ಅಲ್ಪಸಂಖ್ಯಾತ ನಾಯಕರ ಮುಗಿಸುತ್ತಿರುವುದು ಸಿದ್ದರಾಮಯ್ಯ ಅಲ್ಲ, ಜೆಡಿಎಸ್: ಎನ್ಎ ಹ್ಯಾರಿಸ್

ಕಾಂಗ್ರೆಸ್ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತ ನಾಯಕರನ್ನು ಮುಗಿಸುತ್ತಿದ್ದಾರೆಂಬ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಕಾಂಗ್ರೆಸ್ ಶಾಸಕ ಎನ್‌.ಎ ಹ್ಯಾರಿಸ್ ಅವರು ಸೋಮವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ಎನ್ಎ ಹ್ಯಾರಿಸ್
ಎನ್ಎ ಹ್ಯಾರಿಸ್

ಬೆಂಗಳೂರು: ಕಾಂಗ್ರೆಸ್ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತ ನಾಯಕರನ್ನು ಮುಗಿಸುತ್ತಿದ್ದಾರೆಂಬ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಕಾಂಗ್ರೆಸ್ ಶಾಸಕ ಎನ್‌.ಎ ಹ್ಯಾರಿಸ್ ಅವರು ಸೋಮವಾರ ತೀವ್ರವಾಗಿ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ಶಾಸಕ ಎನ್‌ಎ ಹ್ಯಾರಿಸ್‌ ಅವರು, ಅಲ್ಪಸಂಖ್ಯಾತ ನಾಯಕರನ್ನು ಯಾರು ಮುಗಿಸಿದ್ದಾರೆ ಎಂದು ಜನ ನೋಡಿದ್ದಾರೆ. ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯ ಇತ್ತೀಚಿನ ಬೆಳವಣಿಗೆಗಳು ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ನಾಯಕರನ್ನು ಯಾರು ಮುಗಿಸುತ್ತಿದ್ದಾರೆಂಬುದನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.

ತಮ್ಮ ಪಕ್ಷದಲ್ಲಿದ್ದ ಅಲ್ಪಸಂಖ್ಯಾತರಿಗೆ ಅವರು ಯಾವ ಸ್ಥಾನಮಾನ ಕೊಟ್ಟಿದ್ದರು ಎಂದು ಆ ಪಕ್ಷದಲ್ಲಿದ್ದ ನಾಯಕರೇ ಹೇಳಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ಏನಾಯಿತು ಎಂದು ನಾವೆಲ್ಲರೂ ನೋಡಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಮಾತನಾಡುವ ಸ್ವಾತಂತ್ರ್ಯ ಇದೆ. ಅದಕ್ಕಾಗಿ ಮುಕ್ತವಾಗಿ ಮಾತನಾಡುತ್ತಾರೆ. ಇದೇ ರೀತಿ ಬಿಜೆಪಿಯಲ್ಲಿ ಮಾತನಾಡಲು ಸಾಧ್ಯವೇ? ಇಲ್ಲಿ ನಮಗೆ ಸಿಗುವ ಹಕ್ಕು, ಬೇರೆಲ್ಲೂ ಸಿಗುವುದಿಲ್ಲ ಎಂಬುದು ನಮ್ಮ ಅಭಿಪ್ರಾಯ ಎಂದು ತಿಳಿಸಿದರು.

ಸ್ಥಾನಮಾನದ ವಿಚಾರವಾಗಿ ನಾವು ಪಕ್ಷದ ಒಳಗೆ ಕೂತು ಚರ್ಚೆ ಮಾಡುತ್ತೇವೆ. ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಕೇವಲ ಸ್ಥಾನಮಾನ ಅಷ್ಟೇ ಅಲ್ಲ ಅವರಿಗಾಗಿ ಸರ್ಕಾರ ಇದ್ದಾಗ ಎಷ್ಟು ಅನುದಾನ ನೀಡಿ ಯಾವ ರೀತಿ ಕಾರ್ಯಕ್ರಮ ನೀಡಲಾಗಿದೆ ಎಂಬುದು ಮುಖ್ಯ.

