ಪಿತೂರಿಗಳನ್ನು ಹಿಮ್ಮೆಟ್ಟಿಸಿ; ಜೆಡಿಎಸ್ ಭದ್ರಕೋಟೆ ಮಂಡ್ಯವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು: ಎಚ್.ಡಿ.ಕೆ

ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ಬಗ್ಗೆ ರಾಜಿ ಇಲ್ಲ. ಎಲ್ಲ ಮುಖಂಡರು ಒಟ್ಟಾಗಿ ಪಕ್ಷವನ್ನು ಕಟ್ಟಲು ಶ್ರಮಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಡಕ್ ಸೂಚನೆ ನೀಡಿದರು.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ಬಗ್ಗೆ ರಾಜಿ ಇಲ್ಲ. ಎಲ್ಲ ಮುಖಂಡರು ಒಟ್ಟಾಗಿ ಪಕ್ಷವನ್ನು ಕಟ್ಟಲು ಶ್ರಮಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಡಕ್ ಸೂಚನೆ ನೀಡಿದರು.

ಜನತಾಪರ್ವ 1.0 ಎರಡನೇ ಹಂತ ‘ಜನತಾ ಸಂಗಮ'ದ ಐದನೇ ದಿನ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಪಕ್ಷದ ಅಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು ಹಾಗೂ ಮುಂದಿನ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳ ಜತೆ ಸಮಾಲೋಚನೆ ನಡೆಸಿದ ಅವರು, ಪಕ್ಷದ ಸಂಘಟನೆ ಬಗ್ಗೆ ಯಾರೂ ಮೈಮರೆಯಬಾರದು. ಪಕ್ಷವನ್ನು ಉಪೇಕ್ಷೆ ಮಾಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮುಂಬರುವ ಸ್ಥಳೀಯ ಸಂಸ್ಥೆ ಹಾಗೂ 2023ರ ವಿಧಾನಸಭೆ ಚುನಾವಣೆ ಗುರಿ ಇಟ್ಟುಕೊಂಡು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪಕ್ಷವನ್ನು ಗಟ್ಟಿಯಾಗಿ ಕಟ್ಟಬೇಕು. ತಳಮಟ್ಟದಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ನಿಷ್ಠೆಯಿಂದ ದುಡಿಯಬೇಕು ಎಂದು ಕುಮಾರಸ್ವಾಮಿ ತಾಕೀತು ಮಾಡಿದರು.

ಮುಖಂಡರಿಗೆ ಒಗ್ಗಟ್ಟಿನ ಮಂತ್ರ ಬೋಧಿಸಿದ ಕುಮಾರಸ್ವಾಮಿ, ಪಕ್ಷದ ಕೆಲಸ ಮಾಡುವಾಗ ಎಲ್ಲರೂ ಒಂದೇ ಗುರಿಯೊಂದಿಗೆ ಕೆಲಸ ಮಾಡಬೇಕು. ಭಿನ್ನಾಭಿಪ್ರಾಯಕ್ಕೆ ಅವಕಾಶ ಇರಬಾರದು. ಸುಖಾಸುಮ್ಮನೆ ಇತರರಿಗೆ ಆಹಾರ ಆಗಬಾರದು ಎಂದು ಅವರು ಕಿವಿಮಾತು ಹೇಳಿದರು.

ಬೆಳಗ್ಗೆಯೇ ಮಂಡ್ಯ ಜಿಲ್ಲೆಯ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ. ಯಾವುದೇ ಕಾರಣಕ್ಕೂ ನಮ್ಮ ನೆಲೆ ಕಳೆದುಕೊಳ್ಳಬಾರದು. ಅದಕ್ಕೆ ಅಗತ್ಯವಾದ ರೀತಿಯಲ್ಲಿ ಸಂಘಟನೆಯನ್ನು ಗಟ್ಟಿ ಮಾಡಬೇಕು. ಪಕ್ಷದ ವಿರುದ್ಧ ನಡೆಯುತ್ತಿರುವ ಪಿತೂರಿಗಳನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸಬೇಕು ಎಂದು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ನಾನು ಕೂಡ ನಿರಂತರವಾಗಿ ಪ್ರವಾಸ ಮಾಡುತ್ತೇನೆ. ಹಳ್ಳಿಗಳಿಗೂ ಭೇಟಿ ನೀಡುತ್ತೇನೆ. ಜನರ ಸಮಸ್ಯೆಗಳಿಗೆ ಎಲ್ಲರೂ ಸ್ಪಂದಿಸಿ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಯತ್ನ ಮಾಡಬೇಕು. ಜನರ ಪರ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಸಲಹೆ ಮಾಡಿದರು.

ಇದಾದ ಮೇಲೆ ಮೈಸೂರು, ಚಾಮರಾಜನಗರ ಜಿಲ್ಲೆಗಳ ಮುಖಂಡರ ಜತೆಗಿನ ಚರ್ಚೆಯಲ್ಲಿಯೂ ಇದೇ ಮಾತುಗಳನ್ನು ಪುನರುಚ್ಚರಿಸಿದರಲ್ಲದೇ, ನಮ್ಮ ಪಕ್ಷದ ಸರಕಾರಗಳು ಕೊಟ್ಟಿರುವ ಕೊಡುಗೆಗಳನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕು. ಅಲ್ಲದೆ, ಪಕ್ಷದ ಭವಿಷ್ಯದ ಕಾರ್ಯಕ್ರಮಗಳಾದ ಪಂಚರತ್ನ ಮತ್ತಿತರೆ ಅಂಶಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು ಎಂದು ಮುಖಂಡರಿಗೆ ಅವರು ಸೂಚಿಸಿದರು.

ಕಾರ್ಯಾಗಾರದಲ್ಲಿ ಮಾಜಿ ಸಚಿವ ಪುಟ್ಟರಾಜು, ಪಕ್ಷದ ಹಿರಿಯ ಮುಖಂಡ ಎಲ್.ಆರ್.ಶಿವರಾಮೇಗೌಡ, ಶಾಸಕರಾದ ಸುರೇಶ್ ಗೌಡ, ಅನ್ನದಾನಿ, ಅಪ್ಪಾಜಿ ಗೌಡ, ಅಶ್ವಿನ್, ಮಹಾದೇವ್, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಂಡ್ಯ ಜಿಲ್ಲಾಧ್ಯಕ್ಷ ರಮೇಶ್, ಮೈಸೂರು ಜಿಲ್ಲಾಧ್ಯಕ್ಷ ನರಸಿಂಹ ಸ್ವಾಮಿ, ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಮಂಜುನಾಥ್, ಮೈಸೂರು ನಗರ ಅಧ್ಯಕ್ಷೆ ಪ್ರೇಮಾ ಮುಂತಾದವರು ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com