ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 13-15 ಸ್ಥಾನ ಗೆಲ್ಲುವ ಗುರಿ ಹೊಂದಿದೆ: ಮಹೇಶ್ ತೆಂಗಿನಕಾಯಿ

ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 13-15 ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಅವರು ಬುಧವಾರ ಹೇಳಿದ್ದಾರೆ.
ಮಹೇಶ್ ತೆಂಗಿನಕಾಯಿ
ಮಹೇಶ್ ತೆಂಗಿನಕಾಯಿ

ಚಿತ್ರದುರ್ಗ: ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 13-15 ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಅವರು ಬುಧವಾರ ಹೇಳಿದ್ದಾರೆ.

ವಿಧಾನ ಪರಿಷತ್ ಚುನಾವಣೆಗೆ ಡಿಸೆಂಬರ್ 10 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯ ತಳಮಟ್ಟದ ಕಾರ್ಯಕರ್ತರೂ ಆಗಿರುವ 45 ಸಾವಿರ ಗ್ರಾಮ ಪಂಚಾಯಿತಿ ಸದಸ್ಯರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ಖಾತ್ರಿ ಪಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಚುನಾವಣೆ ಬೆನ್ನಲ್ಲೇ ಪ್ರಚಾರಕ್ಕೆ ಬಿಜೆಪಿ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಇದಕ್ಕಾಗಿ ಜನಸ್ವರಾಜ್ ಯಾತ್ರೆಯನ್ನು ಹಮ್ಮಿಕೊಂಡಿದೆ. ಶಾಸಕ ಜಗದೀಶ್ ಶೆಟ್ಟರ್ ನೇತೃತ್ವದ ಯಾತ್ರೆ ಇದೇ 18ರಂದು ಚಿತ್ರದುರ್ಗ ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದಾರೆಂದು ಮಾಹಿತಿ ನೀಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದ ತಂಡ ಕಲ್ಯಾಣ ಕರ್ನಾಟಕ, ಶಾಸಕ ಬಿ.ಎಸ್.ಯಡಿಯೂರಪ್ಪ ನೇತೃತ್ವದ ತಂಡ ಉತ್ತರ ಕರ್ನಾಟಕದಲ್ಲಿ ಸಂಚರಿಸಲಿದೆ. ಕೆ.ಎಸ್.ಈಶ್ವರಪ್ಪ ಸಾರಥ್ಯದ ತಂಡ ಮಲೆನಾಡು, ಕರಾವಳಿ ಹಾಗೂ ಹಳೆ ಮೈಸೂರು ಭಾಗದಲ್ಲಿ ಪ್ರವಾಸ ಮಾಡಲಿದೆ.

‘ಜಗದೀಶ ಶಟ್ಟರ್‌ ನೇತೃತ್ವದ ತಂಡ ನ.18ರಂದು ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಪ್ರವಾಸ ಮಾಡಲಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಬಿ.ವೈ.ವಿಜಯೇಂದ್ರ ಸೇರಿ ಅನೇಕರು ತಂಡದಲ್ಲಿ ಇರಲಿದ್ದಾರೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಾತ್ರೆ ಸಾಗಲಿದೆ’ ಎಂದು ವಿವರಿಸಿದರು.

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ನಡೆದಿದೆ. ವಿಶೇಷ ಅಭಿಯಾನದ ರೀತಿಯಲ್ಲಿ ಚುನಾವಣೆ ಪ್ರಚಾರ ಕೈಗೊಳ್ಳಲು ನಿರ್ಧರಿಸಲಾಗಿದೆ. ಬಿಜೆಪಿ ಬೆಂಬಲಿತ ಸುಮಾರು 45 ಸಾವಿರ ಗ್ರಾಮ ಪಂಚಾಯಿತಿ ಸದಸ್ಯರು ರಾಜ್ಯದಲ್ಲಿ ಇದ್ದಾರೆ. ರಾಜಕೀಯವನ್ನು ಹೊಸ ದಿಕ್ಕಿಗೆ ಕೊಂಡೊಯ್ಯಲು ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.

ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ಈವರೆಗೆ ಆರು ಸ್ಥಾನಗಳನ್ನು ಮಾತ್ರ ಬಿಜೆಪಿ ಹೊಂದಿತ್ತು. ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಲಾಗಿದ್ದು, 13ರಿಂದ 15 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಲಾಗಿದೆ. ಇಷ್ಟು ಸ್ಥಾನಗಳಲ್ಲಿ ಬಿಜೆಪಿ ಖಂಡಿತವಾಗಿ ಗೆಲುವು ಸಾಧಿಸಲಿದೆ ಎಂದಿದ್ದಾರೆ.

ಚುನಾವಣೆಯ ಅಂಗವಾಗಿ ಪಕ್ಷದ ಐದು ತಂಡಗಳು ಈಗಾಗಲೇ ರಾಜ್ಯದಲ್ಲಿ ಸಂಚರಿಸಿವೆ. ಶಾಸಕರು, ಸಂಸದರ ಅಭಿಪ್ರಾಯಗಳನ್ನು ಸಂಗ್ರಹಿಸಿವೆ. ಈ ವರದಿಯ ಬಗ್ಗೆ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆ ನಡೆದಿದೆ. ಹೈಕಮಾಂಡ್‌ಗೆ ಪಟ್ಟಿ ರವಾನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com