ಬಿಟ್ ಕಾಯಿನ್ ಹಗರಣ: ಬಿಜೆಪಿ, ಕಾಂಗ್ರೆಸ್ ಪರಸ್ಪರ ಕೆಸರೆರಚಾಟ

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಾಯಕರ ನಡುವೆ ವಾಗ್ದಾಳಿಗಳು ಮುಂದುವರೆದಿದ್ದು, ಕಮಲ ಪಾಳಯದ ನಾಯಕರು ಇಬ್ಬರು ಕಾಂಗ್ರೆಸ್ ನಾಯಕರ ಪುತ್ರರು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಾಯಕರ ನಡುವೆ ವಾಗ್ದಾಳಿಗಳು ಮುಂದುವರೆದಿದ್ದು, ಕಮಲ ಪಾಳಯದ ನಾಯಕರು ಇಬ್ಬರು ಕಾಂಗ್ರೆಸ್ ನಾಯಕರ ಪುತ್ರರು ಆರೋಪಿ ಹ್ಯಾಕರ್ ಶ್ರೀಕೃಷ್ಣ, ಅಲಿಯಾಸ್ ಶ್ರೀಕಿಯೊಂದಿಗೆ ನಂಟು ಹೊಂದಿದ್ದಾರೆಂದು ಆರೋಪಿಸಿದ್ದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರನನ್ನು ಹಗರಣಕ್ಕೆ ಎಳೆದು ತಂದಿರುವ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಗರಣ ಕುರಿತು ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ನಿಮ್ಮ ಸರ್ಕಾರ ಇದ್ದಾಗ ಹ್ಯಾಕರ್ ಶ್ರೀಕಿಯನ್ನು ಏಕೆ ಬಂಧಿಸಲಿಲ್ಲ? ಆಗ ನಿಮಗೆ ಧಮ್ ಇರಲಿಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.

ನಮಗೆ ಧಮ್ ಇದ್ದಿದ್ದಕ್ಕೇ ಶ್ರೀಕಿಯನ್ನು ಬಂಧಿಸಿ ತನಿಖೆ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯುಬಿ ಸಿಟಿ ಕೆಫೆ ಗಲಾಟೆ ವೇಳೆ ಕಾಂಗ್ರೆಸ್ ಶಾಸಕರ ಮಗನ ಜೊತೆಗೆ ಈ ಹ್ಯಾಕರ್ ಶ್ರೀಕಿ ಸಿಕ್ಕಿಬಿದ್ದಾಗ ಚಾರ್ಜ್ ಶೀಟ್ ಹಾಕಿದರೂ ಏಕೆ ತನಿಖೆ ಮಾಡಲಿಲ್ಲ? ಕಾಂಗ್ರೆಸ್'ನ ಯಾವ ನಾಯಕನ ಜೊತೆಗೆ ಶ್ರೀಕಿಗೆ ಸಂಪರ್ಕವಿದ್ದು ಎಂದು ಹರಿಹಾಯ್ದಿದ್ದಾರೆ.

ಕಾಂಗ್ರೆಸ್ಸಿನ ಮಾಜಿ ಸಚಿವರ ಪುತ್ರನ ಜೊತೆಗೆ ಡ್ರಗ್ಸ್ ಪ್ರಕರಣದಲ್ಲಿ ಈ ಶ್ರೀಕಿ ಸಿಕ್ಕಿ ಬಿದ್ದಾಗ ಆತ ಹ್ಯಾಕರ್ ಎನ್ನುವುದು ಗೊತ್ತಾಯಿತು. ಮಾಜಿ ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆಗೆ ಎಲ್ಲವೂ ಗೊತ್ತಿದ್ದರೂ, ಏಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದ್ದಾರೆ.

ಉನ್ನತ ಶಿಕ್ಷಣ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಮಾತನಾಡಿ, ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರೀಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಕಾಂಗ್ರೆಸ್ ನ ಮಾಜಿ ಶಾಸಕ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

“ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಲಪಾಡ್ ಬೆಂಗಳೂರಿನ ಯುಬಿ ಸಿಟಿಯಲ್ಲಿ ಜಗಳದಲ್ಲಿ ಭಾಗಿಯಾಗಿದ್ದ. ಇದರಲ್ಲಿ ಶ್ರೀಕಿ ಕೂಡ ಭಾಗಿಯಾಗಿದ್ದ. ನಂತರ ಬಿಟ್‌ಕಾಯಿನ್ ಹಗರಣ ಬಯಲಾದಾಗ ಶ್ರೀಕಿ ನಲಪಾಡ್ ಮತ್ತು ದರ್ಶನ್ ಹೆಸರನ್ನು ಬಾಯ್ಬಿಟ್ಟಿದ್ದ. ಈ ಬಗ್ಗೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಬಹುದೇ? ಗುಡುಗಿದ್ದಾರೆ.

ಬಿಜೆಪಿ ರಾಜ್ಯ ವಕ್ತಾರ ಎಂ ಜಿ ಮಹೇಶ್ ಅವರು ಮಾತನಾಡಿ, ಹಗರಣದಲ್ಲಿ ಭಾಗಿಯಾಗಿರುವ ರಾಜಕಾರಣಿಗಳ ಮಕ್ಕಳ ವಿವರಗಳಿದ್ದರೆ ಬಹಿರಂಗಪಡಿಸಲಿ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.

ಇಬ್ಬರು ಕಾಂಗ್ರೆಸ್ ನಾಯಕರ ಪುತ್ರರು ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ಇದೇ ವೇಳೆ ಆರೋಪಿಸಿದ ಮಹೇಶ್ ಅವರು. “ನಾವು ಈ ಆರೋಪಗಳನ್ನು ಮಾಡುತ್ತಿಲ್ಲ. ಇದನ್ನು ಪ್ರಮುಖ ಆರೋಪಿಯೇ ಸಿಸಿಬಿ ಮುಂದೆ ಹೇಳಿದ್ದಾರೆ. ರಫೇಲ್ ಒಪ್ಪಂದದಂತೆಯೇ ಬಿಟ್‌ಕಾಯಿನ್ ಹಗರಣದ ತನಿಖೆಯು ಕಾಂಗ್ರೆಸ್ ಮುಖವಾಡವನ್ನು ಬಹಿರಂಗಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಕೂಡ ಇದೇ ರೀತಿಯ ಆರೋಪ ಮಾಡಿದ್ದಾರೆ. "ತಾಯಿ-ಮಗನ ಜೋಡಿ ಕೈವಾಡವನ್ನು ಬಹಿರಂಗಪಡಿಸಿದ ರಫೇಲ್ ತನಿಖೆಯಂತೆಯೇ ಇದರ ತನಿಖೆ ಕೂಡ ಕಾಂಗ್ರೆಸ್ ನಾಯಕರ ಹಗರಣವನ್ನು ಬಹಿರಂಗಪಡಿಸಲಿದೆ ಎಂದು ಹೇಳಿದ್ದಾರೆ.

ಪರೋಕ್ಷವಾಗಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಐಟಿ/ಬಿಟಿ ಸಚಿವರಾಗಿದ್ದವನ್ನು ವಿಚಾರಣೆಗೊಳಪಡಿಸಿದರೆ ಸತ್ಯಾಸತ್ಯತೆಗಳು ಬಹಿರಂಗಗೊಳ್ಳಳಿದೆ ಎಂದು ಹೇಳಿದ್ದಾರೆ.

ಜಗದೀಶ್ ಶೆಟ್ಟರ್ ಅವರು ಮಾತನಾಡಿ, ರಾಜಕಾರಣ ಮಾಡುವ ಸಲುವಾಗಿ ಕಾಂಗ್ರೆಸ್ ಈ ರೀತಿ ಆರೋಪ ಸರಿಯಲ್ಲ. ಸರಿಯಾದ ದಾಖಲೆಗಳಿದ್ದರೆ ಬಿಡುಗಡೆ ಮಾಡಿ. ಯಾರೋ ಮಾಡ್ತಾರೆ ಎನ್ನುವ ಸಲುವಾಗಿ, ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ. ಚಾರ್ಜ್ ಶೀರ್ಟ್‍ನಲ್ಲಿ ಕಾಂಗ್ರೆಸ್ ನಾಯಕರ ಹೆಸರು ಬೆಳಕಿಗೆ ಬಂದಿದೆ ಎಂದು ದೂರಿದರು.

ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವುದೇ ಅವಸರವಿಲ್ಲ. ಕಾಂಗ್ರೆಸ್ ಮುಖಂಡರು ತಮ್ಮ ಬಳಿ ಸಾಕ್ಷಿ, ಪುರಾವೆ ಇದ್ದರೆ ಹಾಜರು ಪಡಿಸಬೇಕು. ಬೇರೆ ಬೇರೆ ಸರಕಾರ ಇದ್ದಾಗಲೂ ಸಿಬಿಐನಿಂದ ಸಾಕಷ್ಟು ಕೇಸ್‍ಗಳ ತನಿಖೆ ಆಗಿವೆ. ಕೇಂದ್ರ ಮತ್ತು ರಾಜ್ಯ ಸರಕಾರದ ನಡುವೆ ಪತ್ರ ವ್ಯವಹಾರ ಇರುತ್ತದೆ. ಅದನ್ನೇ ಇಟ್ಟುಕೊಂಡು ನೀವು ಆರೋಪ ಮಾಡುವುದು ಶೋಭೆಯಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ಎಲ್ಲವನ್ನು ಸಂಶಯದ ದೃಷ್ಟಿಯಿಂದಲೇ ನೋಡುವುದು ಸಲ್ಲ. ಆಧಾರ ರಹಿತ ಆರೋಪ ಮಾಡುವ ಕಾಂಗ್ರೆಸ್ ಬೇಜವಾಬ್ದಾರಿ ಪಕ್ಷ ಎಂದು ಗೊತ್ತಾಗುತ್ತದೆ ಎಂದ ಅವರು, ಮುಖ್ಯಮಂತ್ರಿ ಬೊಮ್ಮಾಯಿ ಅವರು ದಿಲ್ಲಿಗೆ ಬಿಟ್ ಕಾಯಿನ್ ಸಲುವಾಗಿ ಹೋಗಿಲ್ಲ. ಬದಲಿಗೆ ರಾಜ್ಯದ ನೀರಾವರಿ ಯೋಜನೆಗಳನ್ನು ಚರ್ಚೆ ಮಾಡಲು ದಿಲ್ಲಿಗೆ ಹೋಗಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ತಮ್ಮ ವಿರುದ್ಧ ಕೇಳಿ ಬರುತ್ತಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸದ ಹಳೆಯ ಪ್ರಕರಣವನ್ನು ಮತ್ತೆ ತೆರೆಯುವ ಮೂಲಕ ಕಾಂಗ್ರೆಸ್‌ನ ವರ್ಚಸ್ಸನ್ನು ಹಾಳು ಮಾಡಲು ಬಿಜೆಪಿ ಸಂಚು ಮಾಡುತ್ತಿದೆ ಎಂದಿದ್ದಾರೆ.

ಬಿಜೆಪಿ ನಾಯಕರ ರಕ್ಷಣೆಗಾಗಿ ಕಾಂಗ್ರೆಸ್ ನಾಯಕರನ್ನು ಪ್ರಕರಣದ ತನಿಖೆಯಲ್ಲಿ ಸಿಲುಕಿಸಲು ಯತ್ನಗಳು ನಡೆಯುತ್ತಿವೆ. ನಲಪಾಡ್ ಹಾಗೂ ದರ್ಶನ್ ಶ್ರೀಕಿಗೆ ಸ್ನೇಹಿತರಾಗಿದ್ದರು ಎಂಬ ಒಂದೇ ಕಾರಣವನ್ನಿಟ್ಟಕೊಂಡು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ತಮ್ಮ ಪಕ್ಷದ ನಾಯಕರೇ ಹಗರಣದಲ್ಲಿ ಪಾಲ್ಗೊಂಡಿದ್ದಾರೆಂದು ಬಿಜೆಪಿ ನಾಯಕರೇ ಮಾತನಾಡಿಕೊಳ್ಳುತ್ತಿದ್ದಾರೆಂದು ತಿಳಿಸಿದ್ದಾರೆ.

ಈ ನಡುವೆ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿರುವ ನಲಪಾಡ್, ಶ್ರೀಕಿ ನನಗೆ ಗೊತ್ತಿರುವ ವ್ಯಕ್ತಿಯಾಗಿದ್ದ. ಆದರೆ, ಆತ ಹ್ಯಾಕರ್ ಎಂಬುದು ನನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

ರುದ್ರಪ್ಪ ಲಮಣಿಯವರೂ ಮಾತನಾಡಿ, ಹಗರಣಕ್ಕೂ ತಮ್ಮ ಪುತ್ರ ದರ್ಶನ್'ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com