ನಮ್ಮ ಸರ್ಕಾರ ಇದ್ದಾಗ ನೀಡಲಾದ ಅನುದಾನ, ಈಗ ಯಾವ ರೀತಿ ಕಡಿಮೆಯಾಗಿದೆ, ಯೋಜನೆಗಳು ಯಾವ ರೀತಿ ಹಳ್ಳ ಹಿಡಿದಿವೆ, ವಿದ್ಯಾರ್ಥಿ ವೇತನ ನಿಂತಿದೆ ಎಂಬುದನ್ನು ಗಮನಿಸಬೇಕು. ಈ ಅನ್ಯಾಯವನ್ನು ಕೇಳುವ ಕೆಲಸ ಮಾಡಬೇಕಿದೆ. ವಿರೋಧ ಪಕ್ಷವಾಗಿ ನಾವು ನಮ್ಮ ಕೆಲಸ ಮಾಡುತ್ತೇವೆ ಎಂದರು.

ಸಿ.ಎಂ. ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷದಿಂದ ಕಾಲು ಹೊರಗಿಟ್ಟಿರುವುದಾಗಿ ಹೇಳಿಕೆ ನೀಡಿದ್ದು, ಅಲ್ಪಸಂಖ್ಯಾತರಲ್ಲೇ ಹಲವು ಗುಂಪುಗಳಾಗಿವೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಸಿ.ಎಂ ಇಬ್ರಾಹಿಂ ಅವರು ಕಾಲು ಹೊರಗಿಟ್ಟಿದ್ದಾರೋ, ಇಲ್ಲವೋ ಅದು ಅವರ ವೈಯಕ್ತಿಕ ನಿರ್ಧಾರ. ನಾವು ಅದನ್ನು ಪ್ರಶ್ನಿಸುವುದಿಲ್ಲ. ನಾವು ಎಲ್ಲರನ್ನು ಜತೆಗೂಡಿಸುವ ಕೆಲಸ ಮಾಡುತ್ತೇವೆ. ಸದ್ಯ ಪಕ್ಷದಲ್ಲಿ ನಾವು ಎಲ್ಲರೂ ಜತೆಯಾಗಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ತಮ್ಮ ಅಭಿಪ್ರಾಯ, ಅಸಮಾಧಾನ ಹೊರಹಾಕಬಹುದು.

ಪಕ್ಷದಲ್ಲಿ ಅಲ್ಪಸಂಖ್ಯಾತರ ವಿಚಾರವಾಗಿ ತಿರ್ಮಾನ ಕೈಗೊಳ್ಳಲು ಅದಕ್ಕೆ ಆದ ಘಟಕವಿದೆ. ನಾವು ಇಬ್ರಾಹಿಂ ಅವರ ಜತೆ ಮಾತನಾಡುತ್ತಿದ್ದೇವೆ. ಜಬ್ಬಾರ್ ಅವರು ಕೂಡ ಅವರ ಜತೆ ಮಾತನಾಡುತ್ತಿದ್ದಾರೆ. ಸಿ.ಎಂ ಇಬ್ರಾಹಿಂ ಅವರು ಕೂಡ ನಮ್ಮ ನಾಯಕರು. ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಅನ್ಯಾಯವಾಗಿಲ್ಲ.

ನಮಗೆ ನ್ಯಾಯಯುತವಾಗಿ ಸಿಗಬೇಕಾದ ಎಲ್ಲ ನ್ಯಾಯವೂ ಸಿಗುತ್ತಿದೆ. ಅಲ್ಪಸಂಖ್ಯಾತರಿಗೆ ಸರಿಯಾಗಿ ನ್ಯಾಯ ಸಿಗುತ್ತಿರುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ನಾನು ಇಲ್ಲಿ ಶಾಸಕನಾಗಿ ಕೂತಿರುವುದಕ್ಕೆ ಕಾರಣ ಕಾಂಗ್ರೆಸ್. ಒಬ್ಬೊಬ್ಬ ನಾಯಕರು ತಮ್ಮ ಅಭಿಪ್ರಾಯವನ್ನು ಹೇಳಿರಬಹುದು. ಪಕ್ಷದ ವಿಚಾರ ಬಂದರೆ ನಾವೆಲ್ಲರೂ ಜತೆಯಾಗಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com