ರಾಜ್ಯ ನಾಯಕತ್ವ ಬದಲಾವಣೆ ಕುರಿತು ಕಾಂಗ್ರೆಸ್ ವದಂತಿ ಹಬ್ಬಿಸುತ್ತಿದೆ: ಅರುಣ್ ಸಿಂಗ್
ರಾಜ್ಯದಲ್ಲಿ ನಾಯಕತ್ವ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಪ್ರತಿಪಕ್ಷ ಕಾಂಗ್ರೆಸ್ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಆರೋಪಿಸಿದ್ದಾರೆ.
Published: 09th November 2021 08:30 AM | Last Updated: 09th November 2021 01:10 PM | A+A A-

ಅರುಣ್ ಸಿಂಗ್
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಪ್ರತಿಪಕ್ಷ ಕಾಂಗ್ರೆಸ್ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಸೋಮವಾರ ಸಂಜೆ ನಗರಕ್ಕೆ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬಳಿಯಾವುದೇ ವಿಷಯಗಳಿಲ್ಲದ ಕಾರಣ ಅದು ಬಿಜೆಪಿ ಬಗ್ಗೆ ಸುಳ್ಳು ಆರೋಪ-ಆಧಾರರಹಿತ ಟೀಕೆ ಮಾಡುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಸವರಾಜ ಬೊಮ್ಮಾಯಿಯವರು ಉತ್ತಮವಾಗಿ ಕಾರ್ಯನಿರ್ವಹಿಸತ್ತಿದ್ದಾರೆಂದು ಪ್ರಶಂಸಿಸಿದರು.
ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆಂಬ ಕಾಂಗ್ರೆಸ್ ಆರೋಪ ಕುರಿತ ಪ್ರಶ್ನೆಗೆ ಉತ್ತರಿಸಿ, ಆ ಕುರಿತು ನಮ್ಮ ಮುಖ್ಯಮಂತ್ರಿಗಳು ಕೂಡಲೇ ಕ್ರಮ ಕೈಗೊಂಡಿದ್ದಾರೆ. ಕಾಂಗ್ರೆಸ್ ನಾಯಕರು ಆಧಾರರಹಿತವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಒಡೆದ ಮನೆಯಾಗಿದೆ. ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಅವರ ನಡುವೆ ತೀವ್ರ ಭಿನ್ನಾಭಿಪ್ರಾಯವಿದೆ. ಆ ಪಕ್ಷಕ್ಕೆ ಹೋರಾಟ ಮಾಡಲು ವಿಷಯಗಳೇ ಇಲ್ಲದಂತಾಗಿದೆ. ಕಾಂಗ್ರೆಸ್ ಒಳಜಗಳ ಕೇವಲ ಕರ್ನಾಟಕದಲ್ಲಿ ಅಷ್ಟೇ ಇಲ್ಲ. ಛತ್ತೀಸ್ಗಢ, ಪಂಜಾಬ್ ರಾಜ್ಯಗಳಲ್ಲೂ ಇದೆ. ಕಾಂಗ್ರೆಸ್ ನಾಯಕತ್ವದ ವೈಫಲ್ಯವೇ ಇದಕ್ಕೆ ಕಾರಣ ಎಂದು ಕಿಡಿಕಾರಿದರು.
ಇದನ್ನೂ ಓದಿ: ಬಿಟ್ ಕಾಯಿನ್ ವಿಚಾರ ಮರೆಮಾಚಲು ಬಿಜೆಪಿಯಿಂದ ಸಿದ್ದರಾಮಯ್ಯ ವಿರುದ್ಧ ಆರೋಪ: ಕಾಂಗ್ರೆಸ್
ಇತ್ತೀಚೆಗೆ ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ಮತಗಳ ಅಂತರದಿಂದ ಸೋಲು ಉಂಟಾಗಿದೆ. ಅಲ್ಲಿ ಸಿಎಂ ಬೊಮ್ಮಾಯಿ ಸೇರಿದಂತೆ ಹಲವರು ಉತ್ತಮವಾಗಿ ಕೆಲಸ ಮಾಡಿದ್ದಾರೆಂದು ಸ್ಪಷ್ಟಪಡಿಸಿದರು.
ಬಳಿಕ ಮುಂಬರುವ ಚುನಾವಣೆ ಕುರಿತು ಮಾತನಾಡಿದ ಅವರು, ಮಂಗಳವಾರ ನಡೆಯುವ ಸಭೆಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕ್ರಮಗಳು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ಸಿದ್ಧತೆಗಳ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಅರುಣ್ ಸಿಂಗ್, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆಂದು ತಿಳಿದುಬಂದಿದೆ.