುವುದು.
5. ನಿರುದ್ಯೋಗ.
6. ದೇಶದ ಅಮೂಲ್ಯ ಆಸ್ತಿಗಳಾದ ಕಲ್ಲಿದ್ದಲು ಗಣಿಗಳು, ಕಾರ್ಖಾನೆಗಳು, ಸಂಸ್ಥೆಗಳು, ವಿಮಾನ ನಿಲ್ದಾಣ, ಬಂದರುಗಳನ್ನು ಖಾಸಗಿ ತಿಮಿಂಗಿಲಗಳಾದ ತಮ್ಮ ಸ್ನೇಹಿತರಿಗೆ ಬಿಟ್ಟುಕೊಟ್ಟಿರುವುದು.
7. ಬೆಲೆ ಏರಿಕೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